
ಬಾಲಿವುಡ್‌ನ ಜನಪ್ರಿಯ ಶೋ ‘ಕಾಫಿ ವಿತ್ ಕರಣ್’ ಸೀಸನ್ 9ರಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದರು. ಈ ವಿಚಾರವಾಗಿ ದಂಪತಿ ಪೊಲೀಸ್ ದೂರು ಕೂಡ ದಾಖಲಿಸಿದ್ದರು. ಇದೀಗ ದೂರು ನೀಡಲು ನಿಜವಾದ ಕಾರಣವೇನು ಎಂಬುದನ್ನು ನಟಿ ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದ್ದಾರೆ. ತಮ್ಮ ಕುಟುಂಬದವರನ್ನು ಎಳೆದು ತಂದಿದ್ದೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ‘ಪ್ರೇಮಾ – ದಿ ಜರ್ನಲಿಸ್ಟ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಈ ಬಗ್ಗೆ ಮಾತನಾಡಿದ್ದಾರೆ. ಆರಂಭದ ದಿನಗಳಲ್ಲಿ ತಾನು ನೆಗೆಟಿವ್ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ನಂತರ ಅರ್ಥವಾಯಿತು. ಈಗ ಟ್ರೋಲ್‌ಗಳನ್ನು ನಿರ್ಲಕ್ಷಿಸಿ ಮೌನವಾಗಿರುವುದೇ ಉತ್ತಮ ಎಂದು ಭಾವಿಸಿದ್ದೇನೆ. ನನ್ನ ನಟನೆ ಮತ್ತು ವೃತ್ತಿಜೀವನದ ಬಗ್ಗೆ ವಿಮರ್ಶೆ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.
‘ಕಾಫಿ ವಿತ್ ಕರಣ್ 9’ರ ಎರಡನೇ ಎಪಿಸೋಡ್‌ನಲ್ಲಿ ರಶ್ಮಿಕಾ ಮತ್ತು ವಿಜಯ್ ಮುಕ್ತವಾಗಿ ಮಾತನಾಡಿದ್ದರು. ವಿಜಯ್ ಅವರನ್ನು ಮದುವೆಯಾಗಲು ತಾನು ಒಂದು ವರ್ಷ ಪ್ರತಿದಿನ ಕೇಳಿದ್ದೆ ಎಂದು ರಶ್ಮಿಕಾ ಹೇಳಿದ್ದರು. ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಮತ್ತು ಟ್ರೋಲ್‌ಗೆ ಕಾರಣವಾಗಿತ್ತು. ಕಿಡಿಗೇಡಿಗಳು ನಕಲಿ ಪೋಸ್ಟ್‌ಗಳು ಮತ್ತು ತಿರುಚಿದ ಸ್ಕ್ರೀನ್‌ಶಾಟ್‌ಗಳನ್ನು ಹರಿಬಿಟ್ಟು ದಂಪತಿಗೆ ಕಿರುಕುಳ ನೀಡಿದ್ದರು. ಇದರಿಂದ ಬೇಸತ್ತ ಜೋಡಿ ಪೊಲೀಸರ ಮೊರೆ ಹೋಗಿತ್ತು.
ತನ್ನ ಮೇಲಿನ ಟೀಕೆಗಳನ್ನು ಸಹಿಸಿಕೊಳ್ಳುವ ರಶ್ಮಿಕಾ, ಕುಟುಂಬದ ವಿಚಾರಕ್ಕೆ ಬಂದಾಗ ಸಿಡಿದೆದ್ದಿದ್ದಾರೆ. ನನ್ನ ಕುಟುಂಬದ ಬಗ್ಗೆ ಯಾರಾದರೂ ಮಾತನಾಡಿದರೆ ನಾನು ಸಹಿಸುವುದಿಲ್ಲ. ಆಗ ನಾನು ನನ್ನ ಮುಂಬರುವ ಸಿನಿಮಾ ‘ಮೈಸಾ’ ರೀತಿ ಯೋಧೆ ಅವತಾರ ಎತ್ತುತ್ತೇನೆ. ನನ್ನ ಕುಟುಂಬದವರು ಈ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡವರಲ್ಲ. ಸಾರ್ವಜನಿಕ ಜೀವನದಲ್ಲಿ ಇಲ್ಲದವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ಸರಿಯಲ್ಲ ಎಂದು ರಶ್ಮಿಕಾ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಭಾರಿ ನಿರಾಸೆ, ಸಿನಿಮಾ ರಿಲೀಸ್ ಮುಂದೂಡಿಕೆ
ತನ್ನ ವೃತ್ತಿಯ ಕಾರಣಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತರು ವೈಯಕ್ತಿಕ ದಾಳಿಗೆ ಒಳಗಾಗಬಾರದು ಎಂಬುದು ರಶ್ಮಿಕಾ ಅವರ ನಿಲುವಾಗಿದೆ. ಸದ್ಯ ರಶ್ಮಿಕಾ ಮಂದಣ್ಣ ‘ಮೈಸಾ’ ಎಂಬ ಆಕ್ಷನ್ ಡ್ರಾಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವೀಂದ್ರ ಪುಲ್ಲೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಕುಟುಂಬದ ರಕ್ಷಣೆಗೆ ನಿಲ್ಲುವಾಗ ತಾನು ಈ ಚಿತ್ರದ ಪಾತ್ರದಂತೆ ಕಠಿಣವಾಗಿ ವರ್ತಿಸುತ್ತೇನೆ ಎಂದು ರಶ್ಮಿಕಾ ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.