Samantha Ruth Prabhu: ಮತ್ತೆ ರಾಜ್-ಡಿಕೆ ಜೊತೆ ಸಮಂತಾ, ಕಳೆದ ಬಾರಿಗಿಂತಲೂ ಈ ಬಾರಿ ‘ವೈಲ್ಡ್’
Samantha Ruth Prabhu: ಬಹುತೇಕ ಒಂದು ವರ್ಷದ ಬಿಡುವಿನ ಬಳಿಕ ನಟಿ ಸಮಂತಾ ಋತ್ ಪ್ರಭು ಚಿತ್ರೀಕರಣಕ್ಕೆ ಮರಳಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದ ‘ದಿ ಫ್ಯಾಮಿಲಿ ಮ್ಯಾನ್’ ನಲ್ಲಿ ವೈಲ್ಡ್ ಆಗಿ ನಟಿಸಿದ್ದ ಸಮಂತಾ ಹೊಸ ಅವರದ್ದೇ ನಿರ್ಮಾಣದ ಹೊಸ ವೆಬ್ ಸರಣಿಯಲ್ಲಿ ಇನ್ನಷ್ಟು ವೈಲ್ಡ್ ಆಗಲಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ನಟಿ ಸಮಂತಾ ತಮ್ಮನ್ನು ತಾವು ಭಿನ್ನ ಕತೆಗಳಿಗೆ ಒಪ್ಪಿಸಿಕೊಳ್ಳುತ್ತಿದ್ದಾರೆ. ಮರ ಸುತ್ತುವ ನಾಯಕಿಯ ಪಾತ್ರಗಳಿಗೆ ಭಿನ್ನವಾಗಿ ಅಭಿನಯ ಬೇಡುವ, ನಿರೂಪಣೆ, ಕತೆಯಲ್ಲಿಯೂ ಭಿನ್ನವಾಗಿರುವ ಪಾತ್ರಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಚ್ಛೇದನದ ಬಳಿಕ ಸಮಂತಾರ ಸಿನಿಮಾ ಆಯ್ಕೆಯ ವಿಧಾನ ಸಂಪೂರ್ಣ ಬದಲಾಗಿದೆ. ಸಮಂತಾ ತಮ್ಮ ಅಭಿನಯ ಪ್ರತಿಭೆಯನ್ನು ಒರೆಗೆ ಹಚ್ಚುವ ಪಾತ್ರಗಳತ್ತಲೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿಚ್ಛೇದನಕ್ಕೆ ಮುಂಚೆ ಸಮಂತಾ, ರಾಜ್ ಮತ್ತು ಡಿಕೆಯ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ವಿಲನ್ ಆಗಿ ಸಖತ್ ಮಿಂಚಿದ್ದರು. ತಮಿಳು ನಕ್ಸಲೈಟ್ ಪಾತ್ರದಲ್ಲಿ ಸಮಂತಾ, ಬೋಲ್ಡ್ ಮತ್ತು ವೈಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಅದಕ್ಕಿಂತಲೂ ವೈಲ್ಡ್ ಆದ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್’ ಅನ್ನು ರಾಜ್ ಮತ್ತು ಡಿಕೆ ಜೋಡಿ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಾ ಬರುತ್ತಿದೆ. ಇದೀಗ ಅದೇ ರಾಜ್ ಮತ್ತು ಡಿಕೆ ‘ರಕ್ತ್ ಬ್ರಹ್ಮಾಂಡ್’ ಹೆಸರಿನ ಹಿಂದಿ ವೆಬ್ ಸರಣಿ ನಿರ್ಮಿಸಲು ಮುಂದಾಗಿದ್ದು, ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ವಿಶೇಷವೆಂದರೆ ಕಲ್ಟ್ ಕ್ಲಾಸಿಕ್ ಸಿನಿಮಾ ಮರಾಠಿಯ ‘ತುಂಬಾಡ್’ ನಿರ್ದೇಶನ ಮಾಡಿದ್ದ ರಾಹಿ ಅನಿಲ್ ಬರವೆ ಸಹ ನಿರ್ದೇಶನ ತಂಡದಲ್ಲಿದ್ದು, ‘ರಕ್ತ್ ಬ್ರಹ್ಮಾಂಡ್’ ಪೀರಿಯಡ್ ಥ್ರಿಲ್ಲರ್ ಆಗಿರಲಿದೆ.
