ಸಿನಿಮಾ ಬಜೆಟ್ 2000, ಗಳಿಸಿದ್ದು 70 ಲಕ್ಷ: ಯಾವುದು ಆ ಸಿನಿಮಾ?
Movie Budget: ಸಿನಿಮಾ ಮೇಲೆ ನೂರು ಕೋಟಿ ಬಂಡವಾಳ ಹಾಕಿ 200 ಕೋಟಿ ಗಳಿಸುವುದನ್ನು ಬ್ಲಾಕ್ ಬಸ್ಟರ್ ಎಂದು ಕರೆಯಲಾಗುತ್ತಿದೆ. ಆದರೆ ಕೇವಲ 2000 ರೂಪಾಯಿ ಬಜೆಟ್ನ ಸಿನಿಮಾ ಒಂದು 70 ಲಕ್ಷ ರೂಪಾಯಿ ಗಳಿಸಿತ್ತು. ಯಾವುದು ಆ ಸಿನಿಮಾ?
ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಹೆಚ್ಚುತ್ತಲೇ ಸಾಗುತ್ತಿದ್ದು ನೂರು ಕೋಟಿ ಸಿನಿಮಾ ಎಂಬುದು ಈಗ ಮಾಮೂಲಾಗಿಬಿಟ್ಟಿದೆ. ನೂರಾರು ಕೋಟಿ ಬಜೆಟ್ನ ಸಿನಿಮಾಗಳು ಬಜೆಟ್ಗಿಂತಲೂ ದುಪ್ಪಟ್ಟು ಹಣ ಮಾಡಿದರೆ ಅದನ್ನೇ ಬ್ಲಾಕ್ ಬಸ್ಟರ್ ಎಂದು ಕರೆಯಲಾಗುತ್ತಿದೆ. ಆದರೆ ಸಿನಿಮಾ ಒಂದಿದೆ ಅದಕ್ಕೆ ಹಾಕಿರುವ ಬಜೆಟ್ ಎರಡು ಸಾವಿರ ರೂಪಾಯಿ, ಸಿನಿಮಾ ಗಳಿಸಿದ್ದು ಎಪ್ಪತ್ತು ಲಕ್ಷ ರೂಪಾಯಿ. ಭಾರತದ ಅತಿ ಹೆಚ್ಚು ಗಳಿಕೆಯ ಸಿನಿಮಾ ಕೂಡ ಇಷ್ಟು ದೊಡ್ಡ ಮೊತ್ತದ ಬಂಡವಾಳದ ಮೇಲಿನ ಲಾಭ (Return on Investment) ಮಾಡಿಲ್ಲ. ಯಾವುದು ಆ ಸಿನಿಮಾ? ನಿರ್ದೇಶಕ ಯಾರು?
ಕೇವಲ 2000 ರೂಪಾಯಿ ಬಜೆಟ್ ಹಾಕಿ 70 ಲಕ್ಷ ರೂಪಾಯಿ ಲಾಭ ಮಾಡಿರುವ ಜಾಣ ನಿರ್ದೇಶಕ ಕಮ್ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ. ಎರಡು ದಶಕದ ಹಿಂದೆ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಅಲೆ ಎಬ್ಬಿಸಿದ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ಕಳಪೆ, ಡಿ ಗ್ರೇಡ್ ಸಿನಿಮಾಗಳನ್ನು ತೆಗೆಯುತ್ತಿದ್ದಾರೆ ಎಂಬ ದೂರು ದೊಡ್ಡಮಟ್ಟದಲ್ಲಿದೆ. ಅಸಲಿ ವಿಷಯವೆಂದರೆ ಯಾವುದೇ ರೀತಿಯ ಸಿನಿಮಾ ತೆಗೆದರೂ ವರ್ಮಾ ಲಾಭವನ್ನಂತೂ ಮಾಡುತ್ತಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ವರ್ಮಾರ ಇತ್ತೀಚೆಗಿನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗುತ್ತಿವೆ ಎಂಬ ಟೀಕೆಗೆ ಉತ್ತರಿಸಿದ ವರ್ಮಾ, ‘ಸಿನಿಮಾದ ಸಕ್ಸಸ್ ಅನ್ನು ನೀವು ಬೇರೆ ರೀತಿ ಅಳೆಯುತ್ತೀರಿ ನಾನು ಬೇರೆ ರೀತಿ ಅಳೆಯುತ್ತೀನಿ. ಇಂತಿಷ್ಟು ಮೊತ್ತ ಕಲೆಕ್ಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಫ್ಲಾಪ್ ಎಂದು ಕೆಲವರು ನಿರ್ಧರಿಸುತ್ತಾರೆ. ಆದರೆ ನಿಜ ಬೇರೆಯೇ ಇದೆ’ ಎಂದಿದ್ದಾರೆ ವರ್ಮಾ.
