ಟಿಕೆಟ್ ದರ ಹೆಚ್ಚಳ: ತೆಲಂಗಾಣ ಸರ್ಕಾರಕ್ಕೆ ಹಾಕಿದ್ದ ಅರ್ಜಿ ಹಿಂಪಡೆದ ‘ಪೆದ್ದಿ’, ಕಾರಣವೇನು?
Peddi Movie cast: ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್, ಜಾನ್ಹವಿ ಸಹ ನಟಿಸಿರುವ ‘ಪೆದ್ದಿ’ ಸಿನಿಮಾಕ್ಕೆ ಭಾರಿ ಬಜೆಟ್ ಅನ್ನು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಹೂಡಿದೆ. ಇದೀಗ ಸಿನಿಮಾ ಬಿಡುಗಡೆ ದಿನ ಆದಷ್ಟು ಹೆಚ್ಚು ಗಳಿಕೆ ಮಾಡಲೆಂದು ಸಿನಿಮಾದ ಪ್ರೀಮಿಯರ್ ಶೋ, ಫ್ಯಾನ್ಸ್ ಶೋಗಳನ್ನು ಆಯೋಜಿಸಲಾಗಿದ್ದು, ಸಿನಿಮಾದ ಟಿಕೆಟ್ ದರವನ್ನು ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಿಸಲಾಗುತ್ತಿದೆ.

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್, ಜಾನ್ಹವಿ ಸಹ ನಟಿಸಿರುವ ಈ ಸಿನಿಮಾಕ್ಕೆ ಭಾರಿ ಬಜೆಟ್ ಅನ್ನು ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಹೂಡಿದೆ. ಇದೀಗ ಸಿನಿಮಾ ಬಿಡುಗಡೆ ದಿನ ಆದಷ್ಟು ಹೆಚ್ಚು ಗಳಿಕೆ ಮಾಡಲೆಂದು ಸಿನಿಮಾದ ಪ್ರೀಮಿಯರ್ ಶೋ, ಫ್ಯಾನ್ಸ್ ಶೋಗಳನ್ನು ಆಯೋಜಿಸಲಾಗಿದ್ದು, ಸಿನಿಮಾದ ಟಿಕೆಟ್ ದರವನ್ನು ಸಹ ದೊಡ್ಡ ಮಟ್ಟದಲ್ಲಿ ಹೆಚ್ಚಿಸಲಾಗುತ್ತಿದೆ.
ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಿರುವ ಆಂಧ್ರ ಪ್ರದೇಶದಲ್ಲಿ ಸುಲಭವಾಗಿ ಸರ್ಕಾರದ ಅನುಮತಿ ಪಡೆದುಕೊಂಡು ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚು ಮಾಡಲಾಗಿದೆ. ಅಂತೆಯೇ ತೆಲಂಗಾಣ ಸರ್ಕಾರಕ್ಕೂ ಸಹ ಸಿನಿಮಾ ಟಿಕೆಟ್ ದರ ಹೆಚ್ಚಿಸುವಂತೆ ‘ಪೆದ್ದಿ’ ಚಿತ್ರತಂಡ ಅರ್ಜಿ ಹಾಕಿಕೊಂಡಿತ್ತು. ಆದರೆ ಇದೀಗ ಖುದ್ದು ಚಿತ್ರತಂಡವೇ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದೆ.
ಸಿನಿಮಾ ಟಿಕೆಟ್ ಹೆಚ್ಚಳದ ಬಗ್ಗೆ ತೆಲಂಗಾಣ ಹೈಕೋರ್ಟ್ ಈ ಹಿಂದೆ ಕೆಲವು ಬಾರಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್ ದರ ಹೆಚ್ಚಿಸಲು ಅನುಮತಿ ಕೊಡಬಾರದು ಎಂದಿತ್ತು. ಇದೀಗ ‘ಪೆದ್ದಿ’ ಸಿನಿಮಾ ತಂಡವು ಸರ್ಕಾರಕ್ಕೆ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕಾಗಿ ಮನವಿ ಸಲ್ಲಿಸುವ ಜೊತೆಗೆ ನ್ಯಾಯಾಲಯಕ್ಕೂ ಸಹ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಈಗಾಗಲೇ ಕೆಲವಾರು ಸಿನಿಮಾಗಳು ಇದೇ ವಿಷಯವಾಗಿ ಅರ್ಜಿ ಸಲ್ಲಿಸಿ, ಅವುಗಳ ಅರ್ಜಿಗಳು ಇತ್ಯರ್ಥ ಆಗದೇ ಇರುವ ಕಾರಣ ಹಾಗೂ ಕೆಲ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಸಿಗದ ಕಾರಣ. ಕೋರ್ಟ್ನಲ್ಲಿ ವೃಥಾ ಸಮಯ ವ್ಯರ್ಥ ಮಾಡುವುದು ಬೇಡವೆಂದು ನಿರ್ಧರಿಸಿ ಅರ್ಜಿಯನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?
ತೆಲಂಗಾಣ ರಾಜ್ಯದಲ್ಲಿ ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಸಾಕಷ್ಟು ವಿರೋಧ ಮೊದಲಿನಿಂದಲೂ ಇದೆ. ಖುದ್ದು ಸಿಎಂ ರೇವಂತ್ ರೆಡ್ಡಿ ಅವರೇ ಟಿಕೆಟ್ ದರ ಹೆಚ್ಚಳವನ್ನು ಪರೋಕ್ಷವಾಗಿ ವಿರೋಧಿಸಿದ್ದರು. ಜೊತೆಗೆ ರಾಜ್ಯ ಹೈಕೋರ್ಟ್ ಸಹ ಟಿಕೆಟ್ ದರ ಹೆಚ್ಚಳದ ಬಗ್ಗೆ ಅಸಮಾಧಾನ ಹೊರಹಾಕಿತ್ತು. ಇನ್ನು ‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಬಾರದು ಎಂದು ತೆಲಂಗಾಣ ರಾಜ್ಯ ಪ್ರದರ್ಶಕರ ಸಂಘವು ಸರ್ಕಾರಕ್ಕೆ ಪತ್ರವನ್ನೂ ಸಹ ಬರೆದು ಒತ್ತಾಯ ಮಾಡಿತ್ತು. ಇದೆಲ್ಲದರ ನಡುವೆ ಇದೀಗ ಖುದ್ದು ‘ಪೆದ್ದಿ’ ಚಿತ್ರತಂಡವೇ ಅರ್ಜಿಯನ್ನು ಹಿಂಪಡೆದು ಟಿಕೆಟ್ ದರ ಹೆಚ್ಚಳದ ಆಸೆಯನ್ನು ಕೈಬಿಟ್ಟಿದೆ.
‘ಪೆದ್ದಿ’ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ರಾಮ್ ಚರಣ್, ಕ್ರಿಕೆಟ್ ಆಟಗಾರನಾಗಿ, ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್, ಕುಸ್ತಿ ಹೇಳಿಕೊಡುವ ಗುರುವಾಗಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಶ್ರುತಿ ಹಾಸನ್ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತವಿದೆ. ಸಿನಿಮಾದ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





