ಕಳಪೆ ಪ್ರದರ್ಶನ ಸಮಂತಾ ಶೋ ರದ್ದು ಮಾಡಿದ ಅಮೆಜಾನ್ ಪ್ರೈಂ
Citadel: Honey Bunny: ಸಮಂತಾ ಹಾಗೂ ವರುಣ್ ಧವನ್ ನಟಿಸಿದ್ದ ‘ಸಿಟಾಡೆಲ್: ಹನಿ-ಬನಿ’ ವೆಬ್ ಸರಣಿಯನ್ನು ನಿಲ್ಲಿಸಿದೆ ಅಮೆಜಾನ್ ಪ್ರೈಂ. ಸಿಟಾಡೆಲ್ ಅನ್ನು ಇಂಗ್ಲೀಷ್, ಹಿಂದಿ ಹಾಗೂ ಇಟಲಿಯಲ್ಲಿ ಅಮೆಜಾನ್ ನಿರ್ಮಾಣ ಮಾಡಿತ್ತು. ಈಗ ಹಿಂದಿ ಹಾಗೂ ಇಟಾಲಿಯನ್ ಭಾಷೆಯ ಸಿಟಾಡೆಲ್ ಅನ್ನು ಕಳಪೆ ಪ್ರದರ್ಶನದ ಕಾರಣಕ್ಕೆ ನಿಲ್ಲಿಸಿದೆ. ಇಂಗ್ಲೀಷ್ ‘ಸಿಟಾಡೆಲ್’ ಎರಡನೇ ಭಾಗ ಬರುತ್ತಿದೆ.

ಸಮಂತಾ ಋತ್ ಪ್ರಭುಗೆ (Samantha Ruth Prabhu) ಈಗ ಸಿನಿಮಾಗಳಿಗಿಂತಲೂ ವೆಬ್ ಸರಣಿ ಆಫರ್ ಹೆಚ್ಚಾಗಿದೆ. ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯಲ್ಲಿ ಸಮಂತಾ ನೀಡಿದ ಅದ್ಭುತ ನಟನೆಯಿಂದಾಗಿ ಸಮಂತಾಗೆ ಬೇಡಿಕೆ ಹೆಚ್ಚಾಗಿದೆ. ‘ಫ್ಯಾಮಿಲಿ ಮ್ಯಾನ್’ ಬಳಿಕ ಸಮಂತಾ ಹಾಗೂ ಬಾಲಿವುಡ್ ಸ್ಟಾರ್ ನಟ ವರುಣ್ ಧವನ್ ಸೇರಿ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಯಲ್ಲಿ ನಟಿಸಿದರು. ಇದು ಪ್ರಿಯಾಂಕಾ ಚೋಪ್ರಾ ನಟಿಸಿದ್ದ ‘ಸಿಟಾಡೆಲ್’ನ ಸ್ಪಿನ್ ಆಫ್ ಶೋ ಆಗಿತ್ತು. ಆದರೆ ಈ ಶೋ ಈಗ ರದ್ದಾಗಿದೆ.
‘ಸಿಟಾಡೆಲ್’ ಅನ್ನು ಅಂತರಾಷ್ಟ್ರೀಯ ಮಟ್ಟದ ಸ್ಪೈ ವೆಬ್ ಸರಣಿ ಶೋ ಮಾಡಲು ಅಮೆಜಾನ್ ಪ್ರೈಂ ಮುಂದಾಗಿತ್ತು. ಮುಖ್ಯ ಶೋ ಆಗಿ ಪ್ರಿಯಾಂಕಾ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡನ್ ನಟಿಸಿರುವ ‘ಸಿಟಾಡೆಲ್’ ಅನ್ನು ಬಿಡುಗಡೆ ಮಾಡಿದ್ದ ಅಮೆಜಾನ್, ಅದರ ಅಂತರಾಷ್ಟ್ರೀಯ ಸ್ಪಿನ್ ಆಫ್ ಆಗಿ ಭಾರತದಲ್ಲಿ ಸಮಂತಾ-ವರುಣ್ ಧವನ್ ನಟನೆಯ ‘ಸಿಟಾಡೆಲ್: ಹನಿ-ಬನಿ’ ಹಾಗೂ ಇಟಲಿಯಲ್ಲಿ ‘ಸಿಟಾಡೆಲ್: ಡಯಾನ’ ಹೆಸರಿನ ಶೋ ಬಿಡುಗಡೆ ಮಾಡಿತ್ತು.
