Yashoda: ಬಾಕ್ಸ್ ಆಫೀಸ್ನಲ್ಲಿ ಭರವಸೆ ಮೂಡಿಸಿದ ‘ಯಶೋದಾ’; 3 ದಿನದಲ್ಲಿ ಸಮಂತಾ ಸಿನಿಮಾದ ಕಲೆಕ್ಷನ್ ಎಷ್ಟು?
Yashoda Movie Collection: ‘ಯಶೋದಾ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಸೋಮವಾರದ (ನ.14) ಪರೀಕ್ಷೆಯಲ್ಲಿ ಈ ಸಿನಿಮಾ ಪಾಸ್ ಆಗತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾದವರಲ್ಲ. ಹಲವು ಬಗೆಯ ಪ್ರಯೋಗಗಳನ್ನು ಅವರು ಮಾಡುತ್ತಿದ್ದಾರೆ. ಹೀರೋ ಜೊತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಹೀರೋಯಿನ್ ಆಗುವ ಬದಲು ಮಹಿಳಾ ಪ್ರಧಾನ ಕಥೆಯುಳ್ಳ ಚಿತ್ರಗಳತ್ತ ಸಮಂತಾ ಗಮನ ಹರಿಸುತ್ತಿದ್ದಾರೆ. ಅವರು ನಟಿಸಿರುವ ‘ಯಶೋದಾ’ ಚಿತ್ರ (Yashoda Movie) ಇದಕ್ಕೆ ಲೇಟೆಸ್ಟ್ ಉದಾಹರಣೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಕೋಟ್ಯಂತರ ರೂಪಾಯಿ ಕಮಾಯಿ ಮಾಡುತ್ತಿದೆ. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ‘ಯಶೋದಾ’ ಬಾಕ್ಸ್ ಆಫೀಸ್ ಕಲೆಕ್ಷನ್ (Yashoda Box Office Collection) ಬಗ್ಗೆ ಇಲ್ಲಿದೆ ಮಾಹಿತಿ..
ನವೆಂಬರ್ 11ರಂದು ‘ಯಶೋದಾ’ ಚಿತ್ರ ರಿಲೀಸ್ ಆಯಿತು. ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲ. ಎಲ್ಲ ಸ್ಟಾರ್ ಹೀರೋಗಳು ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಆದರೆ ನಾಯಕಿ ಪ್ರಧಾನ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿದ್ದು ವಿರಳ. ಸಮಂತಾ ಅವರಿಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ಹಾಗಾಗಿ ‘ಯಶೋದಾ’ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಗಿದೆ. ನವೆಂಬರ್ 11ರಂದು ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್ನಲ್ಲಿ ಬಿಡುಗಡೆ ಆಯಿತು.
‘ಯಶೋದಾ’ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಮೂಲಗಳ ಪ್ರಕಾರ ವೀಕೆಂಡ್ನಲ್ಲಿ ಈ ಚಿತ್ರ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿದೆ. ಭಾನುವಾರ (ನ.13) ಭಾರತದ ಮಾರುಕಟ್ಟೆಯಲ್ಲಿ 3.50 ಕೋಟಿ ರೂಪಾಯಿ ಆದಾಯ ಬಂದಿದೆ. ಅಮೆರಿಕದಲ್ಲೂ ಇಷ್ಟೇ ಪ್ರಮಾಣದ ಕಲೆಕ್ಷನ್ ಆಗಿದೆ. ಒಟ್ಟಾರೆ ಮೂರು ದಿನಕ್ಕೆ 10 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈ ಚಿತ್ರಕ್ಕಾಗಿ ಸಮಂತಾ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಇದರಲ್ಲಿ ಅವರಿಗೆ ಎರಡು ಶೇಡ್ ಪಾತ್ರ ಇದೆ. ಬಾಡಿಗೆ ತಾಯಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಭರ್ಜರಿ ಸಾಹಸ ದೃಶ್ಯಗಳಲ್ಲೂ ಅವರು ಅಭಿನಯಿಸಿದ್ದಾರೆ. ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. ವಿಮರ್ಶಕರಿಂದ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಯಾವುದೇ ಚಿತ್ರಕ್ಕೆ ಸೋಮವಾರದ ಕಲೆಕ್ಷನ್ ಮುಖ್ಯವಾಗುತ್ತದೆ. ‘ಯಶೋದಾ’ ಸಿನಿಮಾ ಕೂಡ ಸೋಮವಾರದ (ನ.14) ಪರೀಕ್ಷೆಯಲ್ಲಿ ಪಾಸ್ ಆಗುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸಮಂತಾ ಕೈಯಲ್ಲಿ ಹಲವು ಆಫರ್ಗಳಿವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ‘ಶಾಕುಂತಲಂ’, ‘ಖುಷಿ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:53 am, Mon, 14 November 22