
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಮುಂಗಡ ಬುಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿಯೇ ಜಾಗತಿಕ ಮಟ್ಟದಲ್ಲಿ 20 ಕೋಟಿ ರೂ.ಗಳ ಗಡಿಯನ್ನು ದಾಟುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಈ ಮಾಸ್-ಆ್ಯಕ್ಷನ್ ಥ್ರಿಲ್ಲರ್ ಚಿತ್ರವು ಬಿಡುಗಡೆಗೆ ಇನ್ನೂ ನಾಲ್ಕು ದಿನಗಳು ಬಾಕಿ ಇರುವಾಗಲೇ ಭರ್ಜರಿ ಪ್ರಿ-ಸೇಲ್ಸ್ ದಾಖಲಿಸುತ್ತಿದೆ. ಭಾರತದಲ್ಲಿ ಅಕ್ಟೋಬರ್ 10ರಂದು ಮುಂಗಡ ಬುಕಿಂಗ್ ಅಧಿಕೃತವಾಗಿ ಪ್ರಾರಂಭವಾಯಿತು.
ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಒಂದು ದಿನ ಮುಂಚಿತವಾಗಿ ಟಿಕೆಟ್ ಮಾರಾಟ ಶುರುವಾಗಿದ್ದರೆ, ಕೇರಳದಲ್ಲಿ ಅಕ್ಟೋಬರ್ 11ರ ಬೆಳಿಗ್ಗೆ ಬುಕಿಂಗ್ ಆರಂಭವಾಯಿತು. ಈ ವಿಳಂಬದ ನಡುವೆಯೂ ಜೈಲರ್ 2 ವಿಶ್ವದಾದ್ಯಂತ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಕ್ಟೋಬರ್ 11ರ ಬೆಳಗಿನ ವೇಳೆಗೆ ಚಿತ್ರದ ಜಾಗತಿಕ ಮುಂಗಡ ಬುಕಿಂಗ್ ಸಂಗ್ರಹವು 20 ಕೋಟಿ ರೂ.ಗಳನ್ನು ದಾಟಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿಯೇ ಸುಮಾರು 2 ಮಿಲಿಯನ್ ಡಾಲರ್‌ಗಳಷ್ಟು ಪ್ರಿ-ಸೇಲ್ಸ್ ದಾಖಲಾಗಿದೆ.
ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಂಗಡ ಬುಕಿಂಗ್ ಆರಂಭವಾಗದಿದ್ದರೂ, ದೇಶಾದ್ಯಂತ ಒಂದೇ ದಿನದಲ್ಲಿ 4 ಕೋಟಿ ರೂ.ಗೂ ಅಧಿಕ ಒಟ್ಟು ಮೊತ್ತದ ಟಿಕೆಟ್ ಮಾರಾಟವಾಗಿದೆ. ಕೇವಲ ಭಾರತದ ಮೊದಲ ದಿನದ ಮುಂಗಡ ಬುಕಿಂಗ್‌ನಿಂದಲೇ 3.53 ಕೋಟಿ ರೂ.ಗಳಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಆಗಿದೆ. ನಿರೀಕ್ಷೆಯಂತೆ ತಮಿಳುನಾಡಿನಿಂದಲೇ ಭಾರತದ ಒಟ್ಟು ಪ್ರಿ-ಸೇಲ್ಸ್‌ನ ಶೇಕಡ 90ರಷ್ಟನ್ನು ಹೊಂದಿದೆ. ಕೇವಲ ಚೆನ್ನೈ ನಗರವೊಂದರಲ್ಲೇ 1.63 ಕೋಟಿ ರೂ.ಗಳ ಮುಂಗಡ ಟಿಕೆಟ್ ಮಾರಾಟವಾಗಿದೆ. ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ಮಲಯಾಳಂ ಮತ್ತು ಹಿಂದಿ ಡಬ್ಬಿಂಗ್ ಆವೃತ್ತಿಗಳ ಬುಕಿಂಗ್ ಪೂರ್ಣಗೊಂಡ ಬಳಿಕ ಈ ಅಂಕಿಅಂಶಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ‘ಸನ್ ಪಿಕ್ಚರ್ಸ್’ ಮೂಲಕ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ರಜನಿಕಾಂತ್ ಜತೆಗೆ ರಮ್ಯಾ ಕೃಷ್ಣನ್, ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗದಂತೆ ಈ ಚಿತ್ರದಲ್ಲೂ ಮೋಹನ್ಲಾಲ್ ಮತ್ತು ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್‌ನಲ್ಲಿ ಬಿಡುಗಡೆ ಬಳಿಕ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರಬಹುದು ಎಂಬ ಗುಸುಗುಸು ಅಭಿಮಾನಿಗಳಲ್ಲಿ ಜೋರಾಗಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಖಚಿತತೆ ಸಿಕ್ಕಿಲ್ಲ.
ಇದನ್ನೂ ಓದಿ: ಸೀಕ್ವೆಲ್ ದ್ವೇಷಿಸೋ ರಜನಿಕಾಂತ್ ‘ಜೈಲರ್ 2’ ಒಪ್ಪಿದ್ದೇಕೆ? ಇಲ್ಲಿದೆ ಕಾರಣ
ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿರುವ ‘ಜೈಲರ್ 2’ ಚಿತ್ರವು 2 ಗಂಟೆ 45 ನಿಮಿಷಗಳ ಅವಧಿ ಹೊಂದಿದ್ದು, ಯುಎ 16+ ಪ್ರಮಾಣಪತ್ರ ಪಡೆದುಕೊಂಡಿದೆ. ಭರ್ಜರಿ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಅಕ್ಟೋಬರ್ 15ರಂದು ಅದ್ದೂರಿಯಾಗಿ ತೆರೆಗೆಪ್ಪಳಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.