ಪ್ರೇಕ್ಷಕರೇ ಇಲ್ಲದೇ ರಜನಿಕಾಂತ್ ಸಿನಿಮಾ ಕ್ಯಾನ್ಸಲ್; ‘ಲಾಲ್ ಸಲಾಂ’ ಚಿತ್ರಕ್ಕೆ ಹಿನ್ನಡೆ
ರಜನಿಕಾಂತ್ ಅಭಿನಯದ ಸಿನಿಮಾಗಳ ಬಗ್ಗೆ ಎಲ್ಲ ರಾಜ್ಯಗಳಲ್ಲೂ ಒಂದು ಮಟ್ಟದ ಕ್ರೇಜ್ ಇದ್ದೇ ಇರುತ್ತದೆ. ಆದರೆ ಇಂದು (ಫೆಬ್ರವರಿ 9) ತೆರೆಕಂಡಿರುವ ‘ಲಾಲ್ ಸಲಾಂ’ ಸಿನಿಮಾಗೆ ತೆಲುಗು ಭಾಷಿಕ ರಾಜ್ಯಗಳಲ್ಲಿ ಹಿನ್ನಡೆ ಆಗಿದೆ. ಚಿತ್ರಮಂದಿರದತ್ತ ಪ್ರೇಕ್ಷಕರೇ ಬಂದಿಲ್ಲ ಎಂಬ ಕಾರಣಕ್ಕೆ ಅನೇಕ ಕಡೆಗಳಲ್ಲಿ ‘ಲಾಲ್ ಸಲಾಂ’ ಶೋ ಕ್ಯಾನ್ಸಲ್ ಆಗಿದೆ. ಈ ಚಿತ್ರಕ್ಕೆ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಬಂಡವಾಳ ಹೂಡಿದೆ.
ನಟ ರಜನಿಕಾಂತ್ (Rajinikanth) ಅವರು ಕಳೆದ ವರ್ಷ ‘ಜೈಲರ್’ ಸಿನಿಮಾ ಮೂಲಕ ಭಾರಿ ಸದ್ದು ಮಾಡಿದ್ದರು. ಹಾಗಾಗಿ ಅವರ ಹೊಸ ಸಿನಿಮಾ ಮೇಲೆ ನಿರೀಕ್ಷೆ ಮೂಡುವುದು ಸಹಜ. ಈಗ ರಜನಿಕಾಂತ್ ನಟಿಸಿರುವ ‘ಲಾಲ್ ಸಲಾಂ’ ಸಿನಿಮಾ (Lal Salaam Movie) ಬಿಡುಗಡೆ ಆಗಿದೆ. ತಮಿಳಿನ ಈ ಚಿತ್ರವು ತೆಲುಗಿಗೂ ಡಬ್ ಆಗಿ ತೆರೆಕಂಡಿದೆ. ಅಚ್ಚರಿ ಏನೆಂದರೆ, ಈ ಸಿನಿಮಾಗೆ ತೆಲುಗು ಭಾಷಿಕ ರಾಜ್ಯಗಳಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಆಂಧ್ರ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆಯಿಂದಾಗಿ ‘ಲಾಲ್ ಸಲಾಂ’ ಸಿನಿಮಾದ ಶೋ ಕ್ಯಾನ್ಸಲ್ ಮಾಡಲಾಗಿದೆ ಎಂದು ವರದಿ ಆಗಿದೆ. ರಜನಿಕಾಂತ್ ನಟನೆಯ ಸಿನಿಮಾಗೆ (Rajinikanth New Movie) ಈ ರೀತಿ ಆಗಿರುವುದು ಅಚ್ಚರಿ ಮೂಡಿಸಿದೆ.
