ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಆ್ಯಕ್ಷನ್-ಕಟ್ ಹೇಳಿರುವ ‘ಗುರು ಶಿಷ್ಯರು’ (Guru Shishyaru) ಚಿತ್ರವು ಪ್ರೇಕ್ಷಕರ ಮನ ಗೆದ್ದಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ಶರಣ್ (Sharan) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಖೊ ಖೊ ಆಟದ ಕಥಾಹಂದರ ಇದೆ. ಕನ್ನಡದಲ್ಲಿ ಕ್ರೀಡೆಯ ಕಥೆ ಇಟ್ಟುಕೊಂಡು ಬಂದ ಸಿನಿಮಾಗಳ ಸಂಖ್ಯೆ ವಿರಳ. ಆ ದೃಷ್ಟಿಯಲ್ಲಿ ನೋಡಿದರೆ ‘ಗುರು ಶಿಷ್ಯರು’ ಸಿನಿಮಾ ವಿಶೇಷ ಎನಿಸುತ್ತದೆ. ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡ ಈ ಸಿನಿಮಾ ಈಗ ಒಟಿಟಿಗೆ ಕಾಲಿಡುತ್ತಿದೆ. ಜೀ2 (Zee5) ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗುತ್ತಿದೆ.
ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಇಷ್ಟ ಆಗುವಂತಹ ಸಿನಿಮಾ ‘ಗುರು ಶಿಷ್ಯರು’. ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೆ ಹೆಚ್ಚು ಆಪ್ತ ಎನಿಸುತ್ತದೆ. ಯಾಕೆಂದರೆ ಈ ಸಿನಿಮಾದಲ್ಲಿ ಹೈಸ್ಕೂಲ್ ಮಕ್ಕಳ ಕಥೆ ಇದೆ. ಖೊ ಖೊ ಆಟದ ಹಿನ್ನೆಲೆಯಲ್ಲಿ ಮಕ್ಕಳಿಗೆ ಅನೇಕ ವಿಚಾರಗಳನ್ನು ತಿಳಿಸಿಕೊಡುವ ಗುಣ ಈ ಸಿನಿಮಾದ ಕಥೆಗೆ ಇದೆ. ಜೊತೆಗೆ ಶರಣ್ ಅವರು ಭರ್ಜರಿ ಕಾಮಿಡಿ ಕೂಡ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ಚಿಕ್ಕದಾದ ಒಂದು ಲವ್ ಸ್ಟೋರಿ ಸಹ ಗಮನ ಸೆಳೆಯುತ್ತದೆ.
ಇಷ್ಟೆಲ್ಲ ಅಂಶಗಳನ್ನು ಒಳಗೊಂಡಿರುವ ‘ಗುರು ಶಿಷ್ಯರು’ ಸಿನಿಮಾದ ಸ್ಟ್ರೀಮಿಂಗ್ ನವೆಂಬರ್ 11ರಂದು ಜೀ5 ಒಟಿಟಿಯಲ್ಲಿ ಆರಂಭ ಆಗಲಿದೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ. ಅದರ ಹೊಸ್ತಿಲಿನಲ್ಲಿ ಒಟಿಟಿಗೆ ಕಾಲಿಡುತ್ತಿರುವ ಈ ಸಿನಿಮಾ ಎಲ್ಲ ಮಕ್ಕಳಿಗೆ ಮಸ್ತ್ ಮನರಂಜನೆ ನೀಡಲಿದೆ. ಥಿಯೇಟರ್ನಲ್ಲಿ ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆಕಂಡ ಈ ಸಿನಿಮಾದಲ್ಲಿ ದತ್ತಣ್ಣ, ಅಪೂರ್ವ ಕಾಸರವಳ್ಳಿ ಕೂಡ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಮೊದಲ ಲಾಕ್ ಡೌನ್ ಬಳಿಕ ಒಟಿಟಿ ಪ್ರಾಬಲ್ಯ ಹೆಚ್ಚಾಯಿತು. ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಬಯಸುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಹೊಸ ಹೊಸ ಸಿನಿಮಾಗಳನ್ನು ಖರೀದಿಸುವಲ್ಲಿ ಎಲ್ಲ ಪ್ರಮುಖ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಈಗ ‘ಗುರು ಶಿಷ್ಯರು’ ಚಿತ್ರದ ಒಟಿಟಿ ಹಕ್ಕುಗಳು ‘ಜೀ5’ ಸಂಸ್ಥೆಯ ಪಾಲಾಗಿದೆ.
ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಇತ್ತೀಚೆಗೆ ‘ಜೀ5’ನಲ್ಲಿ ಪ್ರಸಾರ ಆರಂಭಿಸಿತು. ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಂಡಿತು. ಅದೇ ರೀತಿ ‘ಗಾಳಿಪಟ’ ಕೂಡ ಸದ್ದು ಮಾಡಿತು. ಅದರ ಬೆನ್ನಲ್ಲೇ ‘ಗುರು ಶಿಷ್ಯರು’ ಚಿತ್ರ ಒಟಿಟಿಗೆ ಕಾಲಿಡಲು ಸಜ್ಜಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.