ಈ ವೆಬ್ ಸರಣಿಯ ಕತೆ ಸ್ವಾತಂತ್ರ್ಯ ಭಾರತಕ್ಕೂ ಹಿಂದಿನ ಕತೆಯಾಗಿದ್ದು, ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಒಳಗೊಂಡಿರಲಿದೆ. ಈ ಥ್ರಿಲ್ಲರ್ ವೆಬ್ ಸರಣಿಯ ಆರು ಎಪಿಸೋಡ್ಗಳನ್ನಷ್ಟೆ ಮೊದಲಿಗೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬಹುತೇಕ ಚಿತ್ರೀಕರಣ ಸೆಟ್ನಲ್ಲಿಯೇ ನಡೆಯಲಿದೆ. ವೆಬ್ ಸರಣಿಯ ಚಿತ್ರೀಕರಣವನ್ನು ಶೀಘ್ರವೇ ಮುಗಿಸಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.
ಬಹುತಾರಾಗಣ ಇರುವ ವೆಬ್ ಸರಣಿ ಇದಾಗಿದ್ದು, ಸಮಂತಾ ಜೊತೆಗೆ ‘ಮಿರ್ಜಾಪುರ್’ ವೆಬ್ ಸರಣಿಯ ಗುಡ್ಡುಭಾಯ್ ಖ್ಯಾತಿಯ ಅಲಿ ಫಜಲ್ ಇದ್ದಾರೆ. ಬಾಲಿವುಡ್ನ ನಟ ಆದಿತ್ಯ ರಾಯ್ ಕಪೂರ್, ತೆಲುಗು, ತಮಿಳು, ಪಂಜಾಬಿ, ಹಿಂದಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ವಮಿಕಾ ಸಹ ಈ ಥ್ರಿಲ್ಲರ್ ಸರಣಿಯಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ:ಚಿತ್ರರಂಗದ ಬಗ್ಗೆ ಸಮಂತಾಗೆ ನಿರಾಸಕ್ತಿ; ಒಪ್ಪಿಕೊಂಡ ಸಿನಿಮಾದಿಂದ ಹೊರಕ್ಕೆ?
ಸಮಂತಾ ಕಳೆದ ಸುಮಾರು ಒಂದು ವರ್ಷದಿಂದ ಚಿತ್ರೀಕರಣಗಳಿಂದ ಬಿಡುವು ಪಡೆದಿದ್ದರು. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕುಂಠಿತವಾಗಿದ್ದರಿಂದ ಒತ್ತಡದ ಬದುಕಿನಿಂದ ವಿಶ್ರಾಂತಿ ಪಡೆದು, ಆರೋಗ್ಯ ಸುಧಾರಣೆ, ಧ್ಯಾನ, ಪ್ರವಾಸಗಳಲ್ಲಿ ಸಮಂತಾ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಸಮಂತಾ ಮತ್ತೆ ಸಿನಿಮಾಗಳಿಗೆ ಮರಳಿದ್ದಾರೆ. ‘ನಾ ಇಂಟಿ ಬಂಗಾರಂ’ ಹೆಸರಿನ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಈಗ ‘ರಕ್ತ್ ಬ್ರಹ್ಮಾಂಡ್’ ಥ್ರಿಲ್ಲರ್ ಸರಣಿಯನ್ನು ಒಪ್ಪಿಕೊಂಡಿದ್ದಾರೆ. ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ‘ಸಿಟಾಡೆಲ್’ ವೆಬ್ ಸರಣಿಯ ಚಿತ್ರೀಕರಣ ಮುಗಿದು ವರ್ಷವೇ ಆಗಿದ್ದು ಇನ್ನೂ ಬಿಡುಗಡೆ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