‘ಪುಷ್ಪ’ ತಂಡದೊಟ್ಟಿಗೆ ಐದು ವರ್ಷ: ಭಾವುಕರಾದ ರಶ್ಮಿಕಾ ಮಂದಣ್ಣ

Rashmika Mandanna: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ, ‘ಪುಷ್ಪ’ ತಂಡದೊಂದಿಗಿನ ತಮ್ಮ ಐದು ವರ್ಷದ ಜರ್ನಿಯನ್ನು ನೆನಪು ಮಾಡಿಕೊಂಡಿದ್ದಾರೆ.

‘ಪುಷ್ಪ’ ತಂಡದೊಟ್ಟಿಗೆ ಐದು ವರ್ಷ: ಭಾವುಕರಾದ ರಶ್ಮಿಕಾ ಮಂದಣ್ಣ
Rashmika Mandanna
Follow us
ಮಂಜುನಾಥ ಸಿ.
|

Updated on: Dec 05, 2024 | 3:35 PM

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಇಂದು (ಡಿಸೆಂಬರ್ 05) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ನಟನೆ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಪುಷ್ಪ’ ಮೊದಲ ಭಾಗದಲ್ಲಿ ರಶ್ಮಿಕಾ ಪಾತ್ರವಾದ ಶ್ರೀವಲ್ಲಿಗೆ ಬಹಳ ಪ್ರಾಮುಖ್ಯತೆ ಇರಲಿಲ್ಲ. ಆದರೆ ‘ಪುಷ್ಪ 2’ ನಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆಯಂತೆ. 2019 ರಲ್ಲಿ ರಶ್ಮಿಕಾ ಮಂದಣ್ಣ ‘ಪುಷ್ಪ’ ತಂಡ ಸೇರಿದ್ದರು ಅಂದರೆ ಬರೋಬ್ಬರಿ ಐದು ವರ್ಷವಾಯ್ತು ಅವರು ಈ ತಂಡದ ಭಾಗವಾಗಿ. ಇಷ್ಟು ವರ್ಷಗಳ ಜರ್ನಿಯನ್ನು ನೆನಪಿಸಿಕೊಂಡು ಇನ್​ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ ರಶ್ಮಿಕಾ.

‘ಪುಷ್ಪ 2’ ಸಿನಿಮಾ ಬಿಡುಗಡೆ ಆಗುತ್ತಿರುವ ಈ ಹೊತ್ತಿನಲ್ಲಿ ಹಲವು ಭಾವನೆಗಳು ನನ್ನ ಒಳಗೆ ಹರಿದಾಡುತ್ತಿವೆ. ಒಂದು ಸಿನಿಮಾಕ್ಕಾಗಿ ಈ ತಂಡದೊಂದಿಗೆ ನಾನು ಎಷ್ಟು ವೈಯಕ್ತಿಕವಾಗಿ ಕನೆಕ್ಟ್ ಆಗಿದ್ದೇನೆ ಎಂಬುದೇ ನನಗೆ ಆಶ್ಚರ್ಯ ಪಡಿಸುತ್ತಿದೆ. ಈ ಹಿಂದಿನ ಯಾವುದೇ ಸಿನಿಮಾಗಳು ನನ್ನ ಭಾವನೆಗಳನ್ನು ಇಷ್ಟು ಪ್ರಚೋದಿಸಿರಲಿಲ್ಲ. ಆದರೆ ಇಂದು ಈ ಸಿನಿಮಾ ಬಿಡುಗಡೆ ದಿನ ನಾನು ಹಲವು ಭಾವನೆಗಳಲ್ಲಿ ತಾಕಲಾಡುತ್ತಿದ್ದೇನೆ’ ಎಂದಿದ್ದಾರೆ ರಶ್ಮಿಕಾ.

ಮುಂದುವರೆದು, ‘ಪುಷ್ಪ ಚಿತ್ರೀಕರಣ ಪ್ರಾರಂಭ ಆಗಿದ್ದು 2021 ರಲ್ಲಿ ಆದರೆ, ಅದಕ್ಕೆ ಮುಂಚೆ ಕೋವಿಡ್ ಸಮಯದಲ್ಲಿಯೇ ಚಿತ್ರತಂಡದವರು ನನ್ನ ಮನೆಗೆ ಬಂದು ಚಿತ್ತೂರು ಶೈಲಿಯ ಭಾಷೆ ಹೇಳಿಕೊಡುತ್ತಿದ್ದರು. ಮೊದಲ ದಿನ ‘ಪುಷ್ಪ’ ಸಿನಿಮಾ ಸೆಟ್​ಗೆ ಹೋಗಿದ್ದು, ಪುಷ್ಪ ಮೊದಲ ಭಾಗ ಬಿಡುಗಡೆ ಆಗಿದ್ದು, ಈಗ ಪುಷ್ಪ 2 ಬಿಡುಗಡೆ ಆಗುವವರೆಗೆ ಇದೊಂದು ದೀರ್ಘ ಮತ್ತು ಸುಂದರ ಪಯಣ’ ಎಂದು ಬಣ್ಣಿಸಿದ್ದಾರೆ ರಶ್ಮಿಕಾ.

