Puneeth Rajkumar: ಪುನೀತ್ ರಾಜ್‌ಕುಮಾರ್ ನಿಧನದ ಆಘಾತದಿಂದ ಕತ್ತಲಾವರಿಸಿದೆ; ಅಮಿತಾಭ್ ಬಚ್ಚನ್ ಸಂತಾಪ
ಕನ್ನಡ ಚಿತ್ರರಂಗದ ಶ್ರೇಷ್ಠ ನಟ ರಾಜ್‌ಕುಮಾರ್ ಅವರ ಮಗ ಪುನೀತ್ ರಾಜ್‌ಕುಮಾರ್ ಸಾವಿನ ಸುದ್ದಿ ಬಹಳ ಆಘಾತಕಾರಿಯಾಗಿದೆ. ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಕೇವಲ 46 ವರ್ಷವಾಗಿತ್ತು. ಈ ಸುದ್ದಿ ನಮ್ಮೆಲ್ಲರನ್ನು ತೀವ್ರ ಆಘಾತಕ್ಕೆ ತಳ್ಳಿದೆ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸಂತಾಪ ಸೂಚಿಸಿದ್ದಾರೆ.
ಯಾರೂ ಊಹಿಸಿರದ ರೀತಿಯಲ್ಲಿ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪ್ಪು ಸಾವಿಗೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಚಿತ್ರರಂಗದವರು ಕೂಡ ಸಂತಾಪ ಸೂಚಿಸಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿದ್ದ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಕೂಡ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಕೇವಲ 46ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್ ನಿಧನ ನನಗೆ ಅತ್ಯಂತ ದೊಡ್ಡ ಶಾಕ್ ಉಂಟುಮಾಡಿದೆ ಎಂದು ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ನಿನ್ನೆ ಜಿಮ್ನಲ್ಲಿ ವರ್ಕ್ಔಟ್ ಮುಗಿಸಿ, ಸುಸ್ತಾಗಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯ ಬಳಿಯಿದ್ದ ಆಸ್ಪತ್ರೆಗೆ ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಅವರನ್ನು ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅಪ್ಪು ನಿಧನದಿಂದ ಅವರ ಕುಟುಂಬಸ್ಥರು, ಲಕ್ಷಾಂತರ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಶಾಕ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್‌ಕುಮಾರ್ ಮೃತದೇಹವನ್ನು ಅಭಿಮಾನಿಗಳ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ರಾತ್ರಿಯಿಡೀ ಸಾವಿರಾರು ಅಭಿಮಾನಿಗಳು ತಮ್ಮ ಪ್ರೀತಿಯ ಅಪ್ಪುವನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡಿದ್ದಾರೆ.
T 4079 – .. a day of remorse and prayer .. two close to the family passed away today .. it is too dark ..
— Amitabh Bachchan (@SrBachchan) October 29, 2021
ಪುನೀತ್ ರಾಜ್‌ಕುಮಾರ್ ಅವರು ಬಚ್ಚನ್ ಕುಟುಂಬಕ್ಕೆ ಆಪ್ತರಾಗಿದ್ದ ಡಾ. ರಾಜ್‌ಕುಮಾರ್ ಅವರ ಮಗ. ನನ್ನ ಆತ್ಮೀಯ ಬಳಗದ ಇಬ್ಬರು ಇಂದು ನಮ್ಮನ್ನು ಅಗಲಿದ್ದಾರೆ. ಅದರಲ್ಲಿ ಒಬ್ಬರು ಕನ್ನಡದ ತಾರೆ ಪುನೀತ್ ರಾಜ್‌ಕುಮಾರ್. ಬೆಳಿಗ್ಗೆಯಿಂದ ಹತ್ತಿರದ ಮತ್ತು ಆತ್ಮೀಯರ ಎರಡು ಸಾವುಗಳು ಸಂಭವಿಸಿವೆ. ಈ ಬಗ್ಗೆ ನನಗೆ ಪದಗಳಲ್ಲಿ ಹೇಳಲಾಗದಷ್ಟು ದುಃಖ ಉಂಟಾಗಿದೆ. ಅದರಲ್ಲೂ ಕನ್ನಡ ಚಿತ್ರರಂಗದ ಶ್ರೇಷ್ಠ ನಟ ರಾಜ್‌ಕುಮಾರ್ ಅವರ ಮಗ ಪುನೀತ್ ರಾಜ್‌ಕುಮಾರ್ ಸಾವಿನ ಸುದ್ದಿ ಬಹಳ ಆಘಾತಕಾರಿಯಾಗಿದೆ. ಅಪ್ಪನ ಕಾರಣದಿಂದ ಮಾತ್ರವಲ್ಲದೆ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಕೇವಲ 46 ವರ್ಷವಾಗಿತ್ತು. ಇದು ನಮ್ಮೆಲ್ಲರನ್ನು ತೀವ್ರ ಆಘಾತಕ್ಕೆ ತಳ್ಳಿದೆ. ದಿವಂಗತ ರಾಜ್‌ಕುಮಾರ್ ಅವರ ಕುಟುಂಬಕ್ಕೆ ನಾನು ತುಂಬಾ ಹತ್ತಿರವಾಗಿದ್ದೇನೆ. ನನ್ನ ಸುತ್ತಲೂ ಕತ್ತಲೆ ಆವರಿಸಿಕೊಂಡಂತೆ ಭಾಸವಾಗುತ್ತಿದೆ. ಅವರ ಕುಟುಂಬ ಈ ಆಘಾತದಿಂದ ಹೊರಬರುವಂತಾಗಲಿ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳು ವಿದೇಶದಲ್ಲಿ ಓದುತ್ತಿರುವುದರಿಂದ ಅವರು ಇಂದು ಸಂಜೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ತಮ್ಮ ತಂದೆಯ ಅಂತಿಮ ದರ್ಶನ ಮಾಡಿದ ನಂತರ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಪುನೀತ್ ರಾಜ್‌ಕುಮಾರ್ ಸಮಾಧಿಯನ್ನು ನಿರ್ಮಿಸಲಾಗುವುದು.
ಇದನ್ನೂ ಓದಿ: Puneeth Rajkumar: ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ
Puneeth Rajkumar Songs: ಕಾಣದಂತೆ ಮಾಯವಾದನು!; ಪುನೀತ್ ರಾಜ್‌ಕುಮಾರ್ ಹಾಡಿದ ಟಾಪ್ 20 ಹಾಡುಗಳಿವು
Published On - 1:04 pm, Sat, 30 October 21