Samantha: ಅವಾಚ್ಯವಾಗಿ, ಅಶ್ಲೀಲವಾಗಿ ಟ್ರೋಲ್ ಮಾಡುವವರಿಗೆ ಕಿವಿ ಮಾತು ಹೇಳಿದ ಸಮಂತಾ
ಟಾಲಿವುಡ್ ನಟಿ ಸಮಂತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಟ್ರೋಲಿಗರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೇ ಅವರಿಗೆ ಪ್ರಸ್ತುತ ಬರುತ್ತಿರುವ ಪಾತ್ರಗಳ ಕುರಿತಂತೆಯೂ ಮಾತನಾಡಿದ್ದಾರೆ.

ಟಾಲಿವುಡ್ ತಾರೆ ಸಮಂತಾ ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರೀಸ್ ಮೂಲಕ ದೇಶಾದ್ಯಂತ ಖ್ಯಾತಿಯನ್ನು ಹೆಚ್ಚಿಸಿಕೊಂಡರು. ಅಲ್ಲದೇ ಆ ಸೀರೀಸ್ನಲ್ಲಿ ಸಮಂತಾ ನಿರ್ವಹಿಸಿದ್ದ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ನಂತರದಲ್ಲಿ ಅವರ ಸ್ಕ್ರಿಪ್ಟ್ ಆಯ್ಕೆಯಲ್ಲಿ ಬದಲಾಗಿದ್ದು, ಪಾತ್ರಾಧಾರಿತ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪತಿ ನಾಗಚೈತನ್ಯ ಅವರಿಂದ ಬೇರ್ಪಟ್ಟ ನಂತರ ಕೂಡ ಸಮಂತಾ ಸಂಬಂಧದ ಕುರಿತಾಗಿ ಸಖತ್ ಸುದ್ದಿಯಲ್ಲಿದ್ದರು. ಆದರೆ ಅವರ ಈ ವೈಯಕ್ತಿಕ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಒಳಗಾಯಿತು. ಅಲ್ಲದೇ, ಬಹಳಷ್ಟು ನೆಟ್ಟಿಗರು ಈಗಲೂ ಸಮಂತಾರನ್ನು ಅವಾಚ್ಯವಾಗಿ, ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತಂತೆ ಸಮಂತಾ ಮೌನ ಮುರಿದಿದ್ದು, ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಟೀಕೆಗಳು ಸುಸಂಸ್ಕೃತ ರೀತಿಯಲ್ಲಿರಬೇಕು ಎಂದು ಇದೇ ವೇಳೆ ಸಮಂತಾ ನೆಟ್ಟಿಗರಿಗೆ ಕಿವಿಮಾತು ಹೇಳಿದ್ದಾರೆ.
Elle Indiaಕ್ಕೆ ನೀಡಿರುವ ಸಂದರ್ಶನದಲ್ಲಿ ಸಮಂತಾ ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮಗೆದುರಾಗುತ್ತಿರವ ಟ್ರೋಲ್ ಕುರಿತಂತೆ ಮಾತನಾಡಿದ ಅವರು, ‘‘ಪ್ರತಿಯೊಬ್ಬರಿಗೂ ಮತ್ತೊಬ್ಬರ ಕುರಿತು ಭಿನ್ನಾಭಿಪ್ರಾಯಗಳಿರುತ್ತವೆ. ಅದಕ್ಕೂ ಮೀರಿ ಸ್ನೇಹ- ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ನಾನು ಅವರಿಗೆ (ಟ್ರೋಲ್ ಮಾಡುವವರಿಗೆ) ಕೇಳಿಕೊಳ್ಳುವುದಿಷ್ಟೇ. ನಿಮ್ಮ ಅನಿಸಿಕೆಗಳನ್ನು ಸುಸಂಸ್ಕೃತ ರೀತಿಯಲ್ಲಿ ಹಂಚಿಕೊಳ್ಳಿ’’ ಎಂದು ಹೇಳಿದ್ದಾರೆ. ಈ ಮೂಲಕ ಸಭ್ಯ ಭಾಷೆಯ ಮೂಲಕ ರಚನಾತ್ಮಕ ಟೀಕೆಗೆ ಸ್ವಾಗತವಿದೆ ಎಂದು ಸಮಂತಾ ನುಡಿದಿದ್ದಾರೆ. ಇತ್ತೀಚೆಗೆ ಕೈಗೊಂಡ ಚಾರ್ ಧಾಮ್ ಯಾತ್ರೆಯ ಕುರಿತಂತೆ ಮಾತನಾಡಿದ ಸಮಂತಾ, ಅದು ಮುಂದುವರೆಯಲು ಬಹಳಷ್ಟು ಶಕ್ತಿ ನೀಡಿದೆ ಎಂದು ಹೇಳಿದ್ದಾರೆ.
