ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ದ್ವೇಷದ ಕಥೆಗೆ ಹೆಸರೇನು? ಆ.15ರಂದು ಬಯಲಾಗುತ್ತೆ ಹೊಸ ವಿಷಯ
ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಪವನ್ ಕಲ್ಯಾಣ್ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ರಾಣಾ ದಗ್ಗುಬಾಟಿ ಅವರ ಗೆಟಪ್ ಮತ್ತು ಪಾತ್ರದ ಹೆಸರಿನ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿಲ್ಲ.

ಟಾಲಿವುಡ್ನ ಸ್ಟಾರ್ ನಟರಾದ ಪವನ್ ಕಲ್ಯಾಣ್ (Pawan Kalyan) ಮತ್ತು ರಾಣಾ ದಗ್ಗುಬಾಟಿ (Rana Daggubati) ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಆದರೆ ಈ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಏನು ಎಂಬುದು ಈವರೆಗೂ ಬಹಿರಂಗ ಆಗಿಲ್ಲ. ಚಿತ್ರದ ಟೈಟಲ್ ಏನೆಂದು ತಿಳಿದುಕೊಳ್ಳಲು ಸಿನಿಪ್ರಿಯರು ಬಹಳ ದಿನಗಳಿಂದ ಕಾದಿದ್ದಾರೆ. ಅದಕ್ಕೀಗ ಚಿತ್ರತಂಡ ಸಮಯ ನಿಗದಿ ಮಾಡಿದೆ. ಭಾನುವಾರ (ಆ.15) ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಳಗ್ಗೆ 9.45ಕ್ಕೆ ಶೀರ್ಷಿಕೆ ಅನಾವರಣ ಆಗಲಿದೆ. ಅಷ್ಟೇ ಅಲ್ಲ, ಇನ್ನೂ ಕೆಲವು ಸರ್ಪ್ರೈಸ್ಗಳು ಅಭಿಮಾನಿಗಳಿಗಾಗಿ ಕಾದಿವೆ.
ಅಂದಹಾಗೆ, ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಜೊತೆಯಾಗಿ ನಟಿಸುತ್ತಿರುವುದು ಒಂದು ರಿಮೇಕ್ ಸಿನಿಮಾದಲ್ಲಿ. ಮಲಯಾಳಂ ಸೂಪರ್ ಹಿಟ್ ಚಿತ್ರ ‘ಅಯ್ಯಪ್ಪನುಮ್ ಕೋಶಿಯುಂ’ ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಅದರಲ್ಲಿ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಮುಖಾಮುಖಿ ಆಗುತ್ತಿದ್ದಾರೆ. ಅಹಂಕಾರ ಮತ್ತು ಒಣ ಪ್ರತಿಷ್ಠೆಯ ಕಾರಣಕ್ಕಾಗಿ ಪರಸ್ಪರ ದ್ವೇಷ ಬೆಳೆಸಿಕೊಳ್ಳುವ ಇಬ್ಬರು ವ್ಯಕ್ತಿಗಳ ಕಥೆಯನ್ನು ಈ ಸಿನಿಮಾ ಹೊಂದಿದೆ. ಇಂಥ ಕಥೆಗೆ ಪವರ್ಫುಲ್ ಆದಂತಹ ಶೀರ್ಷಿಕೆ ಯಾವುದಿರಬಹುದು ಎಂಬ ಕೌತುಕಕ್ಕೆ ಭಾನುವಾರ ತೆರೆ ಬೀಳಲಿದೆ.
ಸಿತಾರಾ ಎಂಟರ್ಟೇನ್ಮೆಂಟ್ಸ್ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಟೈಟಲ್ ಲಾಂಚ್ ಬಗ್ಗೆ ಸುದ್ದಿ ತಿಳಿಸಲು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಪಕರು ಪೋಸ್ಟ್ವೊಂದನ್ನು ಮಾಡಿದ್ದಾರೆ. ಅದರಲ್ಲಿ ಪವನ್ ಕಲ್ಯಾಣ್ ಅವರು ಲುಂಗಿ ಧರಿಸಿ ನಡೆದುಹೋಗುತ್ತಿರುವ ಲುಕ್ ಇದೆ. ಈ ಸಿನಿಮಾದಲ್ಲಿ ಭೀಮ್ಲಾ ನಾಯಕ್ ಎಂಬ ಪೊಲೀಸ್ ಅಧಿಕಾರಿ ಪಾತ್ರನಲ್ಲಿ ಪವನ್ ಕಲ್ಯಾಣ್ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ರಾಣಾ ದಗ್ಗುಬಾಟಿ ಅವರ ಗೆಟಪ್ ಮತ್ತು ಪಾತ್ರದ ಹೆಸರಿನ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿಲ್ಲ.
Power Storm is all set to takeover with the Title & First Glimpse on 15th Aug from 09:45AM⚡
Get ready for the adrenaline rush ??#BheemlaNayak @pawankalyan @RanaDaggubati #Trivikram @MenenNithya @MusicThaman @saagar_chandrak @dop007 @NavinNooli @vamsi84 pic.twitter.com/SaqwNROqV7
— Sithara Entertainments (@SitharaEnts) August 13, 2021
ಭಾನುವಾರ ಶೀರ್ಷಿಕೆ ಅನಾವರಣದ ಜೊತೆಗೆ ಚಿಕ್ಕ ಟೀಸರ್ ಅಥವಾ ಮೋಷನ್ ಪೋಸ್ಟರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಅದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಬಳಿಕ ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. 2022ರ ಜನವರಿ 12ರಂದು ಬಿಡುಗಡೆ ಮಾಡುವ ಗುರಿ ಇಟ್ಟುಕೊಂಡು ಕೆಲಸಗಳನ್ನು ಮಾಡಲಾಗುತ್ತಿದೆ. ಸಾಗರ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಥಮನ್ ಎಸ್. ಸಂಗೀತ ಸಂಯೋಜನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಾಯಕಿಯಾಗಿ ನಿತ್ಯಾ ಮೆನನ್ ನಟಿಸುತ್ತಿದ್ದಾರೆ.
ಇದನ್ನೂ ಓದಿ:
ಪವನ್ ಕಲ್ಯಾಣ್ ಪುತ್ರ ಅಕಿರ ನಂದನ್ ಮಾರ್ಷಲ್ ಆರ್ಟ್ಸ್ ವಿಡಿಯೋ ವೈರಲ್
ಪವನ್ ಕಲ್ಯಾಣ್ ಭವಿಷ್ಯದ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಜ್ಯೋತಿಷಿಗಳು




