2ನೇ ಮದುವೆ ಬಳಿಕ ಎಷ್ಟು ಖುಷಿಯಾಗಿ ಇದ್ದಾರೆ ನೋಡಿ ಸಮಂತಾ
ಈ ಮೊದಲು ವಿಚ್ಛೇದನ, ಅನಾರೋಗ್ಯ ಮುಂತಾದ ಕಾರಣಗಳಿಂದ ಸಮಂತಾ ಅವರು ಕುಗ್ಗಿದ್ದರು. ಆದರೆ ಈಗ ಅವರ ಮುಖದಲ್ಲಿ ನಗು ಅರಳಿದೆ. ಅದಕ್ಕೆಲ್ಲ ಕಾರಣ ಆಗಿರುವುದು 2ನೇ ಮದುವೆ. ನಿರ್ದೇಶಕ ರಾಜ್ ನಿಡಿಮೋರು ಜೊತೆ ಮದುವೆ ಆದ ಬಳಿಕ ಅವರು ತುಂಬಾ ಖುಷಿಯಾಗಿದ್ದಾರೆ.

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇತ್ತೀಚೆಗೆ 2ನೇ ಮದುವೆ ಆದರು. ಈ ಮೊದಲು ಟಾಲಿವುಡ್ ನಟ ನಾಗಚೈತನ್ಯ ಜೊತೆ ಸಮಂತಾ ಮದುವೆ ನಡೆದಿತ್ತು. ಬಳಿಕ ಅವರಿಬ್ಬರು ವಿಚ್ಛೇದನ ಪಡೆದುಕೊಂಡರು. ಈಗ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ಸಮಂತಾ ಅವರು 2ನೇ ಮದುವೆ ಆಗಿದ್ದಾರೆ. ಬಹಳ ಸರಳವಾಗಿ ಅವರ ವಿವಾಹ ಸಮಾರಂಭ ನಡೆಯಿತು. ಮದುವೆಯ ಕೆಲವು ಫೋಟೋಗಳು ಲಭ್ಯವಾಗಿವೆ. 2ನೇ ಮದುವೆ ಬಳಿಕ ಸಮಂತಾ ಅವರು ತುಂಬ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ನಗುವನ್ನು ಕಂಡು ಆಪ್ತರಿಗೆ ಸಖತ್ ಖುಷಿ ಆಗಿದೆ.
ಬಾಲಿವುಡ್ನಲ್ಲಿ ರಾಜ್ ನಿಡಿಮೋರು ಅವರು ಫೇಮಸ್ ಆಗಿದ್ದಾರೆ. ‘ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಗೆ ನಿರ್ದೇಶನ ಮಾಡುವ ಮೂಲಕ ಅವರು ಹೆಚ್ಚು ಜನಪ್ರಿಯತೆ ಪಡೆದರು. ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ರಾಜ್ ನಿಡಿಮೋರು ಮತ್ತು ಸಮಂತಾ ರುತ್ ಪ್ರಭು ಅವರು ಜೊತೆಯಾಗಿ ಕೆಲಸ ಮಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು.
ಸಮಂತಾ ಮತ್ತು ರಾಜ್ ನಿಡಿಮೋರು ಮದುವೆಯ ಮಹೆಂದಿ ಶಾಸ್ತ್ರದ ಫೋಟೋಗಳನ್ನು ಅವರ ಸ್ನೇಹಿತೆ ಮೇಘನಾ ವಿನೋದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೈಗೆ ಮದರಂಗಿ ಹಚ್ಚಿಕೊಂಡು ಕುಳಿತ ಸಮಂತಾ ಅವರು ಸಿಕ್ಕಾಪಟ್ಟೆ ಖುಷಿಯಿಂದ ನಕ್ಕಿದ್ದಾರೆ. ಆ ಕ್ಷಣವನ್ನು ರಾಜ್ ನಿಡಿಮೋರು ಅವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
View this post on Instagram
ರಾಜ್ ನಿಡಿಮೋರು ಕುಟುಂಬಕ್ಕೆ ಸಮಂತಾ ಅವರು ಕಾಲಿಟ್ಟಿದ್ದಾರೆ. ಅವರಿಗೆ ರಾಜ್ ಸಹೋದರಿ ಶೀತಲ್ ನಿಡಿಮೋರು ಸ್ವಾಗತ ಕೋರಿದ್ದಾರೆ. ಸೊಸೆಯನ್ನು ಮನೆ ತುಂಬಿಸಿಕೊಂಡ ಕ್ಷಣದ ಫೋಟೋವನ್ನು ಶೀತಲ್ ಅವರು ಹಂಚಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ತುಂಬಾ ಸರಳವಾಗಿ ನಡೆಯಿತು ಸಮಂತಾ ಮದುವೆ: ಫೋಟೋ ಗ್ಯಾಲರಿ ನೋಡಿ..
ಇತ್ತೀಚಿನ ಕೆಲವು ವರ್ಷಗಳಿಂದ ಸಮಂತಾ ಮತ್ತು ರಾಜ್ ನಿಡಿಮೋರು ಅವರು ಆಪ್ತವಾಗಿದ್ದರು. ಆದರೆ ತಮ್ಮ ಸಂಬಂಧದ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಅವರಿಬ್ಬರು ಒಟ್ಟಿಗೆ ಇರುವ ಹಲವು ಫೋಟೋಗಳು ವೈರಲ್ ಆಗುತ್ತಿದ್ದವು. ಅಂತಿಮವಾಗಿ ಮದುವೆ ಆಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸಮಂತಾ ಅವರಿಗೆ ಈಗ 38 ವರ್ಷ ವಯಸ್ಸು. ರಾಜ್ ನಿಡಿಮೋರು ಅವರಿಗೆ 50 ವರ್ಷ ವಯಸ್ಸು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




