‘ಪುಷ್ಪ 2’ ಯುವಕರನ್ನು ಹಾಳು ಮಾಡುತ್ತಿದೆ: ತೆಲಂಗಾಣ ಸಚಿವ
Pushpa 2: ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಆದರೆ ಸಿನಿಮಾ ರಾಜಕೀಯ ನಾಯಕರ ಅವಕೃಪೆಗೆ ಪಾತ್ರವಾಗಿದೆ. ಅಲ್ಲು ಅರ್ಜುನ್ ಬಂಧನದ ಬಳಿಕ ತೆಲಂಗಾಣದಲ್ಲಿ ‘ಪುಷ್ಪ 2’ ಸಿನಿಮಾವನ್ನು ರಾಜಕೀಯ ದುರ್ಬೀನಿನಂದ ನೋಡಲಾಗುತ್ತಿದೆ. ಇದೀಗ ಸಚಿವರೊಬ್ಬರು ‘ಪುಷ್ಪ 2’ ಸಿನಿಮಾ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಜಯಗಳಿಸಿದೆ. ಬಾಕ್ಸ್ ಆಫೀಸ್ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಆದರೆ ಸಿನಿಮಾದ ಬಗ್ಗೆ ಕೆಲವರು ಉದ್ದೇಶಪೂರ್ವಕವಾಗಿ ಋಣಾತ್ಮಕ ಹೇಳಿಕೆಗಳನ್ನು ಹೊರಬಿಡುತ್ತಿದ್ದಾರೆ. ಅದರಲ್ಲೂ ‘ಪುಷ್ಪ 2’ ಸಿನಿಮಾವನ್ನು ತೆಲಂಗಾಣದಲ್ಲಿ ರಾಜಕೀಯ ದುರ್ಬೀನಿನಿಂದ ನೋಡಲು ಪ್ರಾರಂಭಿಸಲಾಗಿದ್ದು, ಸಿನಿಮಾ ನೋಡಿದ ತೆಲಂಗಾಣ ಸಿನಿಮಾಟೊಗ್ರಫಿ ಸಚಿವರೊಬ್ಬರು ಸಿನಿಮಾದ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಾರೆ.
ಸಂಧ್ಯಾ ಚಿತ್ರಮಂದಿರದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್ ರೆಡ್ಡಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಿಮಗೆ ‘ಪುಷ್ಪ 2’ ಒಳ್ಳೆಯ ಸಿನಿಮಾ ಎನಿಸಿದರೆ ನೋಡಿ, ನಾನೂ ಸಹ ಆ ಸಿನಿಮಾ ನೋಡಿದೆ. ಆದರೆ ಸಿನಿಮಾ ನೋಡಿದ ಬಳಿಕ ಇನ್ನು ಮುಂದೆ ಆ ರೀತಿಯ ಯಾವುದೇ ಸಿನಿಮಾ ನೋಡಬಾರದು ಎಂದು ನಿರ್ಧರಿಸಿದ್ದೇನೆ. ಇನ್ನು ಮುಂದೆ ಕೇವಲ ಐತಿಹಾಸಿಕ, ಧಾರ್ಮಿಕ ಮತ್ತು ತೆಲಂಗಾಣಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ಮಾತ್ರವೇ ನಾನು ನೋಡುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ:‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು
ಮುಂದುವರೆದು ಮಾತನಾಡಿದ ಅವರು, ‘ನನ್ನ ಮೂರು ಗಂಟೆಯ ಕೆಲಸಗಳನ್ನು ನಿಲ್ಲಿಸಿ ಸಿನಿಮಾ ನೋಡಿ ಕೊನೆಗೆ ನನಗೆ ಅರ್ಥವಾಗಿದ್ದು ಏನೆಂದರೆ ಈ ಸಿನಿಮಾ ಯುವಕರನ್ನು ಹಾಳು ಮಾಡುತ್ತದೆ’ ಎಂಬುದಷ್ಟೆ. ಪತ್ರಿಕಾಗೋಷ್ಠಿಯ ಬಳಿಕ ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.
ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಘಟನೆ ಹಾಗೂ ಅದರ ಬಳಿಕ ಅಲ್ಲು ಅರ್ಜುನ್ ಬಂಧವಾದ ಮೇಲೆ ‘ಪುಷ್ಪ 2’ ಸಿನಿಮಾವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಲಾಗಿದೆ. ‘ಪುಷ್ಪ 2’ ಸಿನಿಮಾ ರಾಜಕೀಯ ವಿಷಯವಾಗಿಬಿಟ್ಟಿದೆ. ನಿನ್ನೆ ಸಹ ಅಲ್ಲು ಅರ್ಜುನ್ ಪತ್ರಿಕಾಗೋಷ್ಠಿ ನಡೆಸಿ ನಡೆದಿರುವ ಘಟನೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ತಮಗೆ ಯಾವುದೇ ರಾಜಕೀಯ ನಾಯಕರ ಬಗ್ಗೆಯಾಗಲಿ, ಪಕ್ಷಗಳ ಬಗ್ಗೆ ಆಗಲಿ ಬೇಸರ ಇಲ್ಲ ಬದಲಿಗೆ ತೆಲಂಗಾಣ ಸರ್ಕಾರದ ಬಗ್ಗೆ ನಮಗೆ ಗೌರವೇ ಇದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