Raymo: ‘ಕಾಂತಾರ ರೀತಿ ‘ರೇಮೊ’ ಹಿಟ್ ಆಗಲಿ’: ಟ್ರೇಲರ್ ರಿಲೀಸ್ ಮಾಡಿ ಮನಸಾರೆ ಹರಸಿದ ಶಿವಣ್ಣ
Raymo Movie Trailer: ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯ ‘ರೇಮೊ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ನವೆಂಬರ್ 25ರಂದು ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.
ಖ್ಯಾತ ನಿರ್ದೇಶಕ ಪವನ್ ಒಡೆಯರ್ (Pawan Wadeyar) ಅವರ ಬತ್ತಳಿಕೆಯಿಂದ ‘ರೇಮೊ’ ಸಿನಿಮಾ ಬರುತ್ತಿದೆ. ನವೆಂಬರ್ 25ರಂದು ಈ ಚಿತ್ರ ರಿಲೀಸ್ ಆಗಲಿದೆ. ಇಂದು (ನ.6) ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಅವರು ‘ರೇಮೊ’ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಈ ವೇಳೆ ಅವರು ಇಡೀ ಚಿತ್ರತಂಡಕ್ಕೆ ಮನಸಾರೆ ಶುಭ ಕೋರಿದ್ದಾರೆ. ‘ಕಾಂತಾರ’ ಚಿತ್ರದ ರೀತಿಯೇ ‘ರೇಮೊ’ ಸಿನಿಮಾ ಕೂಡ ಹಿಟ್ ಆಗಲಿ ಎಂದು ಶಿವಣ್ಣ ಹಾರೈಸಿದ್ದಾರೆ. ಅವರಿಂದ ಇಂಥ ಹಾರೈಕೆ ಸಿಕ್ಕಿದ್ದಕ್ಕೆ ಚಿತ್ರತಂಡ ಖುಷಿ ಆಗಿದೆ. ಈ ಸಿನಿಮಾದಲ್ಲಿ ಇಶಾನ್ (Ishan) ಮತ್ತು ಆಶಿಕಾ ರಂಗನಾಥ್ ಅವರು ಜೋಡಿಯಾಗಿ ನಟಿಸಿದ್ದಾರೆ. ಸಿ.ಆರ್. ಮನೋಹರ್ ಅವರು ಬಂಡವಾಳ ಹೂಡಿದ್ದಾರೆ.
‘ಕನ್ನಡ ಚಿತ್ರರಂಗ ಯಾರಿಗೂ ಕಮ್ಮಿ ಇಲ್ಲ. ಕಾಂತಾರ ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸಕ್ಸಸ್ ಪಡೆಯಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಆಶಿಕಾ ಅವರು ಮುದ್ದಾಗಿ ಕಾಣುತ್ತಿದ್ದಾರೆ. ಅವರಿಗೆ ದೇವರು ಇನ್ನೂ ಗೆಲುವು ನೀಡಲಿ. ಇಶಾನ್ ಮತ್ತು ಪವನ್ ಬಗ್ಗೆ ಹೇಳುವಂತೆಯೇ ಇಲ್ಲ. ಸಿ.ಆರ್. ಮನೋಹರ್ ಅವರಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು’ ಎಂದು ಶಿವಣ್ಣ ಹೇಳಿದ್ದಾರೆ.
‘ರೇಮೊ’ ಚಿತ್ರದ ಕೆಲಸ ಶುರುವಾಗಿ 3 ವರ್ಷ ಆಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ರಿಲೀಸ್ ಹೊಸ್ತಿಲಿನಲ್ಲಿ ಹೀರೋ ಇಶಾನ್ ಅವರು ಎಗ್ಸೈಟ್ ಆಗಿದ್ದಾರೆ. ‘ಚಿತ್ರರಂಗಕ್ಕೆ ಬಾ ಅಂತ ಸಲಹೆ ನೀಡಿದ್ದೇ ಶಿವಣ್ಣ. ಅವರೇ ನನಗೆ ಸ್ಫೂರ್ತಿ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ‘ರೇಮೊ’ ಚಿತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರ ಆಗಿರುತ್ತದೆ’ ಎಂದು ಇಶಾನ್ ಹೇಳಿದ್ದಾರೆ.
ನಟಿ ಆಶಿಕಾ ರಂಗನಾಥ್ ಅವರ ಪಾಲಿಗೂ ‘ರೇಮೊ’ ಚಿತ್ರ ಸ್ಪೆಷಲ್ ಆಗಿದೆ. ‘ಇಷ್ಟು ದಿನ ನನ್ನನ್ನು ಕ್ಯೂಟ್ ಹುಡುಗಿಯ ಪಾತ್ರದಲ್ಲಿ ನೀವೆಲ್ಲ ನೋಡಿದ್ರಿ. ಆದರೆ ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ. ನೀವೆಲ್ಲ ನೋಡಿ ಅದರ ಬಗ್ಗೆ ಹೇಳಬೇಕು. ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾಗಿ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಅದಕ್ಕೆ ನನ್ನನ್ನು ಸೆಲೆಕ್ಟ್ ಮಾಡಿದ್ದಕ್ಕೆ ಪವನ್ ಒಡೆಯರ್ ಅವರಿಗೆ ಧನ್ಯವಾದಗಳು’ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ.
ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಅವರು ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ, ವೈದಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಿ. ಗುಣಶೇಖರನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 pm, Sun, 6 November 22