ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್; ಜೈಲಿನಲ್ಲಿ ಫಿಸಿಯೋಥೆರಪಿಗೆ ಮನವಿ

ಈ ಮೊದಲು ಬಳ್ಳಾರಿ ಜೈಲಿನಲ್ಲಿ ಇದ್ದಾಗ ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಅದೇ ಕಾರಣ ನೀಡಿ ಅವರು ಜಾಮೀನು ಪಡೆದುಕೊಂಡಿದ್ದರು. ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅವರಿಗೆ ಮತ್ತೆ ಬೆನ್ನು ನೋವು ಶುರುವಾಗಿದೆ. ಆದ್ದರಿಂದ ಅವರು ಫಿಸಿಯೋಥೆರಪಿಗೆ ಮನವಿ ಮಾಡಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್; ಜೈಲಿನಲ್ಲಿ ಫಿಸಿಯೋಥೆರಪಿಗೆ ಮನವಿ
Darshan
Edited By:

Updated on: Oct 28, 2026 | 3:10 PM

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಜೈಲಿನಲ್ಲಿ ಬೆನ್ನು ನೋವು ಮತ್ತೆ ಕಾಣಿಸಿಕೊಂಡಿದ್ದು, ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್ ಅವರು ತಮಗೆ ಸದ್ಯ ಇರುವ ಆರೋಗ್ಯ ಸಮಸ್ಯೆಯನ್ನು ಖುದ್ದಾಗಿ ನ್ಯಾಯಾಧೀಶರ ಮುಂದೆ ವಿವರಿಸಿದರು.

‘ಜೈಲಿನಲ್ಲಿ ವಿಪರೀತ ಚಳಿ ಇರುವುದರಿಂದ ಬೆನ್ನು ನೋವು ಮತ್ತೆ ಉಲ್ಬಣಗೊಂಡಿದೆ. ನೋವು ತೀವ್ರವಾಗಿರುವುದರಿಂದ ತಮಗೆ ಸೂಕ್ತ ಫಿಸಿಯೋಥೆರಪಿ ಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು’ ಎಂದು ದರ್ಶನ್ ಮನವಿ ಮಾಡಿಕೊಂಡರು. ದರ್ಶನ್ ಅವರ ಕೋರಿಕೆಯನ್ನು ಆಲಿಸಿದ ನ್ಯಾಯಾಲಯ, ಫಿಸಿಯೋಥೆರಪಿ ಚಿಕಿತ್ಸೆ ಒದಗಿಸುವ ಕುರಿತು ಜೈಲು ನಿಯಮಗಳ ಪ್ರಕಾರ ಸೂಕ್ತ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ಗಳೊಂದಿಗೆ ರಾಜಾತಿಥ್ಯ ಪಡೆದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿಯೂ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಕಾರಣ ನೀಡಿ ದರ್ಶನ್ ಹೈಕೋರ್ಟ್‌ನಿಂದ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು.

ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಸದ್ಯ ಜೈಲಿನಲ್ಲಿ ಚಳಿಯ ವಾತಾವರಣ ಹೆಚ್ಚಾಗಿರುವುದರಿಂದ ನೋವು ಮರಳಿ ಬಂದಿದ್ದು, ಫಿಸಿಯೋಥೆರಪಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಾರಿ ಅವರಿಗೆ ಫಿಸಿಯೋಥೆರಪಿ ಪಡೆಯುವ ಅವಕಾಶ ಸಿಗುತ್ತಾ ಅಥವಾ ಬೆನ್ನು ನೋವು ಹೆಚ್ಚಾದರೆ ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರಾ ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ: ‘ಅವನಿಗೆ ಧಮ್ ಇದ್ರೆ ಹೊರಗೆ ಬಂದಾಗ ನನ್ನ ಫೇಸ್ ಮಾಡಲಿ’: ಧನ್ವೀರ್ ಬಗ್ಗೆ ದರ್ಶನ್ ಗರಂ

ಈ ಮೊದಲು ದರ್ಶನ್ ಅವರು ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂಬ ಕಾರಣದಿಂದ ಜಾಮೀನು ಪಡೆದಿದ್ದರು. ಆದರೆ ಆಗ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿರಲಿಲ್ಲ. ಈಗ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿದ್ದಾರೆ. ಮತ್ತೆ ತಾವು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us