ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಕೆಲಸ ಒಪ್ಪಿಕೊಂಡ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್
Bankim Chandra Chatterjee Biopic: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್ ಕೆಲಸಗಳು ಚಾಲ್ತಿಯಲ್ಲಿವೆ. ವಿಜಯೇಂದ್ರ ಪ್ರಸಾದ್ ಅವರು ಸ್ಕ್ರಿಪ್ಟ್ ಬರೆಯಲು ಒಪ್ಪಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ಗಳು (Biopic) ಯಶಸ್ಸು ಕಾಣುತ್ತಿವೆ. ಆ ಕಾರಣದಿಂದ ನಿರ್ಮಾಪಕರು ಇಂಥ ಸಿನಿಮಾ ಮಾಡಲು ಉತ್ಸಾಹ ತೋರುತ್ತಿದ್ದಾರೆ. ನಿಜ ಜೀವನದಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್ ಜೋರಾಗಿದೆ. ದೊಡ್ಡ ಮಟ್ಟದಲ್ಲಿಯೇ ಇಂಥ ಚಿತ್ರಗಳನ್ನು ತಯಾರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು, ಖ್ಯಾತ ಸಾಹಿತಿಗಳು, ಯಶಸ್ವಿ ಉದ್ಯಮಿಗಳು, ಸಿನಿಮಾ ಜಗತ್ತಿನ ಸಾಧಕರು, ಕ್ರೀಡಾ ಲೋಕದ ಸೆಲೆಬ್ರಿಟಿಗಳು.. ಹೀಗೆ ಅನೇಕರ ಜೀವನದ ಕಥೆಯನ್ನು ಪರದೆ ಮೇಲೆ ಮೂಡಿಸುವ ಕೆಲಸ ಆಗುತ್ತಿದೆ. ಖ್ಯಾತ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ (Bankim Chandra Chatterjee) ಅವರ ಬಯೋಪಿಕ್ಗೆ ಈಗ ಸಿದ್ಧತೆ ನಡೆದಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಕಥೆಗಾರ ವಿಜಯೇಂದ್ರ ಪ್ರಸಾದ್ (Vijayendra Prasad) ಅವರು ಕೂಡ ಈ ಪ್ರಾಜೆಕ್ಟ್ನ ಭಾಗವಾಗಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರ ಬಯೋಪಿಕ್ಗೆ ಸ್ಕ್ರಿಪ್ಟ್ ಬರೆಯಲು ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ಹೈಪ್ ಸೃಷ್ಟಿ ಆಗಿದೆ.
ರಾಜಮೌಳಿ ಅವರ ಯಶಸ್ಸಿನಲ್ಲಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕೊಡುಗೆ ದೊಡ್ಡದಿದೆ. ಅವರ ಬಹುತೇಕ ಸಿನಿಮಾಗಳಿಗೆ ಕಥೆ ಬರೆದವರೇ ವಿಜಯೇಂದ್ರ ಪ್ರಸಾದ್. ‘ಮಗಧೀರ’, ‘ಬಜರಂಗಿ ಭಾಯಿಜಾನ್’, ‘ಬಾಹುಬಲಿ’, ‘ಆರ್ಆರ್ಆರ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಕಥೆ ಮೂಡಿಬಂದಿದ್ದು ವಿಜಯೇಂದ್ರ ಪ್ರಸಾದ್ ಅವರ ಲೇಖನಿಯಲ್ಲಿ. ಈಗ ಅವರು ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್ಗೆ ಸ್ಕ್ರಿಪ್ಟ್ ಬರೆಯಲು ಒಪ್ಪಿಕೊಂಡಿದ್ದಾರೆ.
ಭಾರತೀಯ ಸಾಹಿತ್ಯ ವಲಯಕ್ಕೆ ಬಂಕಿಮ್ ಚಂದ್ರ ಚಟರ್ಜಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರು ಬರೆದ ‘ವಂದೇ ಮಾತರಂ..’ ಗೀತೆಯು ಸ್ವಾತಂತ್ರ್ಯ ಹೋರಾಟದಲ್ಲಿ ದೇಶಭಕ್ತಿಯ ಭಾವ ಉಕ್ಕಿಸುವಲ್ಲಿ ಪ್ರಮಖ ಪಾತ್ರ ವಹಿಸಿತ್ತು. ಕವಿಯಾಗಿ, ಕಾದಂಬರಿಕಾರರಾಗಿ, ಪತ್ರಕರ್ತರಾಗಿ ಬಂಕಿಮ್ ಚಂದ್ರ ಚಟರ್ಜಿ ಸಾಧನೆ ಮಾಡಿದ್ದರು. ಅವರು ಬರೆದ ‘ಆನಂದ ಮಠ್’ ಕಾದಂಬರಿ ತುಂಬ ಫೇಮಸ್.
ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್ಗೆ ಈಗ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿವೆ. ವಿಜಯೇಂದ್ರ ಪ್ರಸಾದ್ ಅವರು ಸ್ಕ್ರಿಪ್ಟ್ ಬರೆಯಲು ಒಪ್ಪಿಕೊಂಡಿದ್ದಾರೆ ಎಂಬ ವಿಷಯ ಇತ್ತೀಚೆಗೆ ಬಹಿರಂಗ ಆಯಿತು. ಈ ಸಿನಿಮಾದ ಭಾಗವಾಗಿರುವುದಕ್ಕೆ ಅವರಿಗೆ ತುಂಬ ಖುಷಿ ಇದೆ. ಬಂಕಿಮ್ ಚಂದ್ರ ಚಟರ್ಜಿ ಅವರ ‘ಆನಂದ ಮಠ್’ ಪುಸ್ತಕವನ್ನು ಬಹಳ ಹಿಂದೆಯೇ ವಿಜಯೇಂದ್ರ ಪ್ರಸಾದ್ ಓದಿದ್ದರು. ಈಗ ಅದನ್ನು ಆಧರಿಸಿ ಸಿನಿಮಾ ಮಾಡುವ ಬಗ್ಗೆ ಮೊದಲು ವಿಷಯ ತಿಳಿದಾಗ ಅಚ್ಚರಿ ಆಯಿತು ಎಂದು ಅವರು ಹೇಳಿದ್ದಾರೆ. ರಾಮ್ ಕಮಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
‘ಆನಂದ ಮಠ್’ ಕೃತಿಯಲ್ಲಿನ ವಿವರಗಳು ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಸೂಕ್ತ ಎನಿಸುವುದಿಲ್ಲ ಎಂದು ವಿಜಯೇಂದ್ರ ಪ್ರಸಾದ್ ಅಂದುಕೊಂಡಿದ್ದರು. ಆದರೆ ನಿರ್ದೇಶಕ ರಾಮ್ ಕಮಲ್ ಅವರು ಅನೇಕ ಎಮೋಷನ್ಗಳನ್ನು ಸೇರಿಸಿ ಇದನ್ನೊಂದು ಕಮರ್ಷಿಯಲ್ ಸಿನಿಮಾ ಆಗಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಇದು ನನ್ನ ಕನಸಿನ ಪ್ರಾಜೆಕ್ಟ್ ಆಗಿದ್ದು, ಭಾರತದ ದೊಡ್ಡ ದೊಡ್ಡ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ’ ಎಂದು ರಾಮ್ ಕಮಲ್ ಹೇಳಿದ್ದಾರೆ. ‘1770- ಏಕ್ ಸಂಗ್ರಾಮ್’ ಎಂದು ಈ ಚಿತ್ರಕ್ಕೆ ಹೆಸರು ಇಡಲಾಗಿದೆ. ಹೈದರಾಬಾದ್, ಪಶ್ಚಿಮ ಬಂಗಾಳ ಮತ್ತು ಲಂಡನ್ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಬಂಕಿಮ್ ಚಂದ್ರ ಚಟರ್ಜಿ ಅವರು 128ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಈ ಬಯೋಪಿಕ್ ಅನೌನ್ಸ್ ಆಗಿದೆ. ‘ಆರ್ಆರ್ಆರ್’ ಸಿನಿಮಾದ ಯಶಸ್ಸಿನ ಬಳಿಕ ವಿಜಯೇಂದ್ರ ಪ್ರಸಾದ್ ಅವರು ‘1770- ಏಕ್ ಸಂಗ್ರಾಮ್’ ಚಿತ್ರತಂಡವನ್ನು ಸೇರಿಕೊಂಡಿರುವುದರಿಂದ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ:
ಸರೋಜಿನಿ ನಾಯ್ಡು ಬಯೋಪಿಕ್ನಲ್ಲಿ ಶಾಂತಿಪ್ರಿಯಾ, ಸೋನಲ್: ಪ್ಯಾನ್ ಇಂಡಿಯಾ ಚಿತ್ರಕ್ಕೆ ಕನ್ನಡಿಗನ ನಿರ್ದೇಶನ
ಲತಾ ಮಂಗೇಶ್ಕರ್ ಕುರಿತು ಬರಲಿದೆ ಬಯೋಪಿಕ್; ರೇಸ್ನಲ್ಲಿದ್ದಾರೆ ಖ್ಯಾತ ನಿರ್ದೇಶಕರು