‘ನಾನು ವರ್ಷಕ್ಕೆ ಇಷ್ಟೊಂದು ಸಿನಿಮಾ ಮಾಡ್ತೀನಿ, ಆದರೂ..’; ರಶ್ಮಿಕಾ ಬೇಸರಕ್ಕೆ ಕಾರಣವಾಯ್ತು ಆ ಒಂದು ವಿಚಾರ
‘ನೀವು ನನ್ನ ಬಗ್ಗೆ ಬೇಕಾದ ರೀತಿಯಲ್ಲಿ ಮಾತನಾಡಬಹುದು. ಆದರೆ, ನನ್ನ ಬಗ್ಗೆ ನಾನು ಹೇಳುವವರೆಗೆ ಆ ಬಗ್ಗೆ ನಿರ್ಧಾರಕ್ಕೆ ಬರಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ ಅವರು.

ಬ್ಯುಸಿ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸದ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ಅವರ ವೈಯಕ್ತಿಕ ಜೀವನ ಕೂಡ ಆಗಾಗ ಚರ್ಚೆಗೆ ಬರುತ್ತದೆ. ಅವರು ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ, ಇದನ್ನು ವಿಜಯ್ ಆಗಲಿ ರಶ್ಮಿಕಾ ಆಗಲಿ ಒಪ್ಪಿಕೊಂಡಿಲ್ಲ. ಈಗ ರಶ್ಮಿಕಾ ಸಂದರ್ಶನವೊಂದರಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ವದಂತಿಗಳಿಗೆ ಅವರು ಕಿವಿಗೊಡುವುದಿಲ್ಲ ಎಂಬುದಾಗಿಯೂ ಹೇಳಿದ್ದಾರೆ.
‘ನನಗೆ ಕೆಲವೊಮ್ಮೆ ಅನ್ನಿಸುವುದು ಉಂಟು. ನಾನು ವರ್ಷಕ್ಕೆ ಐದು ಸಿನಿಮಾ ಮಾಡುತ್ತೇನೆ. ಆದರೆ, ಎಲ್ಲರೂ ಬಂದು ನೀವು ಯಾರ ಜತೆ ಡೇಟಿಂಗ್ ಮಾಡುತ್ತಿದ್ದೀರಿ? ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿ ಎಂದು ಕೇಳುತ್ತಾರೆ. ನನಗೆ ಅರ್ಥ ಆಗುತ್ತದೆ, ನಾವು ಸೆಲೆಬ್ರಿಟಿಗಳು. ಎಲ್ಲರ ಕಣ್ಣೂ ನಮ್ಮ ಮೇಲೆ ಇರುತ್ತದೆ. ಜನರು ನಮ್ಮ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಾಯುತ್ತಿರುತ್ತಾರೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
‘ನೀವು ನನ್ನ ಬಗ್ಗೆ ಬೇಕಾದ ರೀತಿಯಲ್ಲಿ ಮಾತನಾಡಬಹುದು. ಆದರೆ, ನನ್ನ ಬಗ್ಗೆ ನಾನು ಹೇಳುವವರೆಗೆ ಆ ಬಗ್ಗೆ ನಿರ್ಧಾರಕ್ಕೆ ಬರಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ ಅವರು. ಈ ಮೂಲಕ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಫ್ಯಾನ್ಸ್ ಬಳಿ ರಶ್ಮಿಕಾ ಕೋರಿದ್ದಾರೆ.
‘ಜನರು ನಮ್ಮ ಬಗ್ಗೆ ಬೇಕಾದ ರೀತಿಯಲ್ಲಿ ಮಾತನಾಡಬಹುದು. ನಮ್ಮ ಬಗ್ಗೆ ನೆಗೆಟಿವ್ ವಿಚಾರಗಳನ್ನು ಹೇಳಬಹುದು. ನಾವು ಸೆಲೆಬ್ರಿಟಿಗಳು. ನಾವು ಜನರಿಂದ ಕೇವಲ ಒಳ್ಳೆಯ ಮಾತನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಿನಿಮಾ ಬಗ್ಗೆ ಯಾವ ರೀತಿಯ ಪ್ರಶ್ನೆಯನ್ನಾದರೂ ಕೇಳಿ ನಾನು ಉತ್ತರಿಸುತ್ತೇನೆ. ಆದರೆ, ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನನಗೆ ಇಷ್ಟವಿಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಈ ಚಿತ್ರ ಮಿಸ್ ಮಾಡಿಕೊಳ್ಳಬೇಡಿ’; ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ ಚಿತ್ರಕ್ಕೆ ಸಿಕ್ತು ಉತ್ತಮ ವಿಮರ್ಶೆ
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಕಳೆದ ವರ್ಷ ತೆರೆಗೆ ಬಂದ ‘ಪುಷ್ಪ’ ಚಿತ್ರದ ದೊಡ್ಡ ಗೆಲುವು ಕಂಡಿತು. ಅವರ ಅಭಿನಯದ ‘ಸೀತಾ ರಾಮಂ’ ಚಿತ್ರ ಕೂಡ ಇತ್ತೀಚೆಗೆ ಬಿಡುಗಡೆ ಆಗಿ ಗೆಲುವು ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.