RRR Box Office Collection: ಹಿಂದಿ ಮಾರುಕಟ್ಟೆಯಲ್ಲಿ ಐದೇ ದಿನಕ್ಕೆ 100 ಕೋಟಿ ರೂ. ಬಾಚಿದ ‘ಆರ್​ಆರ್​ಆರ್​’ ಸಿನಿಮಾ

| Updated By: ಮದನ್​ ಕುಮಾರ್​

Updated on: Mar 30, 2022 | 4:14 PM

RRR Movie Box Office Collection: ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮತ್ತು ರಾಜಮೌಳಿ ಅವರಿಗೆ ಉತ್ತರ ಭಾರತದಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ಹಿಂದಿ ಪ್ರೇಕ್ಷಕರಿಂದ ‘ಆರ್​ಆರ್​ಆರ್​’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

RRR Box Office Collection: ಹಿಂದಿ ಮಾರುಕಟ್ಟೆಯಲ್ಲಿ ಐದೇ ದಿನಕ್ಕೆ 100 ಕೋಟಿ ರೂ. ಬಾಚಿದ ‘ಆರ್​ಆರ್​ಆರ್​’ ಸಿನಿಮಾ
ಆರ್​ಆರ್​ಆರ್
Follow us on

ಹಿಂದಿ ಭಾಷಿಕ ರಾಜ್ಯಗಳಲ್ಲಿ ಈಗ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಜೋರಾಗಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುವ ದಕ್ಷಿಣದ ಚಿತ್ರಗಳು ಹಿಂದಿಗೆ ಡಬ್​ ಆಗಿ ರಿಲೀಸ್​ ಆಗುತ್ತಿವೆ. ಉತ್ತರ ಭಾರತದ ಜನರು ಮುಗಿಬಿದ್ದು ಈ ಸಿನಿಮಾಗಳನ್ನು ನೋಡುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ರಿಲೀಸ್​ ಆಗಿದ್ದ ‘ಪುಷ್ಪ’ ಸಿನಿಮಾದ ಹಿಂದಿ ಅವತರಣಿಕೆ ಮೋಡಿ ಮಾಡಿತ್ತು. ಈಗ ‘ಆರ್​ಆರ್​ಆರ್​’ ಸಿನಿಮಾ (RRR Movie) ಧೂಳೆಬ್ಬಿಸುತ್ತಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ (Jr NTR), ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿರುವ ಈ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಹಿಂದಿ ಪ್ರೇಕ್ಷಕರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸಿನಿಮಾ ನೋಡುತ್ತಿದ್ದಾರೆ. ಬಾಲಿವುಡ್​ನ ಸ್ಟಾರ್​ ನಟರಿಗೂ ಅಚ್ಚರಿ ಆಗುವ ರೀತಿಯಲ್ಲಿ ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಕಮಾಯಿ ಮಾಡುತ್ತಿವೆ. ‘ಆರ್​ಆರ್​ಆರ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ (RRR Movie Box Office Collection) ಕಂಡು ಎಲ್ಲರೂ ಬೆರಗಾಗಿದ್ದಾರೆ. 5 ದಿನಕ್ಕೆ ಈ ಸಿನಿಮಾದ ಹಿಂದಿ ವರ್ಷನ್​ನಿಂದ ಬರೋಬ್ಬರಿ 107 ಕೋಟಿ ರೂಪಾಯಿ ಗಳಿಕೆ ಆಗಿದೆ. ಅದರಿಂದ ಇಡೀ ‘ಆರ್​ಆರ್​​ಆರ್​’ ತಂಡ ಫುಲ್​ ಖುಷ್​ ಆಗಿದೆ.
ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಮತ್ತು ರಾಜಮೌಳಿ ಅವರು ಉತ್ತರ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಕೂಡ ನಟಿಸಿರುವುದರಿಂದ ಸಹಜವಾಗಿಯೇ ಹಿಂದಿ ಪ್ರೇಕ್ಷಕರು ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲರೂ ಚಿತ್ರಮಂದಿರಕ್ಕೆ ಬಂದು ‘ಆರ್​ಆರ್​ಆರ್​’ ಸಿನಿಮಾದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪ್ರತಿ ದಿನವೂ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ.

