ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ನಿರ್ಮಾಣ ಸಂಸ್ಥೆಯ ಮಾಲಿಕರೋರ್ವರು ಈ ಬಗ್ಗೆ ದೂರು ನೀಡಿದ್ದು, ಆರ್‌ಜಿವಿ ₹56 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮ್ ಗೋಪಾಲ್ ವರ್ಮಾ ಅವರ ಸ್ನೇಹಿತರ ಮೂಲಕ 2019ರಲ್ಲಿ ದೂರುದಾರರು ಅವರನ್ನು ಭೇಟಿಯಾಗಿದ್ದರು. ಮರು ವರ್ಷ ಆರ್‌ಜಿವಿ 2020ರ ತೆಲುಗು ಚಿತ್ರ ‘ದಿಶಾ’ಗಾಗಿ 8 ಲಕ್ಷ ರೂ ಸಾಲವನ್ನು ಪಡೆದಿದ್ದರು. 2020ರ ಜನವರಿ 22ಕ್ಕೆ ಚೆಕ್ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತೆ ₹20 ಲಕ್ಷ ಕೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿರ್ದೇಶಕ ಆರು ತಿಂಗಳೊಳಗೆ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ: ‘ಮತ್ತೊಂದು ದೊಡ್ಡ ಚಿತ್ರ ಬರ್ತಿದೆ’: ‘ವಿಕ್ರಾಂತ್ ರೋಣ’ ಬಗ್ಗೆ ಪರಭಾಷೆ ಮಂದಿಗೆ ಮೊದಲೇ ಎಚ್ಚರಿಕೆ ನೀಡಿದ ಆರ್‌ಜಿವಿ
ನಂತರದಲ್ಲಿ ಚಿತ್ರಕ್ಕೆ ಹಣ ಸಹಾಯ ಬೇಕಾಗಿದೆ ಎಂದು ಮುಂದಿನ ತಿಂಗಳು ಮತ್ತೆ 28 ಲಕ್ಷ ರೂ ಹಣ ಕೇಳಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ. ರಾಮ್ ಗೋಪಾಲ್ ವರ್ಮಾರನ್ನು ನಂಬಿ 28 ಲಕ್ಷ ರೂಗಳನ್ನು ವರ್ಗಾಯಿಸಲಾಗಿತ್ತು. ದಿಶಾ ಚಿತ್ರದ ರಿಲೀಸ್ಗೂ ಮುನ್ನ ಒಟ್ಟು 56 ಲಕ್ಷ ರೂಗಳನ್ನು ಮರಳಿಸುವುದಾಗಿ ಆರ್‌ಜಿವಿ ಒಪ್ಪಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ‘ದಿಶಾ’ ಚಿತ್ರದ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಆಗಿರಲಿಲ್ಲ ಎಂದು ಸಾಲ ನೀಡಿದ್ದ ವ್ಯಕ್ತಿಗೆ 2021ರಲ್ಲಿ ತಿಳಿಯಿತು. ಅವರು ನಿರ್ಮಾಪಕರೆಂದು ಸುಳ್ಳು ಹೇಳಿ ಸಾಲ ಪಡೆದಿದ್ದರು ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: I am R Movie: ಉಪೇಂದ್ರ- ಆರ್‌ಜಿವಿ ಕಾಂಬಿನೇಷನ್ನ ಹೊಸ ಚಿತ್ರ ‘ಐ ಆ್ಯಮ್ ಆರ್’ ಫಸ್ಟ್ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್
ಆರ್‌ಜಿವಿ ಕ್ರೈಮ್ ಡ್ರಾಮಾ ಚಿತ್ರವಾದ ‘ಸತ್ಯ’, ಥ್ರಿಲ್ಲರ್ ಚಿತ್ರ ‘ಕೌನ್’, ಗ್ಯಾಂಗ್‌ಸ್ಟರ್ ಚಿತ್ರಗಳಾದ ‘ಕಂಪನಿ’ ಮತ್ತು ‘ಸರ್ಕಾರ್’ ಮತ್ತು ಹಾರರ್ ಮಾದರಿಯ ‘ಭೂತ್’ನಂತಹ ಚಲನಚಿತ್ರಗಳಿಂದ ಖ್ಯಾತಿ ಗಳಿಸಿದ್ದಾರೆ. ಕನ್ನಡದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರವನ್ನೂ ಅವರು ನಿರ್ದೇಶಿಸಿದ್ದರು. ಉಪೇಂದ್ರ ನಟನೆಯ ‘ಐ ಆ್ಯಮ್ ಆರ್’ ಚಿತ್ರವನ್ನು ಆರ್‌ಜಿವಿ ನಿರ್ದೇಶಿಸಬೇಕಿದೆ. ಅದು ಇತ್ತೀಚೆಗೆ ಅನೌನ್ಸ್ ಆಗಿತ್ತು. ಗ್ಯಾಂಗ್‌ಸ್ಟರ್ ಕತೆಯನ್ನು ಚಿತ್ರ ಹೊಂದಿದೆ.
ಪ್ರಸ್ತುತ ದಾಖಲಾಗಿರುವ ವಂಚನೆ ಪ್ರಕರಣದ ಬಗ್ಗೆ ರಾಮ್ ಗೋಪಾಲ್ ವರ್ಮಾ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಟ್ವಿಟರ್ನಲ್ಲಿ ಸಖತ್ ಸಕ್ರಿಯರಾಗಿರುವ ನಿರ್ದೇಶಕ ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಹಂಚಿಕೊಂಡಿಲ್ಲ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Wed, 25 May 22