‘ವಾಸ್ತವತೆ ತಿರುಚಲಾಗಿದೆ’; ನಸೀರುದ್ದೀನ್ ಷಾ ನಟನೆಯ ‘ತಾಜ್: ಡಿವೈಡೆಡ್ ಬೈ ಬ್ಲಡ್’ ಸೀರಿಸ್ಗೆ ಮಿಶ್ರ ಪ್ರತಿಕ್ರಿಯೆ
ಅಕ್ಬರ್ಗೆ ಮೂವರು ಮಕ್ಕಳು. ಈ ಪೈಕಿ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ನಿರ್ಧರಿಸುವ ಸಮಯ ಬರುತ್ತದೆ. ಇದೇ ವಿಚಾರ ಇಟ್ಟುಕೊಂಡು ‘ತಾಜ್: ಡಿವೈಡೆಡ್ ಬೈ ಬ್ಲಡ್’ ವೆಬ್ ಸೀರಿಸ್ ಸಿದ್ಧಗೊಂಡಿದೆ.
ಒಟಿಟಿ (OTT) ವ್ಯಾಪ್ತಿ ಹೆಚ್ಚಿದೆ. ಹಾಗೆಯೇ ಒಟಿಟಿ ಪ್ಲಾಟ್ಫಾರ್ಮ್ಗಳ ಮಧ್ಯೆ ಸ್ಪರ್ಧೆ ಕೂಡ ಹಿರಿದಾಗಿದೆ. ಈ ರೇಸ್ನಲ್ಲಿ ಗೆಲ್ಲಲು ಹಲವು ರೀತಿಯ ವೆಬ್ ಸೀರಿಸ್ಗಳನ್ನು ಸಿದ್ಧಪಡಿಸಿ ವೀಕ್ಷಕರ ಮುಂದಿಡುವ ಪ್ರಯತ್ನ ಒಟಿಟಿ ಪ್ಲಾಟ್ಫಾರ್ಮ್ಗಳಿಂದ ಆಗುತ್ತಿದೆ. ಕೆಲವು ಸಿನಿಮಾ/ಸೀರಿಸ್ಗಳು ನೈಜ ಘಟನೆ ಆಧರಿಸಿ ಸಿದ್ಧಗೊಂಡರೆ, ಇನ್ನೂ ಕೆಲವು ಕಾಲ್ಪನಿಕ ಕಥೆಗಳು. ಈಗ ಐತಿಹಾಸಿಕ ಘಟನೆ ಆಧರಿಸಿ ಸಿದ್ಧಗೊಂಡ ನಸೀರುದ್ದೀನ್ ಷಾ ನಟನೆಯ ‘ತಾಜ್: ಡಿವೈಡೆಡ್ ಬೈ ಬ್ಲಡ್’ (Taj: Divided By Blood) ವೆಬ್ ಸೀರಿಸ್ ಜೀ5 ಮೂಲಕ ಪ್ರಸಾರ ಕಂಡಿದೆ. ಇದಕ್ಕೆ ಎಲ್ಲ ಕಡೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಕ್ಬರ್ಗೆ ಮೂವರು ಮಕ್ಕಳು. ಈ ಪೈಕಿ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ನಿರ್ಧರಿಸುವ ಸಮಯ ಬರುತ್ತದೆ. ವಯಸ್ಸಿನಲ್ಲಿ ಹಿರಿಯರಾದವರಿಗೆ ಅಧಿಕಾರ ಸಿಗುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ, ಸಾಮರ್ಥ್ಯದ ಆಧಾರದಲ್ಲಿ ಉತ್ತಾಧಿಕಾರಿಯನ್ನು ಆಯ್ಕೆ ಮಾಡಲು ಅಕ್ಬರ್ ಮುಂದಾಗುತ್ತಾನೆ. ಅಲ್ಲಿಂದ ಸಿಂಹಾಸನಕ್ಕಾಗಿ ಕಿತ್ತಾಟ ಆರಂಭ ಆಗುತ್ತದೆ. ಇದೇ ವಿಚಾರ ಇಟ್ಟುಕೊಂಡು ‘ತಾಜ್: ಡಿವೈಡೆಡ್ ಬೈ ಬ್ಲಡ್’ ವೆಬ್ ಸೀರಿಸ್ ಸಿದ್ಧಗೊಂಡಿದೆ.
ಮಾರ್ಚ್ 3ಕ್ಕೆ ‘ತಾಜ್: ಡಿವೈಡೆಡ್ ಬೈ ಬ್ಲಡ್’ ರಿಲೀಸ್ ಆಗಲಿದೆ ಎಂದು ಜೀ5 ಕಡೆಯಿಂದ ಘೋಷಣೆ ಆಗಿತ್ತು. ಮಾರ್ಚ್ 2ರ ತಡರಾತ್ರಿಯಿಂದಲೇ ಈ ವೆಬ್ ಸೀರಿಸ್ ವೀಕ್ಷಣೆಗೆ ಲಭ್ಯವಾಗಿದೆ. ಇದನ್ನು ನೋಡಿದ ಅನೇಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ನಸೀರುದ್ದೀನ್ ಷಾ ಅವರು ಅಕ್ಬರ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಅನಾರ್ಕಲಿ ಆಗಿ ಅದಿತಿ ರಾವ್ ಹೈದರಿ ಗಮನ ಸೆಳೆದಿದ್ದಾರೆ ಎನ್ನುವ ಮಾತು ವೀಕ್ಷಕರ ವಲಯದಲ್ಲಿ ಕೇಳಿ ಬಂದಿದೆ. ಈ ಸೀರಿಸ್ನಲ್ಲಿ 10 ಎಪಿಸೋಡ್ಗಳಿವೆ. ಮೊಘಲರು ಹೇಗೆ ಅವನತಿ ಕಂಡರು ಎಂಬುದನ್ನು ವಿವರಿಸಲಾಗಿದೆ.
ಇದನ್ನೂ ಓದಿ: ‘ಮೊಘಲರು ಲೂಟಿ ಮಾಡಲು ಬಂದವರಲ್ಲ, ಭಾರತಕ್ಕೆ ಅವರ ಕೊಡುಗೆಯೂ ಇದೆ’: ನಸೀರುದ್ದೀನ್ ಷಾ
ಐತಿಹಾಸಿಕ ಘಟನೆಗಳನ್ನು ಹೇಳುವಾಗ ನೈಜತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆದರೆ, ಈ ಸೀರಿಸ್ನಲ್ಲಿ ವಿಚಾರಗಳನ್ನು ತಿರುಚಲಾಗಿದೆ ಎನ್ನುವ ಆರೋಪ ವೀಕ್ಷಕರಿಂದ ಬಂದಿದೆ. ‘ಶೋ ಚೆನ್ನಾಗಿದೆ. ಆದರೆ, ಇಲ್ಲಿ ವಾಸ್ತವ ಹುಡುಕಲು ಹೋಗಬೇಡಿ. ಕಥೆ ಮತ್ತು ಕಲ್ಪನೆಯ ಮಿಶ್ರಣ ಈ ಸೀರಿಸ್. ಇದು ಭಾರತದ ಗೇಮ್ ಆಫ್ ಥ್ರೋನ್ಸ್’ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು ಈ ಸೀರಿಸ್ನ ಮೇಕಿಂಗ್ ಹಾಗೂ ಪಾತ್ರಗಳ ಆಯ್ಕೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Fri, 3 March 23