ಮೊದಲ ದಿನವಾದ ಶುಕ್ರವಾರ (ಮಾ.25) ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಸಿನಿಮಾ 20.07 ಕೋಟಿ ರೂಪಾಯಿ ಗಳಿಸಿತು. ಎರಡನೇ ದಿನವಾದ ಶನಿವಾರ 24 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಮೂರನೇ ದಿನ 31.50 ಕೋಟಿ ರೂಪಾಯಿ ಆದಾಯ ಹರಿದುಬಂತು. ನಾಲ್ಕನೇ ದಿನ 17 ಕೋಟಿ ಹಾಗೂ 5ನೇ ದಿನ 15.02 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಹಿಂದಿ ವರ್ಷನ್​ನಿಂದ ಒಟ್ಟು 107.59 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಟ್ರೇಡ್​ ಅನಾಲಿಸಿಸ್ಟ್​ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹಿಂದಿ ಮಾರುಕಟ್ಟೆಯಲ್ಲಿ ‘ಆರ್​ಆರ್​ಆರ್’ ಸಿನಿಮಾ ಶೀಘ್ರವೇ 200 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲಿದೆ ಎಂದು ತರಣ್ ಆದರ್ಶ್​ ಭವಿಷ್ಯ ನುಡಿದಿದ್ದಾರೆ. ಬರೀ ಹಿಂದಿ ವರ್ಷನ್​ ಮಾತ್ರವಲ್ಲದೇ ಇತರೆ ಭಾಷೆಗಳಲ್ಲೂ ಈ ಚಿತ್ರ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಇದರ ಬಾಕ್ಸ್​ ಆಫೀಸ್​ ಕಲೆಕ್ಷನ್​ 500 ಕೋಟಿ ರೂಪಾಯಿ ಮೀರಿದೆ.

ಮೂರು ದಿನಕ್ಕೆ 500 ಕೋಟಿ ರೂ. ಗಳಿಸಿದ ‘ಆರ್​ಆರ್​ಆರ್’

ರಾಜಮೌಳಿ ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಅದ್ದೂರಿತನ ಬಯಸುತ್ತಾರೆ. ಅದಕ್ಕೆ ತಕ್ಕಂತೆಯೇ ‘ಆರ್​ಆರ್​ಆರ್​’ ಸಿನಿಮಾ ಮೂಡಿಬಂದಿದೆ. ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರು ಸಖತ್​ ಆ್ಯಕ್ಷನ್​ ಮೆರೆದಿದ್ದಾರೆ. ಜೊತೆಗೆ ಸೆಂಟಿಮೆಂಟ್​ ಕೂಡ ಸಿನಿಮಾದಲ್ಲಿ ಹೈಲೈಟ್​ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದೆ. ಮೊದಲ ದಿನವೇ ಎಲ್ಲ ಕಡೆಗಳಿಂದ ಉತ್ತಮ ವಿಮರ್ಶೆ ವ್ಯಕ್ತವಾಗಿದ್ದು ಚಿತ್ರತಂಡಕ್ಕೆ ಪ್ಲಸ್​ ಪಾಯಿಂಟ್​ ಆಯಿತು. ಮೊದಲ ದಿನವೇ ‘ಆರ್​ಆರ್​ಆರ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿತು. ಶುಕ್ರವಾರ (ಮಾ.25) ವಿಶ್ವಾದ್ಯಂತ 223 ಕೋಟಿ ರೂಪಾಯಿ ಕಮಾಯಿ ಆಗಿದೆ ಎಂದು ವರದಿ ಆಗಿತ್ತು. ಮೂರು ದಿನ ಕಳೆಯುವುದರೊಳಗೆ 500 ಕೋಟಿ ರೂಪಾಯಿ ಗಡಿ ಮುಟ್ಟಿರುವುದು ‘ಆರ್​ಆರ್​ಆರ್​’ ಸಿನಿಮಾದ ಹೆಚ್ಚುಗಾರಿಕೆ.

ಇದನ್ನೂ ಓದಿ:

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು

Alia Bhatt: ‘ಆರ್​ಆರ್​ಆರ್​’ ಚಿತ್ರ ನೋಡಿ ನಿರಾಸೆಗೊಂಡ ಆಲಿಯಾ ಭಟ್​ ಫ್ಯಾನ್ಸ್