
ನಟ ಧನ್ವೀರ್ ಗೌಡ ವಿರುದ್ಧದ ಕಾನೂನು ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಟ ಝೈದ್ ಖಾನ್ ವಿರುದ್ಧ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿ ನಿಂದಿಸಿರುವ ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರನ್ನು ಆಧರಿಸಿ ಪೊಲೀಸರು ಧನ್ವೀರ್ಗೆ ನೋಟಿಸ್ ನೀಡಿದ್ದರು. ಈ ನೊಟಿಸ್ಗೆ ಧನ್ವೀರ್ ಕ್ಯಾರೇ ಎನ್ನುತ್ತಿಲ್ಲ.
ಧನ್ವೀರ್ ಗೌಡ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಕಳೆದ ಕೆಲವು ದಿನಗಳಿಂದ ತೀವ್ರ ವಿವಾದ ಭುಗಿಲೆದ್ದಿದೆ. ಈ ಜಟಾಪಟಿಯ ಮಧ್ಯೆಯೇ ನಟ ಧನ್ವೀರ್ ಅವರು ಝೈದ್ ಖಾನ್ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಈ ಆಡಿಯೋ ಬೆನ್ನಲ್ಲೇ ಝೈದ್ ಖಾನ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಚಾಮರಾಜಪೇಟೆ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ನಟ ಧನ್ವೀರ್ ಅವರಿಗೆ ಪೊಲೀಸರು ಮೊದಲ ನೋಟಿಸ್ ಜಾರಿ ಮಾಡಿದ್ದರು. ಆದರೆ, ನೀಡಿದ ಸಮಯಕ್ಕೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗದೆ ನಟ ಧನ್ವೀರ್ ಗೈರಾಗುವ ಮೂಲಕ ನೋಟಿಸ್‌ಗೆ ಯಾವುದೇ ಕ್ಯಾರೇ ಎಂದಿಲ್ಲ. ಅವರಿಗೆ 2ನೇ ನೋಟಿಸ್ ಜಾರಿಗೊಳಿಸಲು ಚಾಮರಾಜಪೇಟೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ನಟ ಧನ್ವೀರ್ ವಿರುದ್ಧ ಕೋರ್ಟ್ನಲ್ಲಿ ಮಾನನಷ್ಟ ದೂರು ದಾಖಲು ಮಾಡಿದ ವಿಜಯಲಕ್ಷ್ಮಿ
ಇನ್ನೊಂದೆಡೆ, ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಎಫ್‌ಐಆರ್‌ಗಳು ಹಾಗೂ ದೂರುಗಳು ದಾಖಲಾಗಿವೆ. ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿಮಾನಿಗಳು ಹಾಗೂ ಬೆಂಬಲಿಗರು ಧನ್ವೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 2ನೇ ನೋಟಿಸ್‌ಗಾದರೂ ಧನ್ವೀರ್ ವಿಚಾರಣೆಗೆ ಹಾಜರಾಗುತ್ತಾರಾ ಎಂಬುದನ್ನು ಕಾಯ್ದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.