The Kerala Story: ಕಡೆಗೂ ಒಟಿಟಿಗೆ ಬಂತು ‘ದಿ ಕೇರಳ ಸ್ಟೋರಿ’ ಸಿನಿಮಾ; ಯಾವಾಗಿಂದ ಪ್ರಸಾರ? ಎಲ್ಲಿ ವೀಕ್ಷಣೆ?
ಥಿಯೇಟರ್ನಲ್ಲಿ ಸೂಪರ್ ಹಿಟ್ ಆದ ‘ದಿ ಕೇರಳ ಸ್ಟೋರಿ’ ಸಿನಿಮಾದ ಒಟಿಟಿ ರಿಲೀಸ್ಗೆ ದಿನಾಂಕ ನಿಗದಿ ಆಗಿದೆ. ಚಿತ್ರಮಂದಿರದಲ್ಲಿ ತೆರೆಕಂಡಾಗ ಈ ಸಿನಿಮಾ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಒಟಿಟಿಯಲ್ಲಿ ವೀಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಥಿಯೇಟರ್ನಲ್ಲಿ ‘ದಿ ಕೇರಳ ಸ್ಟೋರಿ’ ಮಿಸ್ ಮಾಡಿಕೊಂಡವರು ಫೆ.16ರಿಂದ ಮನೆಯಲ್ಲೇ ವೀಕ್ಷಿಸಬಹುದು.
2023ರಲ್ಲಿ ಭಾರಿ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಈಗ ಒಟಿಟಿ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಚಿತ್ರಮಂದಿರದಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಕಾಯುತ್ತಿದ್ದ ಎಲ್ಲರಿಗೂ ಖುಷಿ ಸುದ್ದಿ ಸಿಕ್ಕಿದೆ. ಥಿಯೇಟರ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ‘ದಿ ಕೇರಳ ಸ್ಟೋರಿ’ ಚಿತ್ರದ ಒಟಿಟಿ ಬಿಡುಗಡೆಗೆ ಹತ್ತು ಹಲವು ವಿಘ್ನಗಳು ಎದುರಾಗಿದ್ದವು. ಅದೆಲ್ಲವನ್ನೂ ನಿವಾರಿಸಿಕೊಂಡು ಈಗ ಒಟಿಟಿಗೆ ಈ ಸಿನಿಮಾ ಎಂಟ್ರಿ ನೀಡುತ್ತಿದೆ. ‘ಜೀ5’ ಒಟಿಟಿ (Zee5 OTT) ಮೂಲಕ ಫೆಬ್ರವರಿ 16ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದಾರೆ. ವಿವಾದಿತ ಕಥಾವಸ್ತು ಈ ಸಿನಿಮಾದಲ್ಲಿ ಇದೆ ಎಂಬ ಕಾರಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಇದರ ಒಟಿಟಿ ರಿಲೀಸ್ ಕೂಡ ತಡವಾಗಿತ್ತು. ಚಿತ್ರಮಂದಿರದಲ್ಲಿ ತೆರೆಕಂಡು ಬರೋಬ್ಬರಿ 9 ತಿಂಗಳು ಕಳೆದ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ.
‘ಆಂಜನೇಯನೇ ನನ್ನ ನೆಚ್ಚಿನ ಸೂಪರ್ ಹೀರೋ’: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಹೇಳಿಕೆ
ಕೇರಳದಲ್ಲಿ ಹಿಂದೂ ಯುವತಿಯರನ್ನು ಮತಾಂತರ ಮಾಡಿ, ನಂತರ ಅವರನ್ನು ಬೇರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಕಥೆಯನ್ನು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ತೋರಿಸಲಾಗಿದೆ. ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಸಿನಿಮಾದ ಟೀಸರ್ನಲ್ಲಿ ಅಂಕಿ-ಅಂಶಗಳು ತಪ್ಪಾಗಿದ್ದವು ಮತ್ತು ಘಟನೆಗಳನ್ನು ವೈಭವೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
‘ದಿ ಕೇರಳ ಸ್ಟೋರಿ’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ‘ಜೀ5’ ಪೋಸ್ಟ್:
The wait is officially over! The most anticipated film is dropping soon on ZEE5!#TheKeralaStory premieres on 16th February, only on #ZEE5#TheKeralaStoryOnZEE5 #VipulAmrutlalShah pic.twitter.com/4mBGyTTp4S
— ZEE5 (@ZEE5India) February 6, 2024
ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ‘ದಿ ಕೇರಳ ಸ್ಟೋರಿ’ ಗಳಿಸಿದ್ದು ಬರೋಬ್ಬರಿ 303 ಕೋಟಿ ರೂಪಾಯಿ. ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಹೀಗೆ ಸೂಪರ್ ಹಿಟ್ ಆದ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಹಲವು ಒಟಿಟಿ ಸಂಸ್ಥೆಗಳು ಮುಗಿಬೀಳುತ್ತವೆ. ಆದರೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿಸಲು ಯಾವ ಸಂಸ್ಥೆಗಳೂ ಆಸಕ್ತಿ ತೋರಿಸಿರಲಿಲ್ಲ. ಕಾಂಟ್ರವರ್ಸಿ ಕಥಾಹಂದರ ಇದೆ ಎಂಬ ಕಾರಣಕ್ಕೆ ಇದರ ಒಟಿಟಿ ರಿಲೀಸ್ ವಿಳಂಬ ಆಗಿತ್ತು. ಅಂತಿಮವಾಗಿ ‘ಜೀ5’ ಮೂಲಕ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