ಪ್ರಭಾಸ್ (Prabhas) ಸದ್ಯ ಹಲವು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ವಾಸ್ತವವಾಗಿ ನಟ ಕಾಣಿಸಿಕೊಳ್ಳುತ್ತಿರುವ ಎಲ್ಲಾ ಚಿತ್ರಗಳೂ ದೊಡ್ಡ ಕ್ಯಾನ್ವಾಸ್ನಲ್ಲಿ ತಯಾರಾಗುತ್ತಿವೆ. ಪ್ರಭಾಸ್ ಅಭಿಮಾನಿ ಬಳಗ ದೇಶಾದ್ಯಂತ ವಿಸ್ತಾರವಾಗಿರುವುದರಿಂದ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಅವರ ಚಿತ್ರಗಳು ಮೂಡಿಬರುತ್ತಿವೆ. ‘ಬಾಹುಬಲಿ’ ನಂತರದಲ್ಲಿ ಪ್ರಭಾಸ್ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಬ್ಬಿತ್ತು. ಆದರೆ ‘ಬಾಹುಬಲಿ 2’ ನಂತರ ಅವರ ಯಾವುದೇ ಚಿತ್ರಗಳು ಹಿಟ್ ಆಗಿಲ್ಲ. ವಿಭಿನ್ನ ಮಾದರಿಯ ಚಿತ್ರಗಳನ್ನು ಪ್ರಭಾಸ್ ಆಯ್ದುಕೊಂಡಿದ್ದರೂ ಕೂಡ ಅದು ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ರುಚಿಸಿಲ್ಲ. ‘ಸಾಹೊ’ ಹಾಗೂ ‘ರಾಧೆ ಶ್ಯಾಮ್’ ಚಿತ್ರಗಳು ನಿರೀಕ್ಷಿತ ಗಳಿಕೆ ಮಾಡಿಲ್ಲ. ಹೀಗಾಗಿ ಪ್ರಭಾಸ್ ಮುಂದಿನ ಚಿತ್ರಗಳಿಗೆ ನಿರ್ಮಾಪಕರು ಯಾವ ಪರಿ ಹಣ ಹೂಡಲಿದ್ಧಾರೆ ಎಂಬುದರ ಬಗ್ಗೆ ಅನುಮಾನಗಳು ಇದ್ದೇ ಇತ್ತು. ಆದರೆ ಪ್ರಭಾಸ್ ವರ್ಚಸ್ಸು ಕುಂದಿಲ್ಲ ಎನ್ನುವುದು ಸಾಬೀತಾಗಿದೆ. ಎರಡು ಚಿತ್ರಗಳು ಸೋಲು ಕಂಡಿದ್ದರೂ ಕೂಡ ನಿರ್ಮಾಪಕರು ಅವರನ್ನು ನಂಬಿ ಕೋಟಿಗಟ್ಟಲೆ ಹಣ ಹೂಡಿದ್ದಾರೆ. ಇತ್ತೀಚೆಗೆ ‘ಆದಿಪುರುಷ್’ (Adipurush Movie) ಚಿತ್ರದ ಬಜೆಟ್ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ‘ಬಾಹುಬಲಿ’ ಸರಣಿಗಿಂತಲೂ ದೊಡ್ಡ ಮಟ್ಟದಲ್ಲಿ ಚಿತ್ರ ಮೂಡಿಬರುತ್ತಿದೆ.
ಆದಿಪುರುಷ್ ಬಜೆಟ್ ಎಷ್ಟು?
ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಹಾಗೂ ‘ಬಾಹುಬಲಿ 2’ ಚಿತ್ರಗಳಿಗೆ ಸುಮಾರು 430 ಕೋಟಿ ರೂ ಖರ್ಚು ಮಾಡಲಾಗಿತ್ತು. ಎರಡೂ ಚಿತ್ರಗಳು ಸೇರಿ ಬಾಕ್ಸಾಫೀಸ್ನಲ್ಲಿ ಸುಮಾರು 2,400 ಕೋಟಿ ರೂಗಳಿಗಿಂತಲೂ ಅಧಿಕ ಮೊತ್ತವನ್ನು ಗಳಿಸಿವೆ. ಈ ಚಿತ್ರಗಳ ನಂತರ ಪ್ರಭಾಸ್ ‘ಸಾಹೊ’ದಲ್ಲಿ ಕಾಣಿಸಿಕೊಂಡಿದ್ದರು. 350 ಕೋಟಿ ರೂ ವೆಚ್ಚದಲ್ಲಿ ತಯಾರಾದ ಆ ಚಿತ್ರ ಹೆಚ್ಚು ಲಾಭ ಮಾಡಲಿಲ್ಲ. ಜತೆಗೆ ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಬರಲಿಲ್ಲ.
