‘45’ ಸಿನಿಮಾ ಒಟಿಟಿ ರಿಲೀಸ್: ಜೀ5 ಮೂಲಕ ಜನವರಿ 23ರಿಂದ ಪ್ರಸಾರ ಶುರು

ಜನವರಿ 23ರಿಂದ ಜೀ5 ಒಟಿಟಿ ಮೂಲಕ ‘45’ ಸಿನಿಮಾ ಪ್ರಸಾರ ಆಗಲಿದೆ. ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ಈ ಸಿನಿಮಾಗೆ ಎಂ. ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿದ್ದಾರೆ.

‘45’ ಸಿನಿಮಾ ಒಟಿಟಿ ರಿಲೀಸ್: ಜೀ5 ಮೂಲಕ ಜನವರಿ 23ರಿಂದ ಪ್ರಸಾರ ಶುರು
45 Movie Poster

Updated on: Jan 15, 2026 | 8:26 PM

ವಿಶೇಷ ಕಥಾಹಂದರ ಇರುವ ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ ಮುಂತಾದವರು ನಟಿಸಿದ್ದಾರೆ. ಅವರ ಅಭಿಮಾನಿಗಳು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ್ದಾರೆ. ಈಗ ಈ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಜನವರಿ 23ರಿಂದ ‘ಜೀ5’ ಒಟಿಟಿ (Zee5 OTT) ಮೂಲಕ ಪ್ರಸಾರ ಆಗಲಿದೆ. ಚಿತ್ರಮಂದಿರಗಳಲ್ಲಿ ‘45’ ಸಿನಿಮಾವನ್ನು (45 Movie) ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಳಿತು ನೋಡಬಹುದು. ಬೇರೆ ಬೇರೆ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿದೆ. ಅರ್ಜುನ್ ಜನ್ಯ ಅವರು ‘45’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಅನೌನ್ಸ್ ಆದಾಗಿನಿಂದ ಬಿಡುಗಡೆ ತನಕ ‘45’ ಸಿನಿಮಾ ಒಂದಿಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿತ್ತು. ವಿಭಿನ್ನವಾದ ಕಥೆ ಇದೆ ಎಂಬ ಕಾರಣದಿಂದ ಫ್ಯಾನ್ಸ್ ಈ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಸಾಮಾನ್ಯ ಮನುಷ್ಯನ ಜೀವನದಲ್ಲಿ ಕೆಲವು ಸವಾಲುಗಳು ಎದುರಾದಾಗ ಏನಾಗುತ್ತದೆ? ನಂಬಿಕೆ ಹಾಗೂ ಭಯದ ನಡುವಿನ ಘರ್ಷಣೆ, ಸತ್ಯ ಹಾಗೂ ಮಿಥ್ಯ, ಒಳ್ಳೆಯದು ಹಾಗೂ ಕೆಟ್ಟದರ ನಡುವಿನ ಯುದ್ಧವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಉಪೇಂದ್ರ, ಶಿವರಾಜ್​ಕುಮಾರ್, ರಾಜ್ ಬಿ.‌ ಶೆಟ್ಟಿ ಜೊತೆಗೆ ಕೌಸ್ತುಭ ಮಣಿ, ಜಿಶು ಸೇನ್ ಗುಪ್ತಾ ಮುಂತಾದವರ ಕೂಡ ‘45’ ಸಿನಿಮಾದಲ್ಲಿ ನಟಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಇದು ಎಂಬುದು ವಿಶೇಷ. ಎಂ. ರಮೇಶ್ ರೆಡ್ಡಿ ಅವರು ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಜೀ5ನಲ್ಲಿ ‘45’ ಸಿನಿಮಾ ಬರುತ್ತಿರುವುದರ ಬಗ್ಗೆ ಶಿವರಾಜ್​ಕುಮಾರ್ ಮಾತಾಡಿದ್ದಾರೆ. ‘ಜೀವನದಲ್ಲಿ ನಾವು ಮಾಡುವ ಆಯ್ಕಗಳು, ನಿರ್ಧಾರಗಳು ಮತ್ತು ಅದರೊಂದಿಗೆ ಬರುವ‌ ಜವಾಬ್ದಾರಿಗಳನ್ನು ಒಟ್ಟಾಗಿ ಹೇಳುವುದಾದರೆ ನಮ್ಮ ಜೀವನವನ್ನು ಬಿಂಬಿಸುವ ಕಥೆ ಇದಾಗಿದೆ. ಜೀ5 ಜೊತೆ ನನ್ನ ಒಡನಾಟ ವಿಶೇಷವಾದದ್ದು. ಹೊಸ ಕಥೆಗಳಿಗೆ ಉತ್ತೇಜನ ನೀಡುವ ಈ ಡಿಜಿಟಲ್ ವೇದಿಕೆಯಲ್ಲಿ ನಮ್ಮ ಸಿನಿಮಾ ಪ್ರಸಾರ ಆಗುತ್ತಿರುವುದು ಸಂತೋಷ ತಂದಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘45’ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ

ನಟ ಉಪೇಂದ್ರ ಕೂಡ ಈ ಬಗ್ಗೆ ಹೇಳಿದ್ದಾರೆ. ‘ಈ ಚಿತ್ರವು ತಾತ್ವಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಮನರಂಜನಾತ್ಮಕವಾಗಿ ತೋರಿಸುತ್ತದೆ. ಹೊಸ ರೀತಿಯ ಕಥೆಗಳನ್ನು ಪ್ರೋತ್ಸಾಹಿಸುವ ಜೀ5 ಒಟಿಟಿ ಈ ಸಿನಿಮಾ ಪ್ರಸಾರ ಮಾಡುತ್ತಿರುವುದು ಸಂತಸದ ಸಂಗತಿ. ಈ ಸಿನಿಮಾ ಬರೀ ಮನರಂಜನೆ ಮಾತ್ರವಲ್ಲದೇ ಮೌಲ್ಯಗಳನ್ನು ತಿಳಿಸಿಕೊಡುತ್ತದೆ’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.