ಸಮಂತಾ ಕೈ ಹಿಡಿದ ಈ ರಾಜ್ ನಿಡಿಮೋರು ಯಾರು? ಅವರು ಅಂತಿಂಥ ನಿರ್ದೇಶಕರಲ್ಲ
ನಟಿ ಸಮಂತಾ ರುಥ್ ಪ್ರಭು, 'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಮದುವೆಯಾಗಿದ್ದಾರೆ. ಈ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಯಾರು ಈ ರಾಜ್ ನಿಡಿಮೋರು? ಅವರು ಹೇಗೆ ಚಿತ್ರರಂಗದಲ್ಲಿ ಯಶಸ್ಸು ಕಂಡರು? ಸಮಂತಾ ಜೊತೆ ಅವರ ಪ್ರೀತಿ ಹಾಗೂ ಮದುವೆ ಹೇಗೆ ನಡೆಯಿತು ಎಂಬುದರ ಕುರಿತು ಇಲ್ಲಿ ವಿವರ ಇದೆ.

ಟಾಲಿವುಡ್ ನಟಿ ಸಮಂತಾ ರುಥ್ ಪ್ರಭು (Samantha) ವಿವಾಹ ಇಂದು (ಡಿಸೆಂಬರ್ 1) ನೆರವೇರಿದೆ. ಕೊಯಿಮತ್ತೂರಿನ ಇಶಾ ಫೌಂಡೇಷನ್ನಲ್ಲಿರುವ ಲಿಂಗ ಭೈರವಿ ದೇವಾಲಯದಲ್ಲಿ ಕೇವಲ 30 ಜನರ ಸಮ್ಮುಖದಲ್ಲಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಮದುವೆ ಆಗಿದ್ದಾರೆ. ಮದುವೆ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಹಾಗಾದರೆ,ಈ ರಾಜ್ ಯಾರು? ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ಏನು? ಆ ಬಗ್ಗೆ ಇಲ್ಲಿದೆ ವಿವರ.
ರಾಜ್ ನಿಡಿಮೋರು ಮತ್ತು ಡಿಕೆ (ಕೃಷ್ಣ ದಾಸರಕೋಟಪಲ್ಲಿ) ಜಂಟಿ ನಿರ್ದೇಶಕರು. ಇವರು 2003ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಿಂದಿಯಲ್ಲಿ ‘99’, ‘ಶೋರ್ ಇನ್ ದಿ ಸಿಟಿ’, ‘ಹ್ಯಾಪಿ ಎಂಡಿಂಗ್’, ‘ಎ ಜೆಂಟಲ್ಮೆನ್’, ರೀತಿಯ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕೆಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಇವರ ನಿರ್ಮಾಣದ ತೆಲುಗಿನ ‘ಸಿನಿಮಾ ಬಂಡಿ’ ಸಿನಿಮಾ ಸಾಕಷ್ಟು ಸದ್ದು ಮಾಡಿತು.ಸಿನಿಮಾ ಇವರಿಗೆ ಹೆಚ್ಚು ಜನಪ್ರಿಯತೆ ನೀಡಲಿಲ್ಲ. ಆದರೆ, ಒಂದೇ ಒಂದು ವೆಬ್ ಸರಣಿ ಇವರ ಬದುಕು ಬದಲಿಸಿತು. ಅದುವೆ ‘ದಿ ಫ್ಯಾಮಿಲಿ ಮ್ಯಾನ್’.
ಮನೋಜ್ ಬಾಜ್ಪಾಯಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ‘ದಿ ಫ್ಯಾಮಿಲಿ ಮ್ಯಾನ್’ ಮೊದಲ ಸೀಸನ್ 2019ರಲ್ಲಿ ಪ್ರಸಾರ ಕಂಡಿತು. ಇದನ್ನು ನಿರ್ದೇಶನ ಮಾಡಿದ್ದು ಇದೇ ರಾಜ್ ಹಾಗೂ ಡಿಕೆ. ಅಲ್ಲಿಂದ ಇವರ ಬದುಕು ಬದಲಾಯಿತು. ಎಲ್ಲರೂ ಇವರನ್ನು ಗುರುತಿಸೋಕೆ ಆರಂಭಿಸಿದರು. ವೆಬ್ ಸರಣಿ ಲೋಕದಲ್ಲಿ ‘ದಿ ಫ್ಯಾಮಿ ಮ್ಯಾನ್’ ಹೊಸ ಅಲೆಯನ್ನೇ ಸೃಷ್ಟಿ ಮಾಡಿತು. 2021ರಲ್ಲಿ ಇದಕ್ಕೆ ಎರಡನೇ ಸೀಸನ್ ಪ್ರಸಾರ ಕಂಡಿತು.
