ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಒಟಿಟಿ ಮೂಲಕ ಸಾಕಷ್ಟು ಗಮನ ಸೆಳೆದು ಬಂದಿದ್ದಾರೆ. 42 ದಿನಗಳ ಕಾಲ ಅವರು ದೊಡ್ಮನೆಯಲ್ಲಿ ಇದ್ದು ಫಿನಾಲೆಯಲ್ಲಿ ಹೊರ ಬಂದಿದ್ದಾರೆ. ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದ ನಂತರದಲ್ಲಿ ಅವರು ಒಂದಷ್ಟು ವಿಚಾರಗಳನ್ನು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಖಾಸಗಿ ವಿಡಿಯೋ ಲೀಕ್ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ಗೆ ಹೋಗುವುದಕ್ಕೂ ಮೊದಲು ಅನೇಕರಿಂದ ಟೀಕೆಗೆ ಒಳಗಾಗಿದ್ದರು. ಅನೇಕರು ಅವರಿಗೆ ಅವಕಾಶ ನೀಡಲೇಬಾರದು ಎಂಬ ಮಾತನ್ನು ಹೇಳಿದ್ದರು. ಆದರೆ, ವೀಕ್ಷಕರಿಗೆ ಬಿಗ್ ಬಾಸ್ ಮನೆಯಲ್ಲಿ ಬೇರೆಯದೇ ಸೋನು ಕಂಡರು. ಸದಾ ಜೋಕ್ ಮಾಡುತ್ತಾ ಅವರು ಜಾಲಿಯಾಗಿ ಇರುತ್ತಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ನ ಕೆಲ ಸ್ಪರ್ಧಿಗಳಿಗೆ ಹಾಗೂ ಒಂದು ವರ್ಗದ ವೀಕ್ಷಕರಿಗೆ ಸೋನು ಇಷ್ಟವಾಗಿದ್ದಾರೆ. ಈಗ ಅವರು ಮನೆಯಿಂದ ಹೊರ ಬಂದಿದ್ದಾರೆ. ವಿಡಿಯೋ ಲೀಕ್ ಆದ ಸಂದರ್ಭದಲ್ಲಿ ಮನೆಯವರ ರಿಯಾಕ್ಷನ್ ಹೇಗಿತ್ತು ಎಂಬ ವಿಚಾರವನ್ನು ಸೋನು ಮಾತನಾಡಿದ್ದಾರೆ.
‘ವಿಡಿಯೋ ಲೀಕ್ ಆಯ್ತು. ನಾನು ಯಾರಿಗೂ ಸುಳ್ಳು ಹೇಳುವುದಿಲ್ಲ. ಎಷ್ಟೇ ಕಷ್ಟ ಬಂದರೂ ನಾನು ನಿಜ ಹೇಳ್ತೀನಿ. ಸತ್ಯ ಒಂದು ಗಂಟೆ ಅಷ್ಟೇ ಕೋಪ ತರಿಸುತ್ತದೆ. ಆದರೆ, ಅದಕ್ಕೆ ಬೆಲೆ ಇದೆ. ಆದರೆ ಸುಳ್ಳು ಆ ರೀತಿ ಅಲ್ಲ. ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳು ಹೇಳಬೇಕಾಗುತ್ತದೆ. ಈ ಕಾರಣಕ್ಕೆ ಮನೆಯಲ್ಲಿ ನಾನು ಎಲ್ಲವನ್ನೂ ಒಪ್ಪಿಕೊಂಡೆ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಇದನ್ನೂ ಓದಿ: ರಾಕೇಶ್ ಅಡಿಗ ಗೆದ್ದ ಖುಷಿಗೆ ಮಸ್ತ್ ಡ್ಯಾನ್ಸ್ ಮಾಡಿದ ಸೋನು ಶ್ರೀನಿವಾಸ್ ಗೌಡ; ಇಲ್ಲಿದೆ ವಿಡಿಯೋ
‘ಆ ಪರಿಸ್ಥಿತಿ ನೆನಪಿಸಿಕೊಂಡರೆ ನನಗೆ ಬೇಸರ ಆಗುತ್ತದೆ. ಇಡೀ ಫ್ಯಾಮಿಲಿ 2 ವಾರ ಮಾತನಾಡಲಿಲ್ಲ. ನಾವು ಮಾತನಾಡಿಸಿದ್ದನ್ನು ಬಿಡಲೂ ಒಂದು ಕಾರಣ ಇದೆ ಎಂದು ಅವರು ನನಗೆ ಅರ್ಥ ಮಾಡಿಸಿದರು. ನಮ್ಮ ಮನೆಯಲ್ಲಿ ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ’ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.