2022ರಲ್ಲಿ ‘ರಾಧೆ ಶ್ಯಾಮ್’ ತೆರೆಕಂಡಿತ್ತು. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯಿಸಿದ ಈ ರೊಮ್ಯಾಂಟಿಕ್ ಚಿತ್ರ 300-350 ಕೋಟಿ ರೂ ವೆಚ್ಚದಲ್ಲಿ ತಯಾರಾಗಿತ್ತು. ಆದರೆ ಬಾಕ್ಸಾಫೀಸ್ನಲ್ಲಿ ತೀರಾ ನೀರಸ ಪ್ರದರ್ಶನ ನೀಡಿತು. ವರದಿಗಳ ಪ್ರಕಾರ ಚಿತ್ರ ಗಳಿಸಿದ್ದು ಕೇವಲ 120-214 ಕೋಟಿ ರೂಗಳು. ಹೀಗಾಗಿಯೇ ಪ್ರಭಾಸ್ ಮುಂದಿನ ಚಿತ್ರಗಳ ಬಜೆಟ್ ಬಗ್ಗೆ ಪ್ರಶ್ನೆಗಳು ಮೂಡಿದ್ದವು.
ಆದರೆ ಅಚ್ಚರಿಯೆಂಬಂತೆ ‘ಬಾಹುಬಲಿ’ ಸರಣಿಯನ್ನೂ ಮೀರಿಸಿ ‘ಆದಿಪುರುಷ್’ಗೆ ಹಣ ಹೂಡಲಾಗಿದೆ. ಈ ಬಗ್ಗೆ ಪಿಂಕ್ವಿಲ್ಲಾ ಮಾಧ್ಯಮವು ನಿರ್ಮಾಪಕ ಭೂಷಣ್ ಕುಮಾರ್ ಅವರ ಮಾತುಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಅದರ ಪ್ರಕಾರ ‘ಆದಿಪುರುಷ್’ ಚಿತ್ರಕ್ಕಾಗಿ ಬರೋಬ್ಬರಿ 500 ಕೋಟಿ ರೂಗಳನ್ನು ವೆಚ್ಚ ಮಾಡಿದ್ದಾರೆ ನಿರ್ಮಾಪಕರು. ಇದರಲ್ಲಿ ಪ್ರಚಾರದ ವೆಚ್ಚಗಳನ್ನು ಸೇರಿಸಿಲ್ಲ. ಕೇವಲ ಚಿತ್ರಕ್ಕೆಂದೇ ಇಷ್ಟು ದೊಡ್ಡ ಮೊತ್ತವನ್ನು ಮೀಸಲಿಡಲಾಗಿದೆ.
ಭೂಷಣ್ ಕುಮಾರ್ ತಮ್ಮ ಮಾತಿನಲ್ಲಿ ‘ಆದಿಪುರುಷ್’ ಚಿತ್ರಕ್ಕಾಗಿ ಟಿಕೆಟ್ ಬೆಲೆ ಹೆಚ್ಚಿಸುವ ಬಗ್ಗೆಯೂ ಸೂಚನೆ ನೀಡಿದ್ದಾರೆ. ‘‘ಇದೊಂದು ದೊಡ್ಡ ಚಿತ್ರ. ಯಾವಾಗಲೂ ಇಂತಹ ಚಿತ್ರಗಳು ತಯಾರಾಗುವುದಿಲ್ಲ. ಚಿತ್ರಕ್ಕೆ ಹೌಸ್ಫುಲ್ ಬೋರ್ಡ್ ಬೀಳುತ್ತದೆ ಎಂಬ ವಿಶ್ವಾಸವಿದೆ. ಈವೆಂಟ್ ಸಿನಿಮಾ ಆಗಿರುವುದರಿಂದ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ಹೀಗಾಗಿ ಒಳ್ಳೆಯ ಬೆಲೆಯ ಮೂಲಕ ಚಿತ್ರದ ಬೇಡಿಕೆಯನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.
‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದರೆ, ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನೋನ್ ಸೀತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. 2023ರ ಜನವರಿಯಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂದು ಘೋಷಿಸಲಾಗಿದೆ. ಓಂ ರಾವುತ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:55 am, Fri, 3 June 22