ಸೆಟ್ನಲ್ಲಿ ಪರಿಚಯ
ರಾಜ್ ಹಾಗೂ ಸಮಂತಾ ಪರಿಚಯ ಆಗಿದ್ದು ಇದೇ ವೆಬ್ ಸೀರಿಸ್ ಸೆಟ್ನಲ್ಲಿ. ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ನಲ್ಲಿ ಸಮಂತಾ ಅವರು ರಾಜಲಕ್ಷ್ಮೀ ಶೇಖರನ್ ಹೆಸರಿನ ಪಾತ್ರ ಮಾಡಿದ್ದರು. ಸೆಟ್ನಲ್ಲಿ ಇವರ ಮಧ್ಯೆ ಒಳ್ಳೆಯ ಒಡನಾಟ ಬೆಳೆಯಿತು. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ಸಮಂತಾ ಹಾಗೂ ರಾಜ್ ಸುತ್ತಾಟ ಜೋರಾಯಿತು. ಈಗ ಇಬ್ಬರೂ ಮದುವೆ ಆಗಿದ್ದಾರೆ.
ರಾಜ್ ಹಾಗೂ ಸಮಂತಾ ಅವರು ‘ಸಿಟಾಡೆಲ್: ಹನಿ ಬನಿ’ ಸರಣಿಯಲ್ಲೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಆದರೆ, ಈ ಸರಣಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ರಾಜ್ ಹಾಗೂ ಡಿಕೆ ‘ಫರ್ಜಿ’ ಹೆಸರಿನ ಸರಣಿ ಮಾಡಿದ್ದರು. ಇದು ಸೂಪರ್ ಹಿಟ್ ಆಯಿತು. ಇತ್ತೀಚೆಗೆ ‘ಫ್ಯಾಮಿಲಿ ಮ್ಯಾನ್ 3’ ಸರಣಿ ರಿಲೀಸ್ ಆಗಿದ್ದು ಸಾಕಷ್ಟು ಪ್ರಶಂಸೆ ಪಡೆದಿದೆ.
ರಾಜ್ ಹಿನ್ನೆಲೆ
ರಾಜ್ ಅವರು ಜನಿಸಿದ್ದು ಆಂಧ್ರಪ್ರದೇಶದ ತಿರುಪತಿಯಲ್ಲಿ. ಅವರು ಎಸ್ವಿಯು ಕಾಲೇಜ್ ಆಫ್ ಇಂಜಿನಿಯರಿಂಗ್ನನಲ್ಲಿ ಪದವಿ ಪಡೆದರು. ನಂತರ ಅಮೆರಿಕಕ್ಕೆ ತೆರಳಿ ಹೆಚ್ಚಿನ ಶಿಕ್ಷಣ ಪಡೆದರು. ಡಿಕೆ ಕೂಡ ಇಂಜಿನಿಯರಿಂಗ್ ಕ್ಷೇತ್ರದಲ್ಲೇ ಇದ್ದವರು.ಇಬ್ಬರೂ ಸಿನಿಮಾ ನಿರ್ದೇಶನಕ್ಕೆ ಇಳಿದರು.
ಇದನ್ನೂ ಓದಿ: ಎರಡನೇ ಮದುವೆ ಆದ ಸಮಂತಾ; ಕೆಲಸ ಮಾಡಿದ ನಿರ್ದೇಶಕನ ಜೊತೆ ಹೊಸಬಾಳು
2015ರಲ್ಲಿ ರಾಜ್ ಮೊದಲ ವಿವಾಹ
2015ರಲ್ಲಿ ರಾಜ್ ಹಾಗೂ ಶ್ಯಾಮಲಿ ವಿವಾಹ ಆದರು. ಆದರೆ, 2022ರಲ್ಲಿ ಇವರು ಬೇರೆ ಆದರು. ಶ್ಯಾಮಲಿ ಅವರು ಮನಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ರಾಜ್ ಬಾಳಲ್ಲಿ ಸಮಂತಾ ಬಂದಿದ್ದಕ್ಕೇ ಇಬ್ಬರೂ ಬೇರೆ ಆದರು ಎನ್ನುವ ಮಾತೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