ಇದನ್ನೂ ಓದಿ:ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಎಷ್ಟು ಕ್ಯೂಟ್ ಆಗಿ ಕಾಣ್ತಾರೆ ನೋಡಿ

‘ಸಿನಿಮಾ ಪ್ರಾರಂಭವಾದಾಗ ಸುಕ್ಕು ಸರ್ (ನಿರ್ದೇಶಕ ಸುಕುಮಾರ್) ಪರಿಚಯವೇ ಇರಲಿಲ್ಲ. ಅವರೊಟ್ಟಿಗೆ ಹೇಗೆ ಮಾತನಾಡುವುದು ಎಂದು ಭಯಪಡುತ್ತಿದ್ದೆ. ಈಗ ಈ ಐದು ವರ್ಷಗಳಲ್ಲಿ ಸುಕುಮಾರ್ ಅವರಿಗೆ ನಾನು ಎಮೋಷನಲಿ ಕನೆಕ್ಟ್ ಆಗಿಬಿಟ್ಟಿದ್ದೇನೆ. ಅಲ್ಲು ಅರ್ಜುನ್ ಅವರನ್ನು ಮೊದಲು ಭೇಟಿ ಆದಾಗ ಅವರೊಂದಿಗೆ ಮಾತನಾಡಲು ಸಹ ಭಯ ಪಟ್ಟಿದ್ದೆ. ಆದರೆ ಆ ನಂತರ, ಯಾವುದೇ ಸೀನ್ ಶೂಟ್ ಆದಾಗಲೂ ಅವರನ್ನು ಹುಡುಕಿ ಹೋಗಿ ಸೀನ್ ಹೇಗೆ ಬಂದಿದೆ ಎಂದು ಕೇಳುವಂತೆ ಆದೆ’ ಎಂದು ನೆನಪು ಮಾಡಿಕೊಂಡಿದ್ದಾರೆ.

‘ಪುಷ್ಪ 2’ ಸಿನಿಮಾದ ಕ್ಯಾಮೆರಾಮನ್ ಕುಬಾ ಬ್ರಜೋಕ್ ಬಗ್ಗೆ ಬರೆದುಕೊಂಡಿರುವ ರಶ್ಮಿಕಾ, ‘ಕುಬಾ ಅವರು ಮಿತ ಭಾಷಿ ಆದರೆ ಅವರು ಸ್ಮೈಲ್ ಮಾಡಿದರೆಂದರೆ ಆ ಶಾಟ್ ಅದ್ಭುತವಾಗಿ ಬಂದಿದೆ ಎಂದೇ ಅರ್ಥ. ಹಾಗೆಯೇ ಫಹಾದ್ ಸರ್ ಅವರೊಟ್ಟಿಗೆ ನಾನು ನಟಿಸಿದ್ದು ಕೇವಲ ಎರಡು ದಿನ ಮಾತ್ರ ಆದರೆ ಫಹಾದ್ ಅವರು ಮ್ಯಾಜಿಕ್ ಮಾಡಿದ್ದಾರೆ ಎಂದು ಚಿತ್ರತಂಡ ಹೇಳಿದ್ದು ಕೇಳಿದ್ದೇನೆ. ಇನ್ನು ಮೈತ್ರಿ ಮೂವಿ ಮೇಕರ್ಸ್​ ಅದ್ಭುತವಾದ ನಿರ್ಮಾಣ ಸಂಸ್ಥೆ’ ಎಂದಿದ್ದಾರೆ ರಶ್ಮಿಕಾ.

‘ನಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ, ನಾವು ಹೇಗೆ ಪ್ರಾರಂಭ ಮಾಡಿದೆವು, ಈಗ ಎಲ್ಲಿಗೆ ಬಂದು ನಿಂತಿದ್ದೇವೆ ಎಂಬುದು ನಿಜಕ್ಕೂ ಹೆಮ್ಮೆ ತರುವಂಥಹದ್ದು. ಇಡೀ ಪುಷ್ಪ ತಂಡ ನನ್ನ ಮೆಚ್ಚಿನ ತಂಡ, ಅವರು ಮಾಡಿದ ಹಾರ್ಡ್​ ವರ್ಕ್​ಗೆ ಭೇಷ್ ಎನ್ನಲೇ ಬೇಕು. ನಾವೆಲ್ಲ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಕೆಲಸ ಮಾಡಿದ ರೀತಿ ನನಗೆ ಇಷ್ಟ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಯಶಸ್ಸು ಎನ್ನುವುದು ನಿಮ್ಮ ಸುತ್ತ ಎಂಥಹಾ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಆಧರಿಸಿ ಬರುತ್ತದೆ. ‘ಪುಷ್ಪ’ ಇದಕ್ಕೆ ಒಳ್ಳೆಯ ಉದಾಹರಣೆ’ ಎಂದಿದ್ದಾರೆ ರಶ್ಮಿಕಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