ಹೊಸ ನಿರ್ದೇಶಕನ ಸಿನಿಮಾಕ್ಕೆ ಓಕೆ ಹೇಳಿದ ರಾಮ್ ಚರಣ್, ಕ್ರೀಡೆಯ ಕಡೆಗೆ ರಾಮ್ ಒಲವು
Ram Charan: ನಟ ರಾಮ್ ಚರಣ್ ಹೊಸ ನಿರ್ದೇಶಕರೊಬ್ಬರ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಮಾಸ್ ಸಿನಿಮಾಗಳ ಕಡೆಯಿಂದ ಕ್ರೀಡಾ ಕತೆಯುಳ್ಳ ಸಿನಿಮಾದ ಕಡೆಗೆ ವಾಲಿದ್ದಾರೆ ರಾಮ್ ಚರಣ್.

‘ಆರ್ಆರ್ಆರ್‘ (RRR) ಸಿನಿಮಾದ ಬಳಿಕ ರಾಮ್ ಚರಣ್ ತೇಜ (Ram Charan Teja) ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಾಮ್ ಚರಣ್ ತೇಜ ಹಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ತಮಿಳಿನ ಸ್ಟಾರ್ ನಿರ್ದೇಶನ ಶಂಕರ್ ಸಿನಿಮಾಕ್ಕೆ ರಾಮ್ ಓಕೆ ಎಂದಿದ್ದಾರೆ. ಇದಾದ ಬಳಿಕ ಹೊಸ ನಿರ್ದೇಶಕನ ಸಿನಿಮಾ ಒಂದರಲ್ಲಿ ರಾಮ್ ಚರಣ್ ತೇಜ ನಟಿಸಲಿದ್ದಾರೆ. ಈ ಸಿನಿಮಾದ ಮೂಲಕ ಹಳೆಯ ನಟಿಯೊಬ್ಬರು ನಟನೆಗೆ ಕಮ್ಬ್ಯಾಕ್ ಮಾಡುತ್ತಿರುವುದು ವಿಶೇಷ.
ಒಂದರಮೇಲೊಂದರಂತೆ ರಾಜಮೌಳಿ, ಶಂಕರ್ ಅಂಥಹಾ ಭಾರಿ ಬಜೆಟ್ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಿರುವ ರಾಮ್ ಚರಣ್, ಇದೀಗ ಹೊಸ ನಿರ್ದೇಶಕರೊಬ್ಬರ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕೇವಲ ಒಂದು ಸಿನಿಮಾವನ್ನಷ್ಟೆ ನಿರ್ದೇಶನ ಮಾಡಿರುವ ನಿರ್ದೇಶಕನೊಬ್ಬನ ಹೊಸ ಸಿನಿಮಾದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಸಿನಿಮಾದ ಮೂಲಕ ಜನಪ್ರಿಯ ನಟಿಯೊಬ್ಬರು ನಟನೆಗೆ ಕಮ್ ಬ್ಯಾಕ್ ಮಾಡಲಿದ್ದಾರೆ.
ವಿಮರ್ಶಕರಿಂದ ಮೆಚ್ಚುಗೆ ಗಳಿಸುವ ಜೊತೆಗೆ ಬಾಕ್ಸ್ ಆಫೀಸ್ನಲ್ಲಿಯೂ ಸೂಪರ್ ಹಿಟ್ ಆಗಿದ್ದ ‘ಉಪ್ಪೆನ’ ಸಿನಿಮಾ ನಿರ್ದೇಶಿಸಿದ್ದ ಬುಚ್ಚಿಬಾಬು ಸನಾ ನಿರ್ದೇಶನದ ಎರಡನೇ ಸಿನಿಮಾದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಈ ಸಿನಿಮಾ ಕ್ರೀಡೆಯ ಕತೆಯನ್ನು ಒಳಗೊಂಡಿದ್ದು, ರಾಮ್ ಚರಣ್ ಕ್ರೀಡಾಪಟುವಿನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಪಾತ್ರವರ್ಗ ಇನ್ನಷ್ಟೆ ಅಂತಿಮವಾಗಬೇಕಿದೆ. ಆದರೆ ಈ ಸಿನಿಮಾದ ಮೂಲಕ ಹಳೆಯ ನಟಿಯೊಬ್ಬರು ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಅವರೇ ಲಯಾ ಗೊರ್ಟಿ.
ಇದನ್ನೂ ಓದಿ:ರಾಮ್ ಚರಣ್-ಕಿಯಾರಾ ಹೊಸ ಸಿನಿಮಾದ ನಿರ್ದೇಶಕ ಬದಲು? ಮತ್ತೆ ಕೈಕೊಟ್ಟರಾ ಶಂಕರ್
1999 ರಲ್ಲಿ ನಟನೆಗೆ ಪದಾರ್ಪಣೆ ಮಾಡಿದ್ದ ಲಯಾ ಗೊರ್ಟಿ ಆ ನಂತರ ತೆಲುಗಿನ ಸ್ಟಾರ್ ನಟರೊಟ್ಟಿಗೆ ನಾಯಕಿಯರಾಗಿ ನಟಿಸಿದ್ದಾರೆ. ಕನ್ನಡದಲ್ಲಿ ‘ವೀರ ಕನ್ನಡಿಗ’, ‘ಗಂಡುಗಲಿ ಕುಮಾರ ರಾಮ’, ‘ಮದುವೆ ಆಗೋಣ ಬಾ’ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. 2006 ರ ‘ಗಂಡುಗಲಿ ಕುಮಾರರಾಮ’ ಸಿನಿಮಾದ ಬಳಿಕ 2010ರಲ್ಲಿ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ ಬಳಿಕ ಸಿನಿಮಾದಿಂದ ದೂರವಾಗಿದ್ದ ಲಯಾ 13 ವರ್ಷಗಳ ಬಳಿಕ ಚಿತ್ರರಂಗಕ್ಕೆ ವಾಪಸ್ಸಾಗುತ್ತಿದ್ದಾರೆ.
ಇನ್ನು ರಾಮ್ ಚರಣ್ ತೇಜ, ‘ಆರ್ಆರ್ಆರ್’ ಸಿನಿಮಾದ ಬಳಿಕ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಾಯಕಿ. ಸಿನಿಮಾದಲ್ಲಿ ತೆಲುಗಿನ ಜನಪ್ರಿಯ ಹಾಸ್ಯನಟ ಸುನಿಲ್ ಸಹ ಇದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಕತೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾದ ಟೀಸರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