ಪವನ್ ಕಲ್ಯಾಣ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಪತ್ನಿ

Pawan Kalyan: ಪವನ್ ಕಲ್ಯಾಣ್ ಇತ್ತೀಚೆಗಷ್ಟೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳು ಉಂಟಾಗಿದ್ದವು. ವೈದ್ಯರು ಅವರ ಬಲ ಭುಜಕ್ಕೆ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಪವನ್ ಅವರ ಪತ್ನಿ, ಪತಿಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಪತ್ನಿ
Pawan Kalyan

Updated on: Jul 14, 2026 | 12:21 PM

ನಟ ಮತ್ತು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳು ಉಂಟಾಗಿದ್ದವು. ವೈದ್ಯರು ಅವರ ಬಲ ಭುಜಕ್ಕೆ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಕಳೆದ ವರ್ಷ ಈ ಬಗ್ಗೆ ಮಾತನಾಡಿದ್ದ ಪವನ್ ಕಲ್ಯಾಣ್, ‘ಇದು ಅಭಿಮಾನಿಗಳು ಪ್ರೀತಿಯೊಂದ ಕೊಟ್ಟ ಗಾಯ’ ಎಂದು ತಮಾಷೆಯಾಗಿ ಹೇಳಿದ್ದರು. ಇದೀಗ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪತ್ನಿ ಅನ್ನಾ ಲೆಜ್ನೇವಾ ಮಾಹಿತಿ ಹಂಚಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿರುವ ಪವನ್ ಕಲ್ಯಾಣ್ ಅವರನ್ನು ಸಿಎಂ ಚಂದ್ರಬಾಬು ನಾಯ್ಡು ಭೇಟಿ ಆಗಿದ್ದರು. ಈ ವೇಳೆ ಪತ್ನಿ ಅನ್ನಾ ಸಹ ಜೊತೆಯಲ್ಲಿದ್ದರು. ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಮಾತನಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನ್ನಾ, ‘ಪವನ್ ಅವರು ತಮ್ಮ ನೋವನ್ನು ಎಂದಿಗೂ ತೋರಿಕೊಳ್ಳುವವರಲ್ಲ ಅಥವಾ ಅನುಕಂಪ ಬಯಸುವವರಲ್ಲ. ಅವರ ಬದುಕಿನ ಹೊರೆ ಯಾವಾಗಲೂ ಅವರ ದೈಹಿಕ ನೋವಿಗಿಂತ ಹೆಚ್ಚಾಗಿಯೇ ಇರುತ್ತದೆ. ಅವರು ಬಹಳ ಅಪರೂಪಕ್ಕೆ ದೂರು ಹೇಳುತ್ತಾರೆ. ನೋವು ತೀರಾ ಮಿತಿ ಮೀರಿದಾಗ ಮಾತ್ರ ಅದನ್ನು ಹೊರಹಾಕುತ್ತಾರೆ’ ಎಂದು ಅನ್ನಾ ತಿಳಿಸಿದ್ದಾರೆ.

‘ಸದ್ಯಕ್ಕೆ, ನಾನು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಅವರು ಸುರಕ್ಷಿತ ಕೈಗಳಲ್ಲಿದ್ದಾರೆ ಎಂದು ಅವರಿಗೆ ಅರಿವಾಗುವಂತೆ ಮಾಡುವುದು ನನ್ನ ಕೆಲಸ. ದಿನದಿಂದ ದಿನಕ್ಕೆ ಅವರು ಸುಧಾರಿಸುತ್ತಿದ್ದಾರೆ, ನಾವು ಖಂಡಿತಾ ಈ ಪರಿಸ್ಥಿತಿಯಿಂದ ಹೊರಬರುತ್ತೇವೆ’ ಎಂದು ಅನ್ನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಮೆಚ್ಚಿನ ಬಾಲ ಅಭಿಮಾನಿ ನಿರಂಜನ್ ನಿಧನ

ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಟ್ವೀಟ್ ಮಾಡಿದ್ದು, ‘ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜನಸೇನಾ ಪಕ್ಷದ ಹೇಳಿಕೆಯ ಪ್ರಕಾರ, ವೈದ್ಯರು ಮೊದಲೇ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದರೂ, ಪವನ್ ಕಲ್ಯಾಣ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ಮುಂದುವರಿಸಲು ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಚೇತರಿಕೆಯ ದೃಷ್ಟಿಯಿಂದ ಈ ಬಾರಿ ಬಲ ಭುಜಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಡ ಭುಜದ ಶಸ್ತ್ರಚಿಕಿತ್ಸೆಯನ್ನು ಸುಮಾರು ಎರಡು ತಿಂಗಳ ನಂತರ ನಡೆಸಲಾಗುವುದು ಎಂದಿದ್ದಾರೆ.

ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಪವನ್ ಅವರ ಬಲ ಭುಜದಲ್ಲಿ ಅನ್ವಲ್ಶನ್ ಫ್ರಾಕ್ಚರ್ (avulsion fracture) ಇರುವುದು ಪತ್ತೆಯಾಗಿದೆ, ಇದು ಮೊದಲೇ ತಿಳಿದಿರಲಿಲ್ಲ. ಇದರಿಂದ ಶಸ್ತ್ರಚಿಕಿತ್ಸೆ ನಿರೀಕ್ಷಿತ ಸಮಯಕ್ಕಿಂತ ಹೆಚ್ಚು ಸಮಯ ಹಿಡಿದಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಪವನ್ ಕಲ್ಯಾಣ್ ಅವರು ಪ್ರಸ್ತುತ ವೈದ್ಯರ ನಿಗಾದಲ್ಲಿದ್ದಾರೆ ಎಂದು ಜನಸೇನಾ ಪಕ್ಷದ ಪ್ರಮುಖರು ಮಾಧ್ಯಗಳಿಗೆ ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us