ತೆಲುಗಿಗೆ ಡಬ್ ಆದ ‘ಜೈಲರ್’ ಸಿನಿಮಾಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಒಟ್ಟು 47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎಂಬ ಮಾಹಿತಿ. ಅದಕ್ಕೆ ಹೋಲಿಸಿದರೆ ‘ಲಾಲ್ ಸಲಾಂ’ ಸಿನಿಮಾ ಹೀನಾಯವಾಗಿ ಮುಗ್ಗರಿಸಿದಂತೆ ಆಗಿದೆ. ಪ್ರೇಕ್ಷಕರೇ ಇಲ್ಲದೇ ತೆಲುಗು ವರ್ಷನ್ನ ಶೋಗಳನ್ನು ರದ್ದು ಮಾಡಲಾಗಿದ್ದು, ಕೆಲವರಿಗೆ ಟಿಕೆಟ್ ಹಣವನ್ನು ರೀ-ಫಂಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ರಜನಿಕಾಂತ್ ಅಭಿಮಾನಿಗಳಿಗೆ ನಿಜಕ್ಕೂ ಇದು ಬೇಸರ ಮೂಡಿಸಿದೆ.
ಇದನ್ನೂ ಓದಿ: 40 ನಿಮಿಷದ ಪಾತ್ರ; ಪ್ರತಿ ನಿಮಿಷಕ್ಕೆ 1 ಕೋಟಿ ರೂ. ಸಂಭಾವನೆ: ದುಬಾರಿ ರಜನಿಕಾಂತ್
‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ನಿರ್ಮಾಣ ಆಗಿರುವ ‘ಲಾಲ್ ಸಲಾಂ’ ಸಿನಿಮಾಗೆ ರಜನಿಕಾಂತ್ ಅವರ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ಒಂದು ಗಂಭೀರವಾದ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಿಂದೂ-ಮುಸ್ಲಿಂ ನಡುವಿನ ಘರ್ಷಣೆ ಮತ್ತು ಸಾಮರಸ್ಯದ ಕಹಾನಿಯನ್ನು ಈ ಸಿನಿಮಾಲ್ಲಿ ತೋರಿಸಲಾಗಿದೆ. ಆದರೆ ಮೊದಲ ದಿನವೇ ಈ ಚಿತ್ರವನ್ನು ನೋಡಲು ತೆಲುಗು ಮಂದಿ ಆಸಕ್ತಿ ತೋರಿಸಿಲ್ಲ. ಸರಿಯಾದ ರೀತಿಯಲ್ಲಿ ಪ್ರಚಾರ ಮಾಡದೇ ಇರುವುದೇ ಈ ರೀತಿ ಆಗಲು ಕಾರಣ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೊಯಿದ್ದೀನ್ ಭಾಯ್ ಆಗಿ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಬಂದ ರಜನಿಕಾಂತ್
ಹಿನ್ನಡೆ ಆಗಲು ಇನ್ನೊಂದು ಕಾರಣ ಏನೆಂದರೆ, ಈ ಸಿನಿಮಾದಲ್ಲಿ ರಜನಿಕಾಂತ್ ಅವರದ್ದು ಮುಖ್ಯಪಾತ್ರ ಅಲ್ಲ. ಒಂದು ಅತಿಥಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮೊಯಿದ್ದೀನ್ ಭಾಯ್ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಟ್ರೇಲರ್ನಲ್ಲಿ ಆ ಪಾತ್ರ ಹೈಲೈಟ್ ಆಗಿದೆ. ಅವರ ಗೆಟಪ್ ನೋಡಿ ಅಭಿಮಾನಿಗಳಿಗೆ ಕೌತುಕ ಮೂಡಿದೆ. ಅತಿಥಿ ಪಾತ್ರವಾದರೂ ಕೂಡ ಹೆಚ್ಚಿನ ಸ್ಕ್ರೀನ್ ಸ್ಪೇಸ್ ನೀಡಲಾಗಿದೆ. ಹಾಗಿದ್ದರೂ ಕೂಡ ಮೊದಲ ದಿನ ಹೆಚ್ಚಿನ ಜನರನ್ನು ಚಿತ್ರಮಂದಿರದತ್ತ ಸೆಳೆದುಕೊಳ್ಳಲು ಈ ಸಿನಿಮಾ ವಿಫಲವಾಗಿದೆ. ರಜನಿಕಾಂತ್ ಜೊತೆ ವಿಷ್ಣು ವಿಶಾಲ್, ವಿಕ್ರಾಂತ್ ಮುಂತಾದವರು ‘ಲಾಲ್ ಸಲಾಂ’ ಚಿತ್ರದಲ್ಲಿ ನಟಿಸಿದ್ದಾರೆ. ಮಾಜಿ ಕ್ರಿಕೆಟರ್ ಕಪಿಲ್ ದೇವ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