ಮೋದಿ ವಿಶೇಷ ವ್ಯಕ್ತಿ ಏಕೆ ಎಂಬುದನ್ನು ಸ್ವ ಅನುಭವದಲ್ಲಿ ವಿವರಿಸಿದ ಮಾಧವನ್
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದಂದು, ನಟ ಆರ್. ಮಾಧವನ್ ಅವರು ತಮ್ಮ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ. ಮೋದಿ ಅವರ ಅಸಾಧಾರಣ ಗಮನ ಮತ್ತು ಸೂಕ್ಷ್ಮತೆಯನ್ನು ಮಾಧವನ್ ಪ್ರಶಂಸಿಸಿದ್ದಾರೆ. ‘ರಾಕೆಟ್ರಿ’ ಚಿತ್ರೀಕರಣದ ಸಮಯದಲ್ಲಿ ಮೋದಿ ಅವರು ಮಾಧವನ್ ನಂಬಿ ನಾರಾಯಣ್ ಲುಕ್ನಲ್ಲಿ ಇದ್ದರೂ ತಕ್ಷಣ ಗುರುತಿಸಿದ್ದನ್ನು ಅವರು ವಿವರಿಸಿದ್ದಾರೆ.

ಇಂದು (ಸೆಪ್ಟೆಂಬರ್ 17) ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಅವರಿಗೆ ದೇಶ-ವಿದೇಶದ ಗಣ್ಯರು ಬರ್ತ್ಡೇ ಸಂದೇಶ ಕಳುಹಿಸುತ್ತಿದ್ದಾರೆ. ಮೋದಿ ಅವರಿಗೆ 75 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ನಟ ಆರ್ ಮಾಧವನ್ (R Madhavan) ಅವರು ಮೋದಿ ಭೇಟಿ ಮಾಡಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಮೋದಿ ತುಂಬಾನೇ ಸೂಕ್ಷ್ಮ ವ್ಯಕ್ತಿ ಮತ್ತು ಎಲ್ಲವನ್ನೂ ಗಮನಿಸುತ್ತಾ ಇರುತ್ತಾರೆ ಎಂದು ಅವರು ಹೇಳಿದ್ದಾರೆ.
‘ಗುಜರಾತ್ ಸಿಎಂ ಆಗಿದ್ದಾಗಲೇ ಮೋದಿ ಬಗ್ಗೆ ತಿಳಿದಿತ್ತು. ನಾನು ರಾಕೆಟ್ರಿ ಸಿನಿಮಾ ಮಾಡುತ್ತಿರುವಾಗ ಮೋದಿ ಅವರ ಅಸಾಧಾರಣ ಗಮನ ವೈಖರಿಯ ಅನುಭವ ನನಗಾಯಿತು. ಮೋದಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಲ್ಲಿ ಸಿನಿಮಾ ಕ್ಷೇತ್ರದ ಅನೇಕ ಜನರು ಸೇರಿದ್ದರು. ಎಲ್ಲರೂ ಅವರನ್ನು ಭೇಟಿ ಮಾಡಲು ಮತ್ತು ಫೋಟೋ ಕ್ಲಿಕ್ಕಿಸಿಕೊಳ್ಳಲು ಉತ್ಸುಕರಾಗಿದ್ದರು’ ಎಂದರು ಮಾಧವನ್.
‘ನಾನು ಕೂಡ ಅಲ್ಲಿದ್ದೆ – ಆದರೆ ನಾನಾಗಿ ಅಲ್ಲ. ನಾನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಮಹಾನ್ ವಿಜ್ಞಾನಿ ನಂಬಿ ನಾರಾಯಣ್ ಅವರ ಲುಕ್ನಲ್ಲಿದ್ದೆ. ದೊಡ್ಡ ಗಡ್ಡ, ಪೂರ್ಣ ಮೇಕಪ್‌ನೊಂದಿಗೆ ಮೋದಿ ಭೇಟಿ ಆದೆ. ಅವರು ನನ್ನ ಗುರುತಿಸುತ್ತಾರೋ ಇಲ್ಲವೋ ಎಂದುಕೊಂಡಿದ್ದೆ. ನೋಡಿದ ತಕ್ಷಣ ಅವರು ‘ಮಾಧವನ್ ಜಿ, ನೀವು ನಂಬಿ ನಾರಾಯಣ್‌ನಂತೆ ಕಾಣುತ್ತೀರಿ ಎಂದರು’ ಎಂದಿದ್ದಾರೆ ಮಾಧವನ್.
#MYMODISTORY When I was preparing for my movie Rocketry, I got a personal experience of Modi ji’s extraordinary attentiveness. This was right after Uri had released and become a huge success. Modi ji was visiting Mumbai for an event at the, where a lot of people from the film… pic.twitter.com/aubALNq7Gx
— Ranganathan Madhavan (@ActorMadhavan) September 17, 2025
‘ಸಿನಿಮಾ ಶೂಟಿಂಗ್ ಶುರುವಾಯಿತಾ ಎಂದು ಕೇಳಿದರು. ನಾನು ದಿಗ್ಭ್ರಮೆಗೊಂಡೆ. ಇಲ್ಲಿದ್ದರು ಭಾರತದ ಪ್ರಧಾನಿ, ರಾಷ್ಟ್ರ ಮತ್ತು ಪ್ರಪಂಚದ ಜವಾಬ್ದಾರಿಗಳು ಅವರಿಗೆ ಇರುತ್ತವೆ. ಆದರೂ ಅವರು ನನ್ನನ್ನು ತಕ್ಷಣ ಗುರುತಿಸಿದರು ಮಾತ್ರವಲ್ಲದೆ, ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ನಿಖರವಾಗಿ ನೆನಪಿಸಿಕೊಂಡರು’ ಎಂದಿದ್ದಾರೆ ಮಾಧವನ್.
ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾದಲ್ಲಿ ಆರ್. ಮಾಧವನ್? ಹಿರಿದಾಗುತ್ತಿದೆ ಪಾತ್ರವರ್ಗ
‘ಆ ದಿನ, ಮೊದಲ ಬಾರಿಗೆ, ನಾನು ಅವರೊಂದಿಗೆ ಸೆಲ್ಫಿ ತೆಗೆದುಕೊಂಡೆ. ಆ ಸಮಯದಲ್ಲಿ ನಮ್ಮಿಬ್ಬರಿಗೂ ಒಂದೇ ರೀತಿಯ ಗಡ್ಡವಿತ್ತು. ಅದು ನನ್ನ ಅತ್ಯಂತ ಪ್ರೀತಿಯ ನೆನಪುಗಳಲ್ಲಿ ಒಂದಾಗಿದೆ. ನರೇಂದ್ರ ಮೋದಿ ಅವರು ಕೇವಲ ದೂರದೃಷ್ಟಿಯ ನಾಯಕರಲ್ಲ. ಬದಲಾಗಿ ಜನರನ್ನು ಗಮನಿಸುವ, ನೆನಪಿಸಿಕೊಳ್ಳುವ ಮತ್ತು ಅತ್ಯಂತ ವೈಯಕ್ತಿಕ ರೀತಿಯಲ್ಲಿ ಮೌಲ್ಯೀಕರಿಸುವ ಮನುಷ್ಯ. ನಿಮಗೆ 75ನೇ ವರ್ಷದ ಹುಟ್ಟುಹಬ್ಬದ ಶುಭಾಶಯ. ನಿಮಗೆ ದೇವರು ಆಯುಷ್ಯ ಕೊಟ್ಟು ಕಾಪಾಡಲಿ’ ಎಂದು ಮಾಧವನ್ ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:32 am, Wed, 17 September 25








