AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಐ’ ಒಟಿಟಿ ರಿಲೀಸ್ ಬಗ್ಗೆ ಸ್ಪಷ್ಟನೆ ಕೊಟ್ಟ ಚಿತ್ರತಂಡ

UI Movie: ‘ಯುಐ’ ಸಿನಿಮಾ ಕೆಲವೇ ದಿನಗಳಲ್ಲಿ ಸನ್ ನೆಕ್ಸ್ಟ್​​ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಭಾರಿ ಮೊತ್ತ ನೀಡಿ ಸನ್ ನೆಕ್ಸ್ಟ್​​ ಹಕ್ಕುಗಳನ್ನು ಖರೀದಿ ಮಾಡಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದಷ್ಟೆ ಹರಿದಾಡಿತ್ತು. ಆದರೆ ಆ ಸುದ್ದಿ ಸುಳ್ಳೆಂದು ಸಿನಿಮಾದ ನಿರ್ಮಾಪಕರು ಹೇಳಿದ್ದಾರೆ.

‘ಯುಐ’ ಒಟಿಟಿ ರಿಲೀಸ್ ಬಗ್ಗೆ ಸ್ಪಷ್ಟನೆ ಕೊಟ್ಟ ಚಿತ್ರತಂಡ
Ui Movie
ಮಂಜುನಾಥ ಸಿ.
|

Updated on: Jan 08, 2025 | 5:49 PM

Share

ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಬಿಡುಗಡೆ ಆದ ಮೊದಲ ವಾರ ಬಹಳ ಒಳ್ಳೆಯ ಕಲೆಕ್ಷನ್ ಅನ್ನೇ ‘ಯುಐ’ ಮಾಡಿತ್ತು. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಪರಭಾಷೆಗಳಲ್ಲಿಯೂ ನಿರೀಕ್ಷಿತ ಮಟ್ಟದ ಕಲೆಕ್ಷನ್ ಅನ್ನೇ ‘ಯುಐ’ ಮಾಡಿದೆ ಎನ್ನಲಾಗುತ್ತಿದೆ. ಭಾರಿ ದೊಡ್ಡ ಬ್ಲಾಕ್ ಬಸ್ಟರ್ ಆಗದೇ ಇದ್ದರೂ ಸಹ ನಿರೀಕ್ಷಿತ ಮಟ್ಟದ ಗಳಿಕೆಯನ್ನು ಈ ಸಿನಿಮಾ ಮಾಡಿದೆ ಎನ್ನಲಾಗುತ್ತಿದೆ.

ಸುದೀಪ್​ರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಬಳಿಕ ‘ಯುಐ’ ಸಿನಿಮಾದ ಗಳಿಕೆಯಲ್ಲಿ ಇಳಿಮುಖ ಕಂಡುಬಂತು. ಅದಾದ ಕೆಲವೇ ದಿನಗಳಿಗೆ ‘ಯುಐ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ದಕ್ಷಿಣ ಭಾರತದ ವಿಶೇಷವಾಗಿ ತಮಿಳು ಹಾಗೂ ತೆಲುಗಿನಲ್ಲಿ ಜನಪ್ರಿಯವಾಗಿರುವ ಸನ್ ನೆಕ್ಸ್ಟ್​​ ಒಟಿಟಿಯಲ್ಲಿ ‘ಯುಐ’ ಸಿನಿಮಾ ಜನವರಿ ಎರಡನೇ ವಾರಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಉಪೇಂದ್ರ ಸುದೀಪ್ ನಟನೆಯ ‘ಮುಕುಂದ-ಮುರಾರಿ’ ಸಿನಿಮಾ ಇದೇ ಸನ್ ನೆಕ್ಸ್ಟ್​ ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿತ್ತು. ಹಾಗಾಗಿ ಹೆಚ್ಚಿನ ಜನ ‘ಯುಐ’ ಸಿನಿಮಾ ಸನ್ ನೆಕ್ಸ್ಟ್​ನಲ್ಲಿ ಸ್ಟ್ರೀಮ್ ಆಗಲಿದೆ ಎಂದೇ ನಂಬಿದ್ದರು.

ಇದನ್ನೂ ಓದಿ:

ಆದರೆ ಇದೀಗ ‘ಯುಐ’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕೆಪಿ ಶ್ರೀಕಾಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶ್ರೀಕಾಂತ್ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಸನ್ ನೆಕ್ಸ್ಟ್​ನವರು ‘ಯುಐ’ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವುದನ್ನು ಗಮನಿಸಿದ್ದೇವೆ. ಆದರೆ ಇದು ಸುಳ್ಳು ಸುದ್ದಿ. ಸಿನಿಮಾದ ಒಟಿಟಿ ಹಕ್ಕು ಖರೀದಿ ಅಥವಾ ಬಿಡುಗಡೆ ಕುರಿತಾಗಿ ಚಿತ್ರತಂಡವೇ ಅಧಿಕೃತ ಹೇಳಿಕೆ ನೀಡಲಿದೆ ಆ ವರೆಗೆ ಯಾರೂ ಸಹ ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಅಧಿಕೃತ ಹೇಳಿಕೆಯನ್ನು ಚಿತ್ರತಂಡವೇ ಪ್ರಕಟಿಸಲಿದೆ’ ಎಂದಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಅಬ್ಬರದ ಕಾರಣಕ್ಕೆ ಹಲವು ಉಪೇಂದ್ರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ‘ಯುಐ’ ಸಿನಿಮಾವನ್ನು ಚಿತ್ರಮಂದಿರಲ್ಲಿ ನೋಡುವ ಅವಕಾಶ ತಪ್ಪಿ ಹೋಗಿತ್ತು. ಇದೇ ಕಾರಣಕ್ಕೆ ಹಲವರು ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ. ‘ಯುಐ’ ಸಿನಿಮಾವನ್ನು ಬಹಳ ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಲಹರಿ ವೇಲು ಮತ್ತು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