Temper Movie: ‘ಟೆಂಪರ್’ ಟ್ರೇಲರ್ ರಿಲೀಸ್; ಇದು ಚಿಕ್ಕ ವಿಷಯಕ್ಕೂ ಕೋಪಗೊಳ್ಳುವ ಹುಡುಗನ ಕಹಾನಿ
Temper Kannada Movie Trailer: ಮಂಜುಕವಿ ನಿರ್ದೇಶನದ ‘ಟೆಂಪರ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಆರ್ಯನ್ ಸೂರ್ಯ, ಕಾಶಿಮಾ, ತಬಲ ನಾಣಿ, ಧನು ಯಲಗಚ್, ಮಜಾ ಟಾಕೀಸ್ ಪವನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡದ ‘ಟೆಂಪರ್’ ಸಿನಿಮಾದ ಟ್ರೇಲರ್ (Temper Kannada Movie Trailer) ಬಿಡುಗಡೆ ಆಗಿದೆ. ತೆಲುಗಿನಲ್ಲಿಯೂ ತೆರೆಗೆ ಬರಲು ಸಿದ್ಧವಾಗಿರುವ ಈ ಚಿತ್ರಕ್ಕೆ ಮಂಜುಕವಿ ನಿರ್ದೇಶನ ಮಾಡಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಅವರು ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡಿದ್ದಾರೆ. ಸೋಮವಾರ (ನ.28) ಚಲನಚಿತ್ರ ಕಲಾವಿದರ ಸಂಘದಲ್ಲಿ ಟ್ರೇಲರ್ ಅನಾವರಣ ಮಾಡಲಾಯಿತು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ, ಧ್ರುವ ರಾಜ್, ಬಸವರಾಜ್ ಬಣಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ‘ಟೆಂಪರ್’ (Temper Kannada Movie) ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ರಫಿ ಮೊದಲ ಬಾರಿಗೆ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ.
ಮಕ್ಕಳು ಚಿಕ್ಕವರಿದ್ದಾಗ ಸುಸಂಸ್ಕೃತರನ್ನಾಗಿ ಬೆಳೆಸದಿದ್ದರೆ ಅವರು ಭವಿಷ್ಯದಲ್ಲಿ ಸಮಾಜಕ್ಕೆ ಹೇಗೆ ಹೊರೆಯಾಗುತ್ತಾರೆ ಎನ್ನುವುದು ಚಿತ್ರದ ಕಥೆಯ ಎಳೆ. ತಂದೆ-ತಾಯಿ ಬಾಂಧವ್ಯದ ಜೊತೆ ಸ್ನೇಹದ ಬಗ್ಗೆಯೂ ಉತ್ತಮ ಸಂದೇಶ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘ಕುಟುಂಬಸಮೇತ ನೋಡಬಹುದಾದ ಚಿತ್ರವಿದು. ಹೊಡಿ-ಬಡಿ ದೃಶ್ಯಗಳು ಮಾತ್ರವಲ್ಲದೇ, ಅದರ ಜೊತೆಗೊಂದು ಪ್ರೇಮಕಥೆಯೂ ಇದೆ’ ಎಂದು ನಿರ್ದೇಶಕ ಮಂಜುಕವಿ ಹೇಳಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಕುಂದಾಪುರ ಸುತ್ತಮುತ್ತ 50 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
‘ನಾಯಕ ಚಿಕ್ಕ ಹುಡುಗನಾಗಿದ್ದಾಗಿಂದಲೂ ಸಣ್ಣ ವಿಷಯಕ್ಕೂ ತಕ್ಷಣ ಕೋಪಗೊಂಡು ಟೆಂಪರ್ ಆಗುತ್ತಾನೆ. ಆ ಗುಣ ಆತನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಚಿತ್ರದ ಮೂಲಕ ಹೇಳಿದ್ದೇವೆ’ ಎಂದು ಕಥೆಯ ಎಳೆ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ 5 ಹಾಡುಗಳನ್ನು ಮಂಜುಕವಿ ಅವರೇ ಬರೆದಿದ್ದಾರೆ.
ಮೊದಲ ಸಿನಿಮಾ ಆದ ಕಾರಣ ಹೀರೋ ಆರ್ಯನ್ ಸೂರ್ಯ ಅವರಿಗೆ ಆರಂಭದಲ್ಲಿ ಭಯ ಇತ್ತು. ತಬಲ ನಾಣಿ ಅವರು ಧೈರ್ಯ ತುಂಬಿದ್ದನ್ನು ಟ್ರೇಲರ್ ರಿಲೀಸ್ ವೇಳೆ ಆರ್ಯನ್ ನೆನಪಿಸಿಕೊಂಡರು. ಮೆಕ್ಯಾನಿಕ್ ಹುಡುಗನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ನಾಯಕಿ ಕಾಶಿಮಾ ಮೆಡಿಕಲ್ ಸ್ಟೂಡೆಂಟ್ ಹಾಗೂ ಊರ ಗೌಡನ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
‘ಮಂಜು ಪ್ರತಿಭಾವಂತ ಬರಹಗಾರ. ಸ್ನೇಹ ಮತ್ತು ಸಂಬಂಧದ ಸಾರವನ್ನು ಹೇಳುವ ಚಿತ್ರವಿದು. ಹಾಸ್ಯ ಇದ್ದರೂ ಮೆಚ್ಯೂರ್ ಆದಂತಹ ಪಾತ್ರವನ್ನು ನಾನು ಮಾಡಿದ್ದೇನೆ’ ಎಂದು ನಟ ಮಿತ್ರ ಹೇಳಿದ್ದಾರೆ. ಶ್ರೀಬಾಲಾಜಿ ಎಂಟರ್ಪ್ರೈಸಸ್ ಮೂಲಕ ವಿ. ವಿನೋದ್ ಕುಮಾರ್ ಹಾಗೂ ಮೋಹನ್ ಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪತ್ರಕರ್ತ ಧನು ಯಲಗಚ್ ಹಾಗೂ ಮಜಾ ಟಾಕೀಸ್ ಪವನ್ ಕುಮಾರ್ ಅವರು ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಬಲ ನಾಣಿ ಹಾಗೂ ಸುಧಾ ಬೆಳವಾಡಿ ಅವರು ನಾಯಕನ ತಂದೆ-ತಾಯಿಯಾಗಿ ನಟಿಸಿದ್ದಾರೆ. ನಾಯಕನ ಬಾಲ್ಯದ ಪಾತ್ರವನ್ನು ಮಾಸ್ಟರ್ ಪವನ್ ಮೋರೆ ಮಾಡಿದ್ದಾರೆ. ಆರ್. ಹರಿಬಾಬು ಸಂಗೀತ ನಿರ್ದೇಶನ, ಆರ್.ಕೆ. ಶಿವಕುಮಾರ್ ಅವರ ಛಾಯಾಗ್ರಹಣ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Tue, 29 November 22