ಸಮಂತಾ ಸದ್ಯ ಬಹಳಷ್ಟು ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿದ್ದಾರೆ. ಪಾತ್ರದ ವೈಶಿಷ್ಟ್ಯವನ್ನು ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರು ವಿಘ್ನೇಶ್ ಶಿವನ್ ನಿರ್ದೇಶನದ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಕೂಡ ಕಾಣಿಸಿಕೊಂಡಿದ್ದಾರೆ. ಈರ್ವರು ದಕ್ಷಿಣ ಭಾರತದ ಖ್ಯಾತ ನಾಯಕಿಯರು ಒಟ್ಟಿಗೆ ಕಾಣಿಸಿಕೊಂಡಿರುವುದರ ಕುರಿತಂತೆ ಕೇಳಿದ ಪ್ರಶ್ನೆಗೆ ಸಮಂತಾ ಉತ್ತರಿಸಿದ್ದಾರೆ. ‘‘ಬಹಳಷ್ಟು ಬಾರಿ ಜನರು ಇಬ್ಬರು ನಾಯಕಿಯರು ಒಂದೇ ಚಿತ್ರದಲ್ಲಿದ್ದಾರೆಂದರೆ ಕಿತ್ತಾಡುತ್ತಾರೆ ಎಂದು ಭಾವಿಸತ್ತಾರೆ. ಆ ರೀತಿ ಯೋಚನೆ ಮಾಡುವುದು ಬಹಳ ತಮಾಷೆಯಾಗಿದೆ. ವಿಘ್ನೇಶ್ ಶಿವನ್ ಈ ಚಿತ್ರದಲ್ಲಿ ನಯನತಾರಾ ಅವರಷ್ಟೇ ಪ್ರಮುಖ ಪಾತ್ರ ತನ್ನದಾಗಿರಲಿದೆ ಎಂದಿದ್ದರು. ಅದರಂತೆಯೇ ಚಿತ್ರವೂ ಮೂಡಿಬಂದಿದೆ. ಇದು ಬಹಳ ಸಮಾಧಾನಕರ ವಿಚಾರ’’ ಎಂದು ಸಮಂತಾ ಹೇಳಿದ್ದಾರೆ.
View this post on Instagram
ಇತ್ತೀಚೆಗೆ ಹೊಸ ಮಾದರಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕುರಿತಂತೆ ಮಾತನಾಡಿದ ಸಮಂತಾ, ಈ ಮೊದಲು ನಿರ್ವಹಿಸುತ್ತಿದ್ದ ಬಬ್ಲಿ, ಅಥವಾ ಪಾಪದ ಹುಡುಗಿಯ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದೆ. ಆದರೆ ಈಗ ಅತ್ಯುತ್ತಮ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ:
Shine Like A Rainbow: ಸಖತ್ ‘ಶೈನ್’ ಆಗುತ್ತಿದೆ ಸಾಫ್ಟ್‌ವೇರ್ ಇಂಜಿನಿಯರ್ನ ಈ ರ‍್ಯಾಪ್ ಸಾಂಗ್!




