‘ಒನ್ ರೈಟ್ ಕಿಕ್’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ
ಮಂಗಳೂರು ಮೂಲದ ಬಾಲಚಂದಿರ್ ಅವರು ಈ ಕಿರುಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಸಾಕಷ್ಟು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನ ಕಂಡಿದೆ.
ಹೇಳುತ್ತಿರುವ ವಿಚಾರ ಅದೆಷ್ಟೇ ಚಿಕ್ಕದಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಜನರ ಮುಂದೆ ಇಟ್ಟರೆ ಅದನ್ನು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಹೊಸ ಉದಾಹರಣೆ ‘ಒನ್ ರೈಟ್ ಕಿಕ್’ ಹೆಸರಿನ ಶಾರ್ಟ್ ಸಿನಿಮಾ. ಮಂಗಳೂರು ಮೂಲದ ಬಾಲಚಂದಿರ್ ಮುತ್ತಪ್ಪ ನಿರ್ದೇಶನದ, ಸಿಂಹಿಕಾ ನಟನೆಯ ಈ ಕಿರುಚಿತ್ರ ಬರೋಬ್ಬರಿ 12 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ವಿಚಾರ ಇಡೀ ತಂಡಕ್ಕೆ ಖುಷಿ ತಂದಿದೆ. ಈ ಬಗ್ಗೆ ಸಿಂಹಿಕಾ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ಸಾಕಷ್ಟು ಹೆಣ್ಣುಮಕ್ಕಳು ಸಮಾಜಕ್ಕೆ ಹೆದರಿ ಬದುಕುತ್ತಿರುತ್ತಾರೆ. ಆದರೆ, ಭಯವನ್ನು ಮೀರಿ ಬದುಕಬೇಕು ಎಂಬ ಸಂದೇಶದೊಂದಿಗೆ ಈ ಕಿರುಚಿತ್ರವಿದೆ. ‘ಕಿರುಚಿತ್ರದಲ್ಲಿ ಬರುವ ಹೆಣ್ಣುಮಗಳು ಸೌಮ್ಯ ಸ್ವಭಾವದವಳು. ಅವಳು ಹೆದರುತ್ತಲೇ ಬದುಕುತ್ತಾಳೆ. ಆದರೆ, ಒಂದು ದಿನ ಅವಳು ಸಿಡಿದೇಳುತ್ತಾಳೆ. ನಂತರ ಎಲ್ಲವೂ ಬದಲಾಗುತ್ತದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವ ಥೀಮ್ನಲ್ಲಿ ಈ ಕಿರುಚಿತ್ರ ಮೂಡಿ ಬಂದಿದೆ. ಈ ಕಾರಣಕ್ಕೆ ಇಷ್ಟೊಂದು ಪ್ರಶಸ್ತಿ ಬಂದಿದೆ’ ಎನ್ನುತ್ತಾರೆ ಸಿಂಹಿಕಾ.
‘ನಾನು ಚಿಕ್ಕವಳಿದ್ದಾಗ ಸಾಕಷ್ಟು ಭಯಪಡುತ್ತಿದ್ದೆ. ಕಿರುಚಿತ್ರದಲ್ಲಿ ಬರುವ ಪಾತ್ರವೂ ಹಾಗೆಯೇ ಇದೆ. ಈ ಕಾರಣಕ್ಕೆ ನಾನು ಹೆಚ್ಚು ಕನೆಕ್ಟ್ ಆದೆ. ಈ ಶಾರ್ಟ್ ಸಿನಿಮಾ ಮಾಡಿದ್ದು ತುಂಬಾನೇ ಖುಷಿ ನೀಡಿದೆ. ಹೆಣ್ಣುಮಕ್ಕಳು ತಮ್ಮ ವಿರುದ್ಧ ಆಗುತ್ತಿರುವ ಕಿರುಕುಳದ ವಿರುದ್ಧ ಹೇಗೆ ತಿರುಗಿ ಬೀಳಬೇಕು ಎನ್ನುವುದನ್ನು ಈ ಕಿರುಚಿತ್ರದಲ್ಲಿ ಹೇಳಲಾಗಿದೆ’ ಎನ್ನುತ್ತಾರೆ ಸಿಂಹಿಕಾ.
ಮಂಗಳೂರು ಮೂಲದ ಬಾಲಚಂದಿರ್ ಅವರು ಈ ಕಿರುಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಸಾಕಷ್ಟು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸಿಂಗಾಪುರ್ ಅಂತಾರಾಷ್ಟ್ರೀಯ ಸಿನಿಮೋತ್ಸವ, ಇಂಡೋ-ಫ್ರೆಂಚ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿ 12 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಸಿಂಹಿಕಾ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದುಬಂದಿದ್ದಾರೆ. ಈ ಮೊದಲು ಒಂದು ಮ್ಯೂಸಿಕ್ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಕಿರುಚಿತ್ರ. ಈಗ ಹೆಚ್ಚಿನ ನಟನಾ ತರಬೇತಿಗೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅದಾದ ನಂತರದಲ್ಲಿ ಮುಂದಿನ ಆಲೋಚನೆಗಳನ್ನು ಮಾಡುವ ಉದ್ದೇಶವನ್ನು ಅವರು ಇಟ್ಟುಕೊಂಡಿದ್ದಾರೆ. ಈ ಕಿರುಚಿತ್ರ ಯೂಟ್ಯೂಬ್ನಲ್ಲಿ ರಿಲೀಸ್ ಆಗಿಲ್ಲ. ಶೀಘ್ರವೇ ಇದು ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಈ ಕಿರುಚಿತ್ರದಲ್ಲಿ ಸಿಂಹಿಕಾ ಮಾತ್ರವಲ್ಲದೆ, ರಮೇಶ್ ಪಾಟೀಲ್ ಹಾಗೂ ಮೋಹನ್ ಕುಮಾರ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: National Film Awards 2019: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ‘ಅಕ್ಷಿ’ ಚಿತ್ರಕ್ಕೂ ಡಾ. ರಾಜ್ಕುಮಾರ್ಗೂ ಇದೆ ಸಂಬಂಧ!
ಖ್ಯಾತ ನಟ ಅನುಪಮ್ ಖೇರ್ಗೆ ಅಮೆರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ
Published On - 6:44 pm, Fri, 10 December 21