ಒಂದೇ ಸಿನಿಮಾದಲ್ಲಿ 50 ಪಾತ್ರ ಮಾಡಲಿರುವ ಕಮಲ್ ರಾಜ್; 3 ಸಿನಿಮಾ ಘೋಷಣೆ
ನಟ, ನಿರ್ಮಾಪಕ ಕಮಲ್ ರಾಜ್ ಅವರು ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದೇ ಸಿನಿಮಾದಲ್ಲಿ ಅವರು 50 ಪಾತ್ರಗಳನ್ನು ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಲಾಯಿತು. ಪ್ರಿಯಾಂಕಾ ಉಪೇಂದ್ರ, ನಾಗೇಂದ್ರ ಪ್ರಸಾದ್, ಸಾಯಿಪ್ರಕಾಶ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು.

ಕಮಲ್ ರಾಜ್ ನಟಿಸುತ್ತಿರುವ 3 ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ ಅವರು ‘ದ ಸೂಟ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಈಗ ಒಟ್ಟಿಗೇ 3 ಸಿನಿಮಾಗಳನ್ನು ಆರಂಭಿಸಿದ್ದಾರೆ. ‘ಮೊಹಬ್ಬತ್ ಜಿಂದಾಬಾದ್’, ‘ಟಾಸ್ಕ್’, ‘ನಾಳೆ ನಮ್ಮ ಭರವಸೆ’ (Nale Namma Bharavase) ಎಂಬುದು ಆ 3 ಹೊಸ ಸಿನಿಮಾಗಳ ಶೀರ್ಷಿಕೆ. ಈ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಮಲ್ ರಾಜ್ (Kamal Raj) ಅವರು ‘ಕಮಲ್ ಫಿಲ್ಮ್ಸ್’ ಬ್ಯಾನರ್ ಮೂಲಕ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇದರಲ್ಲಿ ‘ಮೊಹಬ್ಬತ್ ಜಿಂದಾಬಾದ್’ ಹಿಂದಿ ಸಿನಿಮಾ ಎಂಬುದು ವಿಶೇಷ.
ಮೂರು ಸಿನಿಮಾಗಳ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ವಿ. ನಾಗೇಂದ್ರಪ್ರಸಾದ್, ಸಾಯಿಪ್ರಕಾಶ್, ರವಿ ಶ್ರೀವತ್ಸ, ಉಮೇಶ್ ಬಣಕಾರ್, ಪ್ರಿಯಾಂಕಾ ಉಪೇಂದ್ರ ಮುಂತಾದವರು ಭಾಗಿಯಾಗಿದ್ದರು. ‘ನಾಳೆ ನಮ್ಮ ಭರವಸೆ’ ಸಿನಿಮಾವನ್ನು 10 ನಿರ್ದೇಶಕರು ಒಟ್ಟಿಗೆ ನಿರ್ದೇಶನ ಮಾಡಲಿದ್ದಾರೆ. ಇದೇ ಸಿನಿಮಾದಲ್ಲಿ ಕಮಲ್ ರಾಜ್ ಅವರು ಬರೋಬ್ಬರಿ 50 ಪಾತ್ರಗಳನ್ನು ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಮಲ್ ರಾಜ್ ಮಾತನಾಡಿದರು. ‘ಈ ಮೊದಲು ನಾನು ದಿ ಸೂಟ್ ಸಿನಿಮಾದಲ್ಲಿ ಅಭಿನಯಿಸಿದ್ದೆ. ‘ನಾಳೆ ನಮ್ಮ ಭರವಸೆ’ ಸಿನಿಮಾದಲ್ಲಿ 50 ಪಾತ್ರಗಳನ್ನು ಮಾಡುತ್ತಿದ್ದೇನೆ. 75 ದೃಶ್ಯಗಳಿರುವ ಈ ಸಿನಿಮಾವನ್ನು ಹತ್ತು ಡೈರೆಕ್ಟರ್ಗಳು ನಿರ್ದೇಶಿಸಲಿದ್ದಾರೆ. ‘ಮೊಹಬ್ಬತ್ ಜಿಂದಾಬಾದ್’ ಸಿನಿಮಾದಲ್ಲಿ 14 ಹಾಡುಗಳಿವೆ. ಬಾಲಿವುಡ್ನ ಹಲವಾರು ಕಲಾವಿದರು ನಟಿಸುತ್ತಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ’ ಎಂದು ಅವರು ಹೇಳಿದರು.
‘ಈಗಾಗಲೇ 3 ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಈ ಸಿನಿಮಾಗಳಲ್ಲಿ ನಾನು ಲವರ್‌ಬಾಯ್, ಡಿಟೆಕ್ಟಿವ್ ಮುಂತಾದ ಪಾತ್ರಗಳನ್ನು ಮಾಡುತ್ತಿದ್ದೇನೆ. ನಾನು 40ಕ್ಕೂ ಅಧಿಕ ಸಿನಿಮಾಗಳಿಗೆ ಬಂಡವಾಳ ಹೂಡಿದ್ದು, ಅವುಗಳಲ್ಲಿ ಒಂದು ಸಿನಿಮಾ ರಿಲೀಸ್ ಆಗಿದೆ. ಹಾಗಾಗಿ ಚಿತ್ರರಂಗದ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ’ ಎಂದು ಕಮಲ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಮಾಲಾಶ್ರೀ ಪುತ್ರಿ ಆರಾಧನಾಗೆ ‘ನೆಕ್ಸ್ಟ್ ಲೆವೆಲ್’ ಅವಕಾಶ; ಉಪೇಂದ್ರ ಜೊತೆ ಸಿನಿಮಾ
‘ಟಾಸ್ಕ್’ ಸಿನಿಮಾವನ್ನು ಐವರು ನಿರ್ದೇಶನ ಮಾಡಲಿದ್ದಾರೆ. ಆ ಪೈಕಿ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ಒಂದು ಕಥೆಗೆ ನಿರ್ದೇಶನ ಮಾಡಲಿದ್ದಾರೆ. ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ಕಮಲ್ ಅವರು ನನಗೆ ಒಂದು ಸಮಾರಂಭದಲ್ಲಿ ಪರಿಚಯ ಆದರು. 200 ಮಿನಿ ಥಿಯೇಟರ್ ಮಾಡುವ ಪ್ಲಾನ್ ಅವರಿಗೆ ಇದೆ. ಅವುಗಳಲ್ಲಿ ಬಹುತೇಕ ಕನ್ನಡ ಸಿನಿಮಾ ಪ್ರದರ್ಶಿಸುವ ಯೋಜನೆ ಕೇಳಿ ನನಗೆ ಬಹಳ ಖುಷಿ ಆಯಿತು’ ಎಂದರು. ಕಮಲ್ ರಾಜ್ ಅವರಿಗೆ ಇರುವ ಸಿನಿಮಾ ಪ್ರೀತಿಯನ್ನು ಉಮೇಶ್ ಬಣಕಾರ್, ನಾಗೇಂದ್ರ ಪ್ರಸಾದ್, ರವಿ ಶ್ರೀವತ್ಸ ಅವರು ಕೊಂಡಾಗಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




