ನಿಜವಾದ ಫ್ಯಾನ್ಸ್ ಇಂಥ ಕೆಲಸ ಮಾಡಲ್ಲ: ಎಚ್ಚರಿಕೆ ನೀಡಿದ ರಜನಿಕಾಂತ್ ಟೀಮ್
ದಳಪತಿ ವಿಜಯ್ ಬಗ್ಗೆ ರಜನಿಕಾಂತ್ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಮಾತನಾಡಿದ್ದಾನೆ. ಅದನ್ನು ರಜನಿ ಟೀಮ್ ಖಂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಹೆಚ್ಚಾಗದೇ ಇರಲಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಲಾಗಿದೆ. ಫ್ಯಾನ್ಸ್ ಸರಿಯಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟಾರ್ ನಟರು ಪರಸ್ಪರ ಅನ್ಯೋನ್ಯವಾಗಿ ಇದ್ದರೂ ಕೂಡ ಅಭಿಮಾನಿಗಳು ಕಚ್ಚಾಡುವುದು ನಿಲ್ಲಿಸುವುದಿಲ್ಲ. ಕಾಲಿವುಡ್ ಸ್ಟಾರ್ ನಟರಾದ ರಜನಿಕಾಂತ್ ಮತ್ತು ದಳಪತಿ ವಿಜಯ್ ಅವರ ಅಭಿಮಾನಿಗಳ ನಡುವೆ ಆಗಾಗ ಚಟಾಪಟಿ ನಡೆಯುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅದು ಮರುಕಳಿಸಿದೆ. ದಳಪತಿ ವಿಜಯ್ ಬಗ್ಗೆ ರಜನಿಕಾಂತ್ ಅಭಿಮಾನಿಯೊಬ್ಬ ಕೆಟ್ಟದಾಗಿ ಮಾತನಾಡಿದ್ದಾನೆ. ಅದು ರಜನಿಕಾಂತ್ ಗಮನಕ್ಕೆ ಬಂದಿದೆ. ಹಾಗಾಗಿ ಅವರ ಕಡೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ಆಗಿದೆ.
ದಳಪತಿ ವಿಜಯ್ಗೆ ಮೊಟ್ಟೆ ಹೊಡೆಯಬೇಕು ಎಂದು ರಜನಿಕಾಂತ್ ಅಭಿಮಾನಿ ಹೇಳಿದ್ದಾನೆ. ಅಲ್ಲದೇ ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಹಾಗಾಗಿ ರಜನಿಕಾಂತ್ ಟೀಮ್ ಕಡೆಯಿಂದ ಅಂಥ ಅಭಿಮಾನಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಇಂಥ ವರ್ತನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಅಭಿಮಾನಿಗಳಿಗೆ ಬುದ್ಧಿ ಹೇಳಲಾಗಿದೆ.
‘ರಜನಿಕಾಂತ್ ಅವರ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ವಿಜಯ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ಆಕ್ಷೇಪಾರ್ಹ. ಇಂತಹ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ರಜನಿಕಾಂತ್ ಅವರ ನಿಜವಾದ ಅಭಿಮಾನಿಗಳು ಇಂಥ ಕೆಲಸ ಮಾಡುವುದಿಲ್ಲ’ ಎಂದು ರಜನಿ ಟೀಮ್ನ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಸಿನಿಮಾ ಇರುವುದು ಜನರನ್ನು ಒಗ್ಗೂಡಿಸಲು. ಜನರ ನಡುವೆ ಬಿರುಕು ಮೂಡಿಸೋಕೆ ಅಲ್ಲ. ಅಭಿಮಾನಿಯ ಹೆಸರಿನಲ್ಲಿ ಯಾರೂ ಕೂಡ ಬೇರೆ ನಟರ ವಿರುದ್ಧ ದ್ವೇಷ ಹರಡಿಸಬಾರದು. ರಜನಿಕಾಂತ್ ಅವರ ಅಭಿಮಾನಿಗಳಾದ ನಾವು ಅಂಥ ಕೆಲಸ ಮಾಡುವುದು ಬೇಡ. ನನ್ನ ನೆಚ್ಚಿನ ನಾಯಕನನ್ನು ನಾವು ಪಾಸಿಟಿವಿಟಿ ಮತ್ತು ಪ್ರೀತಿಯಿಂದ ಸಂಭ್ರಮಿಸೋಣ. ಅಭಿಮಾನದ ಸಂಸ್ಕೃತಿಯನ್ನು ಗೌರವ ಮತ್ತು ಹೆಮ್ಮೆಯಿಂದ ವ್ಯಾಖ್ಯಾನಿಸೋಣ. ದ್ವೇಷದಿಂದ ಅಲ್ಲ’ ಎಂದಿದೆ ರಜನಿಕಾಂತ್ ಟೀಮ್.
ಇದನ್ನೂ ಓದಿ: ಕನ್ನಡದಲ್ಲಿ ಬೆಂಗಳೂರಿನ ಬಾಲ್ಯದ ದಿನ ನೆನೆದ ರಜನಿಕಾಂತ್
ಸಿನಿಮಾ ವಿಚಾರಕ್ಕೆ ಬರುವುದಾದರೆ ರಜನಿಕಾಂತ್ ಅವರು ಈಗ ‘ಕೂಲಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ನಂತರ ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾ ಮಾಡಲಿದ್ದಾರೆ. ಇನ್ನು, ವಿಜಯ್ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




