‘ಭಾರತ್ ನಾಮ್ ಸಮ್ಮಾನ್’ ಮ್ಯೂಸಿಕ್ ಆಲ್ಬಂ: 22 ಭಾಷೆಗಳಲ್ಲಿ ದೇಶಭಕ್ತಿ ಗೀತೆ
‘ಭಾರತ್ ನಾಮ್ ಸಮ್ಮಾನ್’ ಹಾಡು ಭಾರತದ 22 ಭಾಷೆಗಳಲ್ಲಿ ಮೂಡಿಬಂದಿದೆ ಎಂಬುದು ವಿಶೇಷ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬಿಡುಗಡೆ ಮಾಡಿದ ಈ ಹಾಡಿನಲ್ಲಿ ಮಹೇಂದ್ರ ಮುಣೋತ್ ನಟಿಸಿದ್ದಾರೆ. ಈ ದೇಶಭಕ್ತಿ ಗೀತೆಯ ವಿಶೇಷ ಏನು? ಸಂಗೀತ ಯಾರದ್ದು? ಗಾಯಕರು ಯಾರು? ಪೂರ್ತಿ ಮಾಹಿತಿ ಇಲ್ಲಿದೆ ಓದಿ..

ನಟ, ನಿರ್ಮಾಪಕ ಮಹೇಂದ್ರ ಮುಣೋತ್ (Mahendra Munot) ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಒಂದು ವಿಶೇಷವಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಮೂಲದ ‘ಮೈ ಭಾರತ್ ಹೂ ಫೌಂಡೇಶನ್’ ಸ್ವಯಂ ಸೇವಾ ಸಂಸ್ಥೆಯು ‘ಭಾರತ್ ಕೋ ಭಾರತ್ ಹೀ ಬೋಲಾ ಜಾಯೇ ಇಂಡಿಯಾ ನಹಿ’ ಎಂಬ ಅಭಿಯಾನ ಆರಂಭಿಸಿದೆ. ‘ಭಾರತವನ್ನು ಭಾರತವೆಂದೇ ಕರೆಯಿರಿ, ಇಂಡಿಯಾ ಎಂದಲ್ಲ’ ಎಂಬುದು ಈ ವಾಕ್ಯದ ಅರ್ಥ. ಈ ಅಭಿಯಾನದ ಪ್ರಯುಕ್ತ ‘ಭಾರತ್ ಈಸ್ ಭಾರತ್ ನಾಟ್ ಇಂಡಿಯಾ’ (India) ಎಂಬ ಶೀರ್ಷಿಕೆಯಲ್ಲಿ ‘ಭರತ್ ನಾಮ್ ಸಮ್ಮಾನ್’ (Bharat Naam Samman) ಆಡಿಯೋ ಆಲ್ಬಂ ಬಿಡುಗಡೆ ಮಾಡಲಾಗಿದೆ.
ಭಾರತದ 22 ಭಾಷೆಗಳಲ್ಲಿ ‘ಭರತ್ ನಾಮ್ ಸಮ್ಮಾನ್’ ಹಾಡಿನ ಆಡಿಯೋ ಆಲ್ಬಂ ಹೊರಬಂದಿದೆ. ಕನ್ನಡ, ಹಿಂದಿ, ಇಂಗ್ಲಿಷ್, ರಾಜಸ್ಥಾನಿ ಸೇರಿದಂತೆ ಭಾರತದ ಬಹುತೇಕ ಎಲ್ಲ ಭಾಷೆಯಲ್ಲೂ ಈ ಹಾಡು ಮೂಡಿಬಂದಿದೆ ಎಂಬುದು ವಿಶೇಷ. ಖ್ಯಾತ ಸಂಗೀತ ನಿರ್ದೇಶಕ ದಿಲೀಪ್ ಸೇನ್ ಲತಾ ಹಯಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
‘ಭರತ್ ನಾಮ್ ಸಮ್ಮಾನ್’ ಆಡಿಯೋ ಆಲ್ಬಂ ಹಾಡಿಗೆ ಗಾಯಕರಾದ ಮೊಹಮ್ಮದ್ ಸಲಾಮತ್, ರೇಖಾ ರಾವ್, ದೀಪಕ್ ಮೊದಲಾದವರು ಧ್ವನಿ ನೀಡಿದ್ದಾರೆ. ಸ್ವಾತಂತ್ರೋತ್ಸವದ ಮಾಸದಲ್ಲೇ ಈ ಹಾಡು ಜನರ ಮುಂದೆ ಬಂದಿರುವುದು ವಿಶೇಷ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಈ ಮ್ಯೂಸಿಕ್ ಆಲ್ಬಂ ಬಿಡುಗಡೆ ಮಾಡಿದರು.
ಈ ಮ್ಯೂಸಿಕ್ ಆಲ್ಬಂನ ಕನ್ನಡ, ಇಂಗ್ಲಿಷ್, ರಾಜಸ್ಥಾನಿ ಮತ್ತು ಹಿಂದಿ ಅವತರಣಿಕೆಯ ವಿಡಿಯೋದಲ್ಲಿ ಕನ್ನಡ ಚಿತ್ರರಂಗ ನಟ, ನಿರ್ಮಾಪಕ ಮಹೇಂದ್ರ ಮುಣೋತ್ ಅವರು ಕಾಣಿಸಿಕೊಂಡಿದ್ದಾರೆ. ಕರ್ನಾಟಕದಿಂದ ರಾಜಸ್ಥಾನದವರೆಗೆ ಹಲವು ತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಮಹೇಂದ್ರ ಮುಣೋತ್ ಜೊತೆಗೆ ನೂರಾರು ಪ್ರಾದೇಶಿಕ ಭಾಷಾ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೇಶಭಕ್ತಿ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿದ ಸೆನ್ಸಾರ್ ಮಂಡಳಿ; ಕಾರಣ ಏನು?
ದೇಶಭಕ್ತಿ ಭಾವನೆಗಳನ್ನು ಪ್ರೇರೇಪಿಸುವಂತಿರುವ ಈ ಗೀತೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಗೀತೆಗೆ ಗಗನ್ ಆರ್. ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕ ಬಿ.ಪಿ. ಹರಿಹರನ್ ಅವರು ಈ ಹಾಡಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




