2022ರ ಕಾನ್ ಚಲನಚಿತ್ರೋತ್ಸವ (Cannes Film Festival 2022) ಈ ಬಾರಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹಾಲಿವುಡ್, ಭಾರತೀಯ ಚಿತ್ರರಂಗ ಸೇರಿದಂತೆ ವಿಶ್ವದ ಪ್ರಖ್ಯಾತ ತಾರೆಯರು ರೆಡ್ ಕಾರ್ಪೆಟ್ನಲ್ಲಿ ವಿಶೇಷ ಉಡುಗೆಗಳನ್ನು ತೊಟ್ಟು ಹೆಜ್ಜೆಹಾಕಿದ್ದಾರೆ. ಭಾರತ ಈ ಬಾರಿ ‘country of honour’ ವಿಭಾಗದಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ. ಅಚ್ಚರಿಯೆಂದರೆ ಈ ಚಿತ್ರೋತ್ಸವದಲ್ಲಿ ಪಾಕಿಸ್ತಾನದ ಚಿತ್ರವೊಂದಕ್ಕೆ ಅವಕಾಶ ಸಿಕ್ಕಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಚಿತ್ರವೊಂದು ಈ ಅವಕಾಶ ಪಡೆದಿದೆ ಎಂದು ವರದಿಗಳು ಹೇಳಿವೆ. ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ ‘ಜಾಯ್‌ಲ್ಯಾಂಡ್’ ಚಿತ್ರದಲ್ಲಿ ತೃತೀಯ ಲಿಂಗಿ ನಟಿ ಅಲಿನಾ ಖಾನ್ (Alina Khan) ಕೂಡ ಇದ್ದಾರೆ. ಮೊದಲ ಬಾರಿಗೆ ಅಲಿನಾ ಖಾನ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು, ಇದೀಗ ವಿಶ್ವಾದ್ಯಂತ ಸಖತ್ ಸುದ್ದಿಯಾಗಿದೆ.
ಸೈಮ್ ಸಾದಿಕ್ ನಿರ್ದೇಶನದ ‘ಜಾಯ್‌ಲ್ಯಾಂಡ್’ ಚಲನಚಿತ್ರದಲ್ಲಿ ಅಲಿನಾ ಖಾನ್ ಬಣ್ಣಹಚ್ಚಿದ್ದಾರೆ. ಪ್ರಸ್ತುತ ಕಾನ್ ಚಿತ್ರೋತ್ಸವದಲ್ಲಿ ಅವರು ಧರಿಸಿದ್ದ ದಿರಿಸು ಗಮನ ಸೆಳೆದಿದೆ. ಹಳದಿ- ಗುಲಾಬಿ ಬಣ್ಣದ ಲೆಹಂಗಾದಲ್ಲಿ ಮಿಂಚಿದ ಅವರು ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದರು. ಅಲಿನಾ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆಹಾಕುವಾಗ ಮರೂನ್ ಬಣ್ಣದ ಸೀರೆ ಧರಿಸಿ ಕಾಣಿಸಿಕೊಂಡಿದ್ದರು. ಅವರ ಸ್ಟೈಲಿಶ್ ಲುಕ್ ಎಲ್ಲರ ಗಮನಸೆಳೆದಿದೆ.
ಇದನ್ನೂ ಓದಿ: Hina Khan Cannes Look : ಕಾನ್ ಚಿತ್ರೋತ್ಸವ; ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಹಿನಾ ಖಾನ್
ಪಾಕಿಸ್ತಾನದ ತೃತೀಯ ಲಿಂಗಿ ಸಂಸ್ಕೃತಿ ಸೇರಿದಂತೆ ಹಲವು ವಿಚಾರಗಳನ್ನು ‘ಜಾಯ್‌ಲ್ಯಾಂಡ್’ ಚಿತ್ರದ ಮೂಲಕ ಪ್ರಸ್ತುತಪಡಿಸಲಾಗಿದೆ. ಕಾನ್ ಚಿತ್ರೋತ್ಸವದ ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಈ ಸಿನಿಮಾ ಮೊದಲ ಪ್ರದರ್ಶನ ಕಂಡಿತು. ಚಿತ್ರದಲ್ಲಿ ಅಲಿನಾ ಖಾನ್ ಜತೆಗೆ ಅಲಿ ಜುನೇಜೊ, ರಸ್ತಿ ಫಾರೂಕ್, ಸರ್ವತ್ ಗಿಲಾನಿ, ಸೊಹೈಲ್ ಸಮೀರ್, ಸಲ್ಮಾನ್ ಪೀರ್ಜಾದಾ ಮತ್ತು ಸಾನಿಯಾ ಸಯೀದ್ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾನ್ ಚಿತ್ರೋತ್ಸವವು ಮೇ 17ರಂದು ಆರಂಭವಾಗಿತ್ತು. ಮೇ 28ರ ಶನಿವಾರದಂದು ಈ ಉತ್ಸವ ಮುಕ್ತಾಯವಾಗಲಿದೆ. ಭಾರತದ ಅನೇಕ ತಾರೆಯರು ಈ ಬಾರಿ ಅಲ್ಲಿ ಹೆಜ್ಜೆಹಾಕಿದ್ಧಾರೆ. ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡಿದ್ದರು. ತಮನ್ನಾ ಭಾಟಿಯಾ, ಐಶ್ವರ್ಯಾ ರೈ, ಹಿನಾ ಖಾನ್, ಪೂಜಾ ಹೆಗ್ಡೆ ಸೇರಿದಂತೆ ಹಲವು ತಾರೆಯರು ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