ಮತ್ತೆ ಮುಂದಕ್ಕೆ ಹೋಗತ್ತಾ ‘ಆರ್ಆರ್ಆರ್’ ರಿಲೀಸ್ ದಿನಾಂಕ? ಬಲವಾಯ್ತು ಪ್ರೇಕ್ಷಕರ ಅನುಮಾನ
‘ಆರ್ಆರ್ಆರ್’ ರಿಲೀಸ್ ಸಂದರ್ಭದಲ್ಲಿ ಒಮಿಕ್ರಾನ್ ಕಾಟದಿಂದ ಚಿತ್ರಮಂದಿರಗಳು ಬಂದ್ ಆದರೆ ಅಥವಾ ಶೇ.50ರಷ್ಟು ಆಕ್ಯುಪೆನ್ಸಿ ನಿಯಮ ಜಾರಿಯಾದರೆ ಚಿತ್ರದ ಕಲೆಕ್ಷನ್ಗೆ ದೊಡ್ಡ ಪೆಟ್ಟು ಬೀಳಲಿದೆ. ಇದು ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ.

ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಆರ್ಆರ್ಆರ್’ (RRR Movie) ಚಿತ್ರಕ್ಕೆ ಸದ್ಯ ಮೊದಲ ಸ್ಥಾನವಿದೆ. ಈ ಸಿನಿಮಾದ ಬಗೆಗಿನ ಕ್ರೇಜ್ ದಿನದಿನವೂ ಹೆಚ್ಚುತ್ತಿದೆ. ನಿರ್ದೇಶಕ ರಾಜಮೌಳಿ (Rajamouli) ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ರಾಮ್ ಚರಣ್ (Ram Charan) ಮತ್ತು ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಪೋಸ್ಟರ್ಗಳು ಭಾರಿ ಹೈಪ್ ಸೃಷ್ಟಿ ಮಾಡಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2022ರ ಜ.7ರಂದು ‘ಆರ್ಆರ್ಆರ್’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಬೇಕು. ಆದರೆ ದೇಶದಲ್ಲಿ ಒಮಿಕ್ರಾನ್ (Omicron) ಹಾವಳಿ ಶುರು ಆಗುತ್ತಿರುವುದರಿಂದ ಈ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಎಂಬ ಅನುಮಾನ ಸೃಷ್ಟಿ ಆಗಿದೆ. ‘ಆರ್ಆರ್ಆರ್’ ಟ್ರೇಲರ್ (RRR Trailer) ಡಿ.3ರಂದು ಬಿಡುಗಡೆ ಆಗಬೇಕಿತ್ತು. ಅದನ್ನು ಮುಂದೂಡಲಾಗಿದೆ.
ಟ್ರೇಲರ್ಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ ಟ್ರೇಲರ್ ಬಿಡುಗಡೆ ಮುಂದೂಡಲಾಗಿರುವ ವಿಚಾರವನ್ನು ‘ಆರ್ಆರ್ಆರ್’ ಚಿತ್ರದ ಅಧಿಕೃತ ಟ್ವಿಟರ್ ಖಾತೆ ಮೂಲಕವೇ ತಿಳಿಸಲಾಗಿದೆ. ಈ ನಿರ್ಧಾರಕ್ಕೆ ಸೂಕ್ತ ಕಾರಣ ಏನು ಎಂಬುದನ್ನು ಚಿತ್ರತಂಡ ತಿಳಿಸಿಲ್ಲ. ‘ಅನಿರೀಕ್ಷಿತ ಕಾರಣಗಳಿಂದಾಗಿ ನಾವು ಡಿ.3ರಂದು ಆರ್ಆರ್ಆರ್ ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇನೆ’ ಎಂದು ಟ್ವೀಟ್ ಮಾಡಲಾಗಿದೆ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಬಹುಕೋಟಿ ರೂಪಾಯಿ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ರಿಲೀಸ್ ಸಂದರ್ಭದಲ್ಲಿ ಒಮಿಕ್ರಾನ್ ಕಾಟದಿಂದ ಚಿತ್ರಮಂದಿರಗಳು ಬಂದ್ ಆದರೆ ಅಥವಾ ಶೇ.50ರಷ್ಟು ಆಕ್ಯುಪೆನ್ಸಿ ನಿಯಮ ಜಾರಿಯಾದರೆ ಚಿತ್ರದ ಕಲೆಕ್ಷನ್ಗೆ ದೊಡ್ಡ ಪೆಟ್ಟು ಬೀಳಲಿದೆ. ಆ ಕಾರಣಕ್ಕಾಗಿ ನಿರ್ಮಾಪಕರು ಒಮಿಕ್ರಾನ್ ಹಾವಳಿಯಿಂದ ತಪ್ಪಿಸಿಕೊಳ್ಳಲು ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೊಂಡರೂ ಅಚ್ಚರಿ ಏನಿಲ್ಲ.
Due to unforeseen circumstances we aren’t releasing the #RRRTrailer on December 3rd.
We will announce the new date very soon.
— RRR Movie (@RRRMovie) December 1, 2021
ಇತ್ತೀಚೆಗೆ ಈ ಸಿನಿಮಾದ ‘ಜನನಿ’ ಸಾಂಗ್ ರಿಲೀಸ್ ಮಾಡೋಕೆ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ‘ಎಲ್ಲರಿಗೂ ಸಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಾ?’ ಎಂದು ಕನ್ನಡದಲ್ಲಿಯೇ ರಾಜಮೌಳಿ ಮಾತು ಆರಂಭಿಸಿದ್ದರು. ‘ಎರಡು ವಿಷಯದಲ್ಲಿ ನೀವು ನನ್ನನ್ನು ಕ್ಷಮಿಸಬೇಕು. ಒಂದು ನನ್ನ ಕನ್ನಡದ ಬಗ್ಗೆ. ಎರಡು ನಿಮಗೆ ಸಂದರ್ಶನ ಕೊಡುತ್ತಾ ಇಲ್ಲ. ನಾನು ಮಾತ್ರ ಮಾತನಾಡುತ್ತಿದ್ದೇನೆ. ಮುಂದಿನ ತಿಂಗಳು ಟ್ರೇಲರ್ ರಿಲೀಸ್ ಆಗಲಿದೆ. ಬೆಂಗಳೂರಲ್ಲಿ ಗ್ರ್ಯಾಂಡ್ ಆಗಿ ಪ್ರೀರಿಲೀಸ್ ಇವೆಂಟ್ ಮಾಡಲು ನಿರ್ಧರಿಸಿದ್ದೇವೆ. ಆಗ ಜ್ಯೂ.ಎನ್ಟಿಆರ್, ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಕೂಡ ಇರ್ತಾರೆ’ ಎಂದಿದ್ದರು ರಾಜಮೌಳಿ.
ಇದನ್ನೂ ಓದಿ:
ರೌಡಿಸಂ ದೃಶ್ಯಕ್ಕೆ ಮಾದೇಶ್ವರನ ಹಾಡು; ‘ಗರುಡ ಗಮನ..’ ಬಗ್ಗೆ ಶಾಂತಮಲ್ಲಿಕಾರ್ಜುನ ಸ್ವಾಮಿ ಬಹಿರಂಗ ಪತ್ರ
ಪುನೀತ್ ಕಂಠದಲ್ಲಿ ಮೂಡಿ ಬಂದಿದ್ದ ‘ಬಾಡಿ ಗಾಡ್’ ಹಾಡು ರಿಲೀಸ್; ಅಪ್ಪು ಜೀವನಕ್ಕೆ ಹತ್ತಿರವಾಗಿದೆ ಸಾಹಿತ್ಯ