ಆದರೆ ಭಾರತ ಹಾಗೂ ಇಟಲಿಯಲ್ಲಿ ಬಿಡುಗಡೆ ಮಾಡಿದ ಎರಡೂ ‘ಸಿಟಾಡೆಲ್’ ಸರಣಿಗೆ ನಿರೀಕ್ಷಿತ ಮಟ್ಟದಲ್ಲಿ ವೀಕ್ಷಕರ ಪ್ರತಿಕ್ರಿಯೆ ಬಂದಿಲ್ಲವಂತೆ. ಭಾರತೀಯ ಸಿಟಾಡೆಲ್ ಹಾಗೂ ಇಟಲಿಯ ಶೋ ಎರಡೂ ಸಹ ಕಳಪೆ ವೀಕ್ಷಕರ ವೀಕ್ಷಣೆ ಗಳಿಸಿದ ಕಾರಣ ‘ಸಿಟಾಡೆಲ್’ ಅನ್ನು ಅಮೆಜಾನ್ ಅಂತ್ಯಗೊಳಿಸುತ್ತಿದೆ. ಈ ವೆಬ್ ಸರಣಿಗಳನ್ನು ಎಂಜಿಎಂ ಮತ್ತು ಅಮೆಜಾನ್ ಜಂಟಿಯಾಗಿ ನಿರ್ಮಿಸಿತ್ತು. ಆದರೆ ಈಗ ಈ ಎರಡನ್ನೂ ಅಂತ್ಯಗೊಳಿಸಿದೆ.
ಇದನ್ನೂ ಓದಿ:‘ಸಿಟಾಡೆಲ್: ಹನಿ ಬನಿ’ ಟ್ರೇಲರ್ನಲ್ಲಿ ಸಮಂತಾ, ವರುಣ್ ಧವನ್ ಆ್ಯಕ್ಷನ್ ಅಬ್ಬರ
ಆದರೆ ಪ್ರಿಯಾಂಕಾ ಚೋಪ್ರಾ ನಟಿಸಿದ್ದ ಇಂಗ್ಲೀಷ್ ‘ಸಿಟಾಡೆಲ್’ ಅನ್ನು ಮುಂದುವರೆಸುತ್ತಿದೆ. ‘ಸಿಟಾಡೆಲ್’ನ ಎರಡನೇ ಭಾಗ ಇದೇ ವರ್ಷ ಬಿಡುಗಡೆ ಆಗಬೇಕಿತ್ತು. ಆದರೆ ಅದು ಈಗ 2026ಕ್ಕೆ ಮುಂದೂಡಲಾಗಿದೆ. 2026ರ ಏಪ್ರಿಲ್ ತಿಂಗಳಲ್ಲಿ ‘ಸಿಟಾಡೆಲ್’ ಎರಡನೇ ಸರಣಿ ಬಿಡುಗಡೆ ಆಗಲಿದೆ.
ಸಮಂತಾ ನಟಿಸಿದ್ದ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಯನ್ನು ರಾಜ್ ಮತ್ತು ಡಿಕೆ ಅವರುಗಳು ನಿರ್ದೇಶನ ಮಾಡಿದ್ದರು. ಸಮಂತಾರ ಅನಾರೋಗ್ಯ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಈ ವೆಬ್ ಸರಣಿಯ ನಿರ್ಮಾಣ ಸುಮಾರು ಮೂರು ವರ್ಷ ಹಿಡಿಯಿತು. ಮೂರು ವರ್ಷಗಳ ಬಳಿಕ ಬಿಡುಗಡೆ ಆದರೂ ಸಹ ಈ ವೆಬ್ ಸರಣಿಗೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗಲಿಲ್ಲ. ಸಮಂತಾ ಈಗ ಹಾರರ್ ವೆಬ್ ಸರಣಿ ಒಂದರಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡುತ್ತಿದ್ದು, ‘ತುಂಬಾಡ್’ ಸಿನಿಮಾದ ನಿರ್ದೇಶಕರೇ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




