Dhamaka: ಸೆ.2ಕ್ಕೆ ‘ಧಮಾಕ’ ರಿಲೀಸ್; ಶಿವರಾಜ್ ಕೆಆರ್ ಪೇಟೆ ಚಿತ್ರಕ್ಕೆ ಸಾಥ್ ನೀಡಿದ ಅಭಿಷೇಕ್ ಅಂಬರೀಷ್
Abhishek Ambareesh | Shivaraj KR Pete: ‘ಟ್ರೇಲರ್ ಮತ್ತು ಕೆಲವು ದೃಶ್ಯಗಳನ್ನು ನೋಡಿದ್ದೇನೆ. ತುಂಬ ಚೆನ್ನಾಗಿ ಬಂದಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಧಮಾಕ ಸೃಷ್ಟಿ ಮಾಡಲಿ’ ಎಂದು ಅಭಿಷೇಕ್ ಅಂಬರೀಷ್ ಹಾರೈಸಿದ್ದಾರೆ.
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಶಿವರಾಜ್ ಕೆ.ಆರ್. ಪೇಟೆ (Shivaraj KR Pete) ಅಭಿನಯಿಸಿರುವ ‘ಧಮಾಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಸೆಪ್ಟೆಂಬರ್ 2ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇತ್ತೀಚೆಗೆ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಅದಕ್ಕೆ ನಟ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಶಿವರಾಜ್ ಕೆ.ಆರ್. ಪೇಟೆ ಮತ್ತು ಅಭಿಷೇಕ್ ಅಂಬರೀಷ್ ಸ್ನೇಹಿತರು. ಹಾಗಾಗಿ ಗೆಳೆಯನ ಸಿನಿಮಾದ ಕಾರ್ಯಕ್ರಮದಲ್ಲಿ ಅಂಬಿ ಪುತ್ರ ಕೈ ಜೋಡಿಸಿದ್ದಾರೆ. ‘ಧಮಾಕ’ (Dhamaka Kannada Movie) ಚಿತ್ರಕ್ಕೆ ಶುಭ ಕೋರುವುದರ ಜೊತೆಗೆ ತಮ್ಮಿಬ್ಬರ ಸ್ನೇಹದ ಬಗ್ಗೆ ಹಾಗೂ ಶಿವರಾಜ್ ಕೆ.ಆರ್. ಪೇಟೆ ಅವರ ವ್ಯಕ್ತಿತ್ವದ ಬಗ್ಗೆ ಅಭಿಷೇಕ್ ಹಾಡಿ ಹೊಗಳಿದರು.
‘ಶಿವರಾಜ್ ಕೆ.ಆರ್. ಪೇಟೆ ನನ್ನ ಗೆಳೆಯ. ತುಂಬ ಒಳ್ಳೆಯ ಮನುಷ್ಯ. ಅವರ ಬಗ್ಗೆ ನಾನು ಮಾತನಾಡಲೇಬೇಕು. ದೊಡ್ಡ ಕಲಾವಿದ ಆದರೂ ತುಂಬ ವಿನಯವಂತಿಕೆ ಇರುವಂತಹ ನಟ. ಕಿಂಚಿತ್ತೂ ಅಹಂ ಇಲ್ಲದೇ ನಮ್ಮ ಸಿನಿಮಾ ಶೂಟಿಂಗ್ಗೆ ಬರುತ್ತಾರೆ. ಶಿವಣ್ಣ ಶಿವಣ್ಣ ಅಂತ ನಾವು ಅವರನ್ನು ಬರಮಾಡಿಕೊಳ್ಳುವ ಖುಷಿಯಲ್ಲಿ ಇರುತ್ತೇವೆ’ ಎಂದು ತಮ್ಮ ಸ್ನೇಹದ ಬಗ್ಗೆ ಮಾತನಾಡಿದರು ಅಭಿಷೇಕ್ ಅಂಬರೀಷ್.
‘ಓರ್ವ ಕಲಾವಿದನಾಗಿ ಶಿವರಾಜ್ ಕೆ.ಆರ್. ಪೇಟೆ ಅವರು ಹಲವು ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಒಂದೇ ಬಗೆಯ ಪಾತ್ರಕ್ಕೆ ಗಂಟು ಬಿದ್ದಿಲ್ಲ. ಎಲ್ಲ ರೀತಿಯ ಪ್ರಯೋಗ ಮಾಡಿದ್ದಾರೆ. ಸಹ ಕಲಾವಿದನಾಗಿ ಮಾತ್ರವಲ್ಲದೇ ಹೀರೋ ಆಗಿಯೂ ಯಶಸ್ಸು ಕಂಡಿದ್ದಾರೆ. ಅವರು ನಮ್ಮ ಮಂಡ್ಯ ಜಿಲ್ಲೆಯ ಮಗ. ಕೆ.ಆರ್. ಪೇಟೆಯಿಂದ ಬಂದು ಕರ್ನಾಟಕದಾದ್ಯಂತ ಹೆಸರು ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಡೈರೆಕ್ಟರ್ ನಮ್ಮ ಮದ್ದೂರಿನವರು. ಅದು ನನ್ನ ಪಾಲಿಗೆ ವಿಶೇಷ. ಟ್ರೇಲರ್ ಮತ್ತು ಕೆಲವು ದೃಶ್ಯಗಳನ್ನು ನೋಡಿದ್ದೇನೆ. ತುಂಬ ಚೆನ್ನಾಗಿ ಬಂದಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಧಮಾಕ ಸೃಷ್ಟಿ ಮಾಡಲಿ’ ಎಂದು ಅಭಿಷೇಕ್ ಅಂಬರೀಷ್ ಹಾರೈಸಿದ್ದಾರೆ.
ಎಸ್.ಆರ್. ಮೀಡಿಯಾ ಪ್ರೊಡಕ್ಷನ್ ಬ್ಯಾನರ್‌ನಡಿ ಸುನೀಲ್ ಎಸ್. ರಾಜ್ ಮತ್ತು ಅನ್ನಪೂರ್ಣ ಪಾಟೀಲ್ ಅವರು ‘ಧಮಾಕ’ ಚಿತ್ರವನ್ನು ನಿರ್ಮಿಸಿದ್ದಾರೆ. ಲಕ್ಷ್ಮೀ ರಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಹಾಲೇಶ್ ಎಸ್. ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಘು ಆರ್. ಕಜೆ ನೃತ್ಯ ನಿರ್ದೇಶನ, ವಿನಯ್ ಕೂರ್ಗ್ ಸಂಕಲನ ಈ ಚಿತ್ರಕ್ಕಿದೆ. ಹಾಡು ಮತ್ತು ಟ್ರೇಲರ್ ಮೂಲಕ ‘ಧಮಾಕ’ ಚಿತ್ರ ಗಮನ ಸೆಳೆದಿದೆ. ಶಿವರಾಜ್ ಕೆ.ಆರ್. ಪೇಟೆ ಅವರಿಗೆ ಜೋಡಿಯಾಗಿ ನಯನಾ ಅಭಿನಯಿಸಿದ್ದಾರೆ. ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಅರುಣಾ ಬಾಲರಾಜ್, ಸಿದ್ದು ಮೂಲಿಮನಿ, ಪ್ರಿಯಾ ಜೆ. ಆಚಾರ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.