ಪವಿತ್ರಾ ಗೌಡ ಬ್ಯಾರಕ್ ಬದಲಾವಣೆಗೆ ಕೋರ್ಟ್ ಅನುಮತಿ; ಖುದ್ದು ಹಾಜರಿ ಕೋರಿ ದರ್ಶನ್ ರಿಟ್ ಅರ್ಜಿ

ಪವಿತ್ರಾ ಗೌಡ ಅವರ ಅನಾರೋಗ್ಯದ ಕಾರಣದಿಂದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ಬದಲಾಯಿಸಲು ಕೋರ್ಟ್ ಹಸಿರು ನಿಶಾನೆ ತೋರಿದೆ. ಇದರಿಂದಾಗಿ ಅವರಿಗೆ ಸಣ್ಣ ರಿಲೀಫ್ ಸಿಕ್ಕಂತೆ ಆಗಿದೆ. ಇತ್ತ, ದರ್ಶನ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ತಮ್ಮ ಖುದ್ದು ಹಾಜರಿಗೆ ಅವಕಾಶ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪವಿತ್ರಾ ಗೌಡ ಬ್ಯಾರಕ್ ಬದಲಾವಣೆಗೆ ಕೋರ್ಟ್ ಅನುಮತಿ; ಖುದ್ದು ಹಾಜರಿ ಕೋರಿ ದರ್ಶನ್ ರಿಟ್ ಅರ್ಜಿ
Pavithra Gowda, Darshan
Edited By:

Updated on: Sep 07, 2026 | 5:24 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಪುರಸ್ಕರಿಸಿದೆ. ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪವಿತ್ರಾ ಗೌಡ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ಇರುವ ಬ್ಯಾರಕ್‌ನಿಂದ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಕೋರ್ಟ್ ಅನುಮತಿ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಹೆಚ್ ಕೋರ್ಟ್, ಪವಿತ್ರಾ ಗೌಡ ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ ಜೈಲು ನಿಯಮಾವಳಿಗಳು ಹಾಗೂ ಕೈಪಿಡಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಬ್ಯಾರಕ್ ಬದಲಾವಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಆದೇಶಿಸಿದೆ. ಇದರಿಂದಾಗಿ ಪವಿತ್ರಾ ಗೌಡ ಅವರಿಗೆ ಸಣ್ಣ ರಿಲೀಫ್ ಸಿಕ್ಕಂತೆ ಆಗಿದೆ.

ಹೈಕೋರ್ಟ್‌ಗೆ ನಟ ದರ್ಶನ್ ರಿಟ್ ಅರ್ಜಿ:

ಇತ್ತ, ನಟ ದರ್ಶನ್ ಅವರು ಕೂಡ ವಿಚಾರಣೆಗೆ ಸಂಬಂಧಿಸಿದಂತೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರು ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಅನುಮತಿ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಸಾಕ್ಷ್ಯ ವಿಚಾರಣೆ ವೇಳೆ ತಮ್ಮನ್ನು ಖುದ್ದಾಗಿ ಕೋರ್ಟ್‌ನಲ್ಲಿ ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದಾರೆ.

ವಿಚಾರಣೆಯನ್ನು ಖುದ್ದಾಗಿ ಆಲಿಸುವುದು ಮತ್ತು ವೀಕ್ಷಿಸುವುದು ತಮ್ಮ ಹಕ್ಕಾಗಿದೆ. ಸಾಕ್ಷಿಯು ಆರೋಪಿಯ ಸಮಕ್ಷಮದಲ್ಲೇ ತನ್ನ ಹೇಳಿಕೆಯನ್ನು ನೀಡಬೇಕು ಹಾಗೂ ವಿಚಾರಣೆ ವೇಳೆ ವಕೀಲರಿಗೆ ಕಾಲಕಾಲಕ್ಕೆ ಸೂಕ್ತ ಸೂಚನೆಗಳನ್ನು ನೀಡಲು ತಮಗೆ ಅವಕಾಶವಿರಬೇಕು ಎಂದು ಅರ್ಜಿಯಲ್ಲಿ ದರ್ಶನ್ ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ; ಸಾವಿಗೆ ಕಾರಣವಾಯ್ತು ಆ ಒಂದು ವಿಷಯ

ಜೈಲಿನಲ್ಲಿ ತಾಂತ್ರಿಕ ಅಡಚಣೆಗಳ ಬಗ್ಗೆ ದರ್ಶನ್ ದೂರು:

ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್‌ನಲ್ಲಿ ಸೂಕ್ತ ತಾಂತ್ರಿಕ ಉಪಕರಣಗಳು ಲಭ್ಯವಿಲ್ಲ ಮತ್ತು ಇರುವ ಸಾಧನಗಳನ್ನು ಇನ್ನೂ ಉನ್ನತೀಕರಿಸಲಾಗಿಲ್ಲ ಎಂದು ದರ್ಶನ್ ದೂರಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಾಗ ಪದೇ ಪದೆ ತಾಂತ್ರಿಕ ಅಡಚಣೆಗಳು ಎದುರಾಗುತ್ತಿದ್ದು, ವಕೀಲರೊಂದಿಗೆ ನೇರ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮಗೆ ವಿಡಿಯೋ ಕಾನ್ಫರೆನ್ಸ್ ಬದಲಾಗಿ ಖುದ್ದಾಗಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us