ಮಿಸ್ಟರ್ 360 ಡಿಗ್ರಿ ಎಂದು ಖ್ಯಾತಿ ಪಡೆದ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ (Ab de Villiers) ಅವರು ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಅವರ ಎಂಟ್ರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಐಪಿಎಲ್ ಹರಾಜಿಗೂ ಮುನ್ನ ಅವರು ಬೆಂಗಳೂರಿಗೆ ಕಾಲಿಟ್ಟಿರುವುದು ಕುತೂಹಲ ಹೆಚ್ಚಿಸಿದೆ. ಅದಕ್ಕಿಂತಲೂ ಅಚ್ಚರಿ ಏನೆಂದರೆ, ಬರುಬರುತ್ತಲೇ ಅವರು ‘ಕಾಂತಾರ’ ಸಿನಿಮಾ (Kantara Movie) ಬಗ್ಗೆ ಮಾತಾಡಿದ್ದಾರೆ. ಹೌದು, ರಿಷಬ್ ಶೆಟ್ಟಿ ಮತ್ತು ಎಬಿ ಡಿವಿಲಿಯರ್ಸ್ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ‘ಕಾಂತಾರ’ ಎಂದು ಕೂಗಿದ್ದಾರೆ. ಈ ವಿಡಿಯೋವನ್ನು ‘ಹೊಂಬಾಳೆ ಫಿಲ್ಮ್ಸ್’ ಮತ್ತು ರಿಷಬ್ ಶೆಟ್ಟಿ (Rishab Shetty) ಅವರು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇಬ್ಬರು ಸೆಲೆಬ್ರಿಟಿಗಳನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
‘ಕಾಂತಾರ’ ಚಿತ್ರ ದೇಶಾದ್ಯಂತ ಧೂಳೆಬ್ಬಿಸಿದೆ. ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದರೂ ಅನೇಕ ಕಡೆಗಳಲ್ಲಿ ಈಗಲೂ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ರಜನಿಕಾಂತ್, ಕಂಗನಾ ರಣಾವತ್, ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಸಿನಿಮಾ ಬಗ್ಗೆ ಮಾತಾಡಿದ್ದಾಗಿದೆ. ಈಗ ಎಬಿ ಡಿವಿಲಿಯರ್ಸ್ ಬಾಯಲ್ಲೂ ಈ ಚಿತ್ರದ ಹೆಸರು ಕೇಳಿ ಅಭಿಮಾನಿಗಳಿಗೆ ಥ್ರಿಲ್ ಆಗಿದೆ.
ಎಬಿ ಡಿವಿಲಿಯರ್ಸ್ ‘ಕಾಂತಾರ’ ನೋಡಿದ್ದಾರೋ ಇಲ್ಲವೋ ಎಂಬುದು ಖಚಿತ ಆಗಿಲ್ಲ. ಒಟ್ಟಿನಲ್ಲಿ ಅವರು ಪ್ರಮೋಷನ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದು ಪಂದ್ಯ. ನಿಜವಾದ 360ಯನ್ನು ಇಂದು ಭೇಟಿ ಮಾಡಿದ್ದೇನೆ. ನಮ್ಮ ಬೆಂಗಳೂರಿಗೆ ಸೂಪರ್ ಹೀರೋ ಮರಳಿ ಬಂದಿದ್ದಾರೆ’ ಎಂದು ರಿಷಬ್ ಶೆಟ್ಟಿ ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.
ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ರಿಷಬ್ ಶೆಟ್ಟಿ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರೂ ಕೂಡ ಕ್ಲೈಮ್ಯಾಕ್ಸ್ ತಜ್ಞರು. ಕೊನೆಯ 20 ನಿಮಿಷದಲ್ಲಿ ಸಖತ್ ಥ್ರಿಲ್ ನೀಡುತ್ತಾರೆ’ ಎಂದು ಫ್ಯಾನ್ಸ್ ಹೊಗಳಿದ್ದಾರೆ. ಬೆಂಗಳೂರಿನಲ್ಲಿ ಎಬಿ ಡಿವಿಲಿಯರ್ಸ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಆರ್ಸಿಬಿ ಪರವಾಗಿ 10 ಆವೃತ್ತಿಗಳಲ್ಲಿ ಐಪಿಎಲ್ ಆಡಿರುವ ಅವರು, ಇಲ್ಲಿನ ಜನರ ಹೃದಯ ಗೆದ್ದಿದ್ದಾರೆ. ಆದರೆ 2021ರಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದಾಗ ಅಭಿಮಾನಿಗಳಿಗೆ ಬೇಸರ ಆಗಿತ್ತು.
It’s a Match!
Met the real 360 today.
The #Superhero is back to the roots again to #NammaBengaluru.. ?#Kantara @RCBTweets @ABdeVilliers17 @VKiragandur @shetty_rishab @hombalefilms @gowda_sapthami@HombaleGroup @AJANEESHB @actorkishore @KantaraFilm pic.twitter.com/LUfovEcn0h— Rishab Shetty (@shetty_rishab) November 3, 2022
ಈ ವರ್ಷದ ಐಪಿಲ್ ಹರಾಜಿಗೂ ಮುನ್ನವೇ ಎಬಿ ಡಿವಿಲಿಯರ್ಸ್ ಅವರು ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡ ಅದ್ದೂರಿಯಾಗಿ ಸ್ವಾಗತಿಸಿದೆ. ಆರ್ಸಿಬಿಗೆ ಕೋಚ್ ಆಗಿ ಅವರು ಕಾರ್ಯ ನಿರ್ವಹಿಸಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Fri, 4 November 22