ಇದನ್ನೂ ಓದಿ:‘ಗುಂಟೂರು ಖಾರಂ’, ‘ಹನುಮಾನ್’, ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆ ವಿವರ ಇಲ್ಲಿದೆ..
ಲಾಕ್ಡೌನ್ ಸಮಯದಲ್ಲಿ ನಾನು ಮೂರು ಸಿನಿಮಾಗಳನ್ನು ಮಾಡಿದೆ. ಅದರಲ್ಲಿ ಒಂದು ಸಿನಿಮಾವನ್ನು ಕೇವಲ ಮೊಬೈಲ್ನಲ್ಲಿ ಶೂಟ್ ಮಾಡಿ ಮೊಬೈಲ್ನಲ್ಲಿಯೇ ಎಡಿಟ್ ಮಾಡಿ, ಪೇ ಪರ್ ವ್ಯೂ ಮಾಡೆಲ್ನಲ್ಲಿ ಇಂಟರ್ನೆಟ್ನಲ್ಲಿ ಬಿಡುಗಡೆ ಮಾಡಿದೆ. ಆ ಸಿನಿಮಾ ಮಾಡಲು ನನಗೆ ಖರ್ಚಾಗಿದ್ದು ಕೇವಲ ಎರಡು ಸಾವಿರ ರೂಪಾಯಿಗಳಷ್ಟೆ. ಆದರೆ ಆ ಸಿನಿಮಾ ಗಳಿಸಿದ್ದು ಬರೋಬ್ಬರಿ 70 ಲಕ್ಷ ರೂಪಾಯಿ. ಇದನ್ನು ಫ್ಲಾಪ್ ಎನ್ನಲಾಗುತ್ತದೆಯೇ? ಎಂದು ವರ್ಮಾ ಪ್ರಶ್ನೆ ಮಾಡಿದ್ದಾರೆ.
70 ಲಕ್ಷ ಹಣ ಗಳಿಸಿದ ರಾಮ್ ಗೋಪಾಲ್ ವರ್ಮಾ ಸಿನಿಮಾ ‘ನೇಕೆಡ್’. ಈ ಸಿನಿಮಾವನ್ನು ಅವರು ಒಂದು ಮನೆಯಲ್ಲಿ ಚಿತ್ರೀಕರಣ ಮಾಡಿದ್ದರು. ಸಿನಿಮಾದಲ್ಲಿದ್ದಿದ್ದು ಕೆಲವೇ ನಟರು. ಬಹಳ ಹಾಟ್ ದೃಶ್ಯಗಳನ್ನು ಈ ಸಿನಿಮಾ ಒಳಗೊಂಡಿತ್ತು. ಗಂಡ-ಹೆಂಡತಿ ಹಾಗೂ ಒಬ್ಬ ಮನೆಗೆಲಸದವನ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಇದು ಪೂರ್ಣ ಪ್ರಮಾಣದ ಸಿನಿಮಾ ಆಗದೆ ಕಿರುಚಿತ್ರವಾಗಿತ್ತು. ಈ ಸಿನಿಮಾ ದೊಡ್ಡ ಮೊತ್ತವನ್ನು ಪೇ ಪರ್ ವ್ಯೂ ಮಾಡೆಲ್ನಲ್ಲಿ ಗಳಿಸಿತ್ತು.
‘ನೇಕೆಡ್’ ಸಿನಿಮಾಕ್ಕೆ ಮುನ್ನ ‘ಕ್ಲೈಮ್ಯಾಕ್ಸ್’ ಹೆಸರಿನ ಸಿನಿಮಾವನ್ನು ವರ್ಮಾ ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಇದು ಔಟ್ಡೋರ್ನಲ್ಲಿ ಚಿತ್ರೀಕರಣಗೊಂಡಿತ್ತು. ನೀಲಿಚಿತ್ರತಾರೆ ಮಿಯಾ ಮಾಲ್ಕೋವಾ ಈ ಸಿನಿಮಾದ ನಾಯಕಿ. ಈ ಸಿನಿಮಾವನ್ನು ಸಹ ಪೇ ಪರ್ ವ್ಯೂ ಮಾಡೆಲ್ನಲ್ಲಿ ವರ್ಮಾ ಬಿಡುಗಡೆ ಮಾಡಿದ್ದರು. ಈ ಸಿನಿಮಾ ಒಂದು ಕೋಟಿಗೂ ಹೆಚ್ಚು ಮೊತ್ತವನ್ನು ಕಲೆ ಹಾಕಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Fri, 9 February 24