ಈ ವಾರ ಒಟಿಟಿಗೆ ಬಂದಿದೆ ಕನ್ನಡದ ಸುಂದರ ಸಿನಿಮಾ
OTT release: ಐಪಿಎಲ್ ಶುರುವಾಗುತ್ತಿರುವ ಕಾರಣ ಹಲವು ಸಿನಿಮಾಗಳು ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿವೆ. ಇದರ ನಡುವೆ ಒಟಿಟಿಗೆ ಹಲವು ಸಿನಿಮಾಗಳು, ವೆಬ್ ಸರಣಿಗಳು ದಾಂಗುಡಿ ಇರಿಸಿವೆ. ಕನ್ನಡದ ಒಂದು ಸುಂದರ ಸಿನಿಮಾ ಸೇರಿದಂತೆ ಕೆಲವು ಹಿಟ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ...

ಐಪಿಎಲ್ (IPL) ಶುರವಾಗಿದೆ. ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಹಿಂದೇಟು ಹಾಕುತ್ತಿವೆ. ಸ್ಟಾರ್ ನಟರ ಸಿನಿಮಾಗಳಂತೂ ಇನ್ನೆರಡು ತಿಂಗಳು ಚಿತ್ರಮಂದಿರಗಳಿಗೆ ಬಹುತೇಕ ಬರುವುದಿಲ್ಲ. ಈ ಸಮಯವನ್ನು ಒಟಿಟಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ. ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿವೆ. ಈ ವಾರ ಕೆಲವು ಒಳ್ಳೆಯ ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ ಬಿಡುಗಡೆ ಆಗಿವೆ. ಅದರಲ್ಲಿ ಒಂದು ಸುಂದರ ಕನ್ನಡ ಸಿನಿಮಾ ಸಹ ಸೇರಿದೆ.
ನೋಡಿದವರು ಏನಂತಾರೆ
ನವೀನ್ ಶಂಕರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ನೋಡಿದವರು ಏನಂತಾರೆ’ ಸಿನಿಮಾ ಜನವರಿ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಕತೆ, ನಿರೂಪಣೆ ಮುಖ್ಯವಾಗಿ ನವೀನ್ ಶಂಕರ್ ನಟನೆಗೆ ಜನ ಫಿದಾ ಆಗಿದ್ದರು. ಸಿನಿಮಾ ಭಾರಿ ದೊಡ್ಡ ಹಿಟ್ ಆಗಲಿಲ್ಲವಾದರೂ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಆಸಕ್ತರು ಇಂದಿನಿಂದಲೇ ಸಿನಿಮಾ ವೀಕ್ಷಿಸಬಹುದು.
ಸ್ಕೈ ಫೋರ್ಸ್
ಅಕ್ಷಯ್ ಕುಮಾರ್, ವೀರ್ ಫಹಾಡಿಯಾ, ಸಾರಾ ಅಲಿ ಖಾನ್, ನಿಮ್ರತ್ ಕೌರ್ ಇನ್ನೂ ಕೆಲವು ನಟರು ನಟಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಸ್ಕೈ ಫೋರ್ಸ್’ ಇದೇ ವಾರ ಒಟಿಟಿಗೆ ಬಂದಿದೆ. 1965ರ ಇಂಡೋ ಪಾಕ್ ಕದನದ ಕತೆಯನ್ನು ಒಳಗೊಂಡಿರುವ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.
ಆಫೀಸರ್ ಆನ್ ಡ್ಯೂಟಿ
ಮಲಯಾಳಂ ಸಿನಿಮಾ ಆಫಿಸರ್ ಆನ್ ಡ್ಯೂಟಿ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಕುಂಜಕ್ಕೊ ಬೋಬನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಥ್ರಿಲ್ಲರ್ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಸಿಡುಕು ವ್ಯಕ್ತಿತ್ವದ ಪೊಲೀಸ್ ಒಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಅದ್ಭುತ ಪ್ರದರ್ಶನ ಕಂಡಿದೆ.
ಇದನ್ನೂ ಓದಿ:ಒಳ್ಳೆಯ ರೇಟಿಂಗ್, ಕಾಮಿಡಿ ಜೊತೆ ಸಸ್ಪೆನ್ಸ್; ಈ ಚಿತ್ರವನ್ನು ಒಟಿಟಿಯಲ್ಲಿ ಮಿಸ್ ಮಾಡಿಕೊಳ್ಳಬೇಡಿ
ಡ್ರ್ಯಾಗನ್
ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿರುವ ‘ಡ್ರ್ಯಾಗನ್’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಮಾರ್ಚ್ 21 ರಂದು ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು ಈಗಾಗಲೇ ಒಟಿಟಿ ವೀಕ್ಷಕರ ಗಮನ ಸೆಳೆದಿದೆ. ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಅಶ್ವಥ್ ಮಾರಿಮುತ್ತು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ತಮಿಳಿನ ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇದನ್ನೂ ಓದಿ:ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್, ಟ್ವಿಸ್ಟ್, ಫರ್ಫಾರ್ಮೆನ್ಸ್ ಇರೋ ಸಿನಿಮಾನ ಮಿಸ್ ಮಾಡಲೇಬೇಡಿ
ಖಾಕಿ: ದಿ ಬೆಂಗಾಲ್ ಚಾಪ್ಟರ್
ರಾಜಕಾರಣಿಗಳು ಮತ್ತು ರೌಡಿಗಳೇ ತುಂಬಿರುವ ನಗರವೊಂದರಲ್ಲಿ ಪೊಲೀಸರ ಕಾರ್ಯಾಚರಣೆಗಳು, ಅವರಿಗೆ ಎದುರಾಗುವ ಸಂಕಷ್ಟಗಳು ಇನ್ನಿತರೆ ವಿಷಯಗಳನ್ನು ಇರಸಿಕೊಂಡು ನಿರ್ಮಿಸಲಾಗಿರುವ ವೆಬ್ ಸರಣಿ ‘ಖಾಕಿ: ದಿ ಬೆಂಗಾಲ್ ಚಾಪ್ಟರ್’ ನೆಟ್ಫ್ಲಿಕ್ಸ್ನಲ್ಲಿ ಮಾರ್ಚ್ 20 ರಂದು ಬಿಡುಗಡೆ ಆಗಿದೆ. ಕ್ರೈಂ ಥ್ರಿಲ್ಲರ್ ಜಾನರ್ನ ಈ ವೆಬ್ ಸರಣಿಯಲ್ಲಿ ಕೆಲ ನಿಜ ರಾಜಕಾರಣಿಗಳನ್ನು ಹೋಲುವ ಪಾತ್ರಗಳೂ ಇವೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Sat, 22 March 25