
ರಾಮ್ ಗೋಪಾಲ್ ವರ್ಮಾ ಹೆಸರು ಕೇಳಿದರೆ ತಕ್ಷಣ ನೆನಪಾಗುವುದು ಅವರ ನೇರ ನಡೆ ಹಾಗೂ ವಿವಾದಾತ್ಮಕ ಹೇಳಿಕೆಗಳು. ಹಿಂದೆ ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಶೀರ್ಷಿಕೆ ಮತ್ತು ಘೋಷಣೆಯ ಸಂದರ್ಭದಲ್ಲಿ ಆರ್ಜಿವಿ ತೀವ್ರ ಟೀಕೆ ಮಾಡಿ, ತೆಗಳಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಆದರೆ, ಇದೀಗ ಅದೇ ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾವನ್ನು ನೋಡಿ ಆರ್ಜಿವಿ ದಂಗಾಗಿದ್ದು, ಮುಕ್ತಕಂಠದಿಂದ ಹೊಗಳಿಕೆಯ ಸುರಿಮಳೆ ಗೈದಿದ್ದಾರೆ.
‘ರಾಮಾಯಣ’ ಸಿನಿಮಾ ವೀಕ್ಷಿಸಿದ ನಂತರ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಇದೊಂದು ಕೇವಲ ಭಕ್ತಿಪೂರ್ವಕ ಸಿನಿಮಾವಲ್ಲ, ಬದಲಿಗೆ ಇದೊಂದು ‘ದೈವಿಕ ಶಕ್ತಿ’ ಎಂದು ಬಣ್ಣಿಸಿದ್ದಾರೆ. ಸಿನಿಮಾದಲ್ಲಿ ಬರುವ ಪ್ರತಿಯೊಂದು ಸನ್ನಿವೇಶವೂ ಪ್ರೇಕ್ಷಕರಿಗೆ ಕೇವಲ ಕಥೆಯನ್ನು ಹೇಳುವುದಿಲ್ಲ, ಬದಲಿಗೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಹಿಂದೆ ಯಶ್ ಅವರನ್ನು ತೆಗಳಿದ್ದ ಆರ್ಜಿವಿ, ಈ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯವನ್ನು ಕಂಡು ಸಂಪೂರ್ಣ ಫಿದಾ ಆಗಿದ್ದಾರೆ. ‘ಯಶ್ ರಾವಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರವಾಗಿ ಜೀವಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ಜೊತೆಗೆ ಸೀತೆಯ ಅಪಹರಣದ ನಂತರ ರಾಮನ ದುಃಖದ ಸನ್ನಿವೇಶ ಮತ್ತು ಜಟಾಯು ಪಾತ್ರದಲ್ಲಿ ಅನುಪಮ್ ಖೇರ್ ಅಭಿನಯವನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ.
ಇದೇ ವೇಳೆ ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆ ನೀಡುತ್ತಿರುವ ವಿಮರ್ಶಕರ ವಿರುದ್ಧ ಆರ್ಜಿವಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಬೃಹತ್ ಮತ್ತು ಅದ್ಭುತ ಕಲಾಕೃತಿಯ ಮುಂದೆ ನೆಗೆಟಿವ್ ಕಾಮೆಂಟ್ ಮಾಡುವ ವಿಮರ್ಶಕರು ಬೊಗಳುವ ಬೀದಿ ನಾಯಿಗಳು ಎಂದು ಖಡಕ್ ಆಗಿ ಕಿಡಿಕಾರಿದ್ದಾರೆ. ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಚಿತ್ರತಂಡಕ್ಕೆ ಧೈರ್ಯ ತುಂಬಿರುವ ಅವರು, ಬಾಲಿವುಡ್ ಅನ್ನು ಹಾಲಿವುಡ್‌ಗಿಂತಲೂ ಎತ್ತರಕ್ಕೆ ಕೊಂಡೊಯ್ದ ನಿರ್ಮಾಪಕ ನಮಿತ್ ಮಲ್ಹೋತ್ರಾಗೆ ‘ಬಿಗ್ ಸಲ್ಯೂಟ್’ ಹೊಡೆದಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸೀತೆ ಪಾತ್ರಧಾರಿ ಸಾಯಿ ಪಲ್ಲವಿ ಹಾಡಿಹೊಗಳಿದ ಯಶ್
ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ: ಪಾರ್ಟ್ 1’ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದ್ದು, ಆರ್ಜಿವಿ ಅವರ ಈ ಬದಲಾದ ನಿಲುವು ಮತ್ತು ಹೊಗಳಿಕೆಯ ಮಾತುಗಳು ಫಿಲ್ಮ್ ನಗರಿಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.