‘ಅಶೋಕ್ ಕಶ್ಯಪ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ರು’: ಕುಮಾರ್ ಶ್ರೀನಿವಾಸಮೂರ್ತಿ ಆರೋಪ
Ashok Kashyap | BIFFES: ಸೋಶಿಯಲ್ ಮೀಡಿಯಾ ಮೂಲಕ ನಿರ್ಮಾಪಕ ಕುಮಾರ್ ಶ್ರೀನಿವಾಸಮೂರ್ತಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅಶೋಕ್ ಕಶ್ಯಪ್ ವಿರುದ್ಧ ಅವರು ಹಲ್ಲೆ ಆರೋಪ ಮಾಡಿದ್ದಾರೆ.
ಪ್ರತಿ ಬಾರಿ ಬೆಂಗಳೂರು ಸಿನಿಮೋತ್ಸವ (Bengaluru International Film Festival) ನಡೆಯುವಾಗಲೂ ಒಂದಷ್ಟು ಅಸಮಾಧಾನಗಳು ಕೇಳಿಬರುತ್ತವೆ. ಈ ಬಾರಿಯೂ ಅದು ತಪ್ಪಿಲ್ಲ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಅಶೋಕ್ ಕಶ್ಯಪ್ (Ashok Kashyap) ಅವರು ನಿರ್ಮಾಪಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವಾಶ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಕೆಲವು ಪ್ರಮುಖರು ಈ ಘಟನೆ ಬೆಳಕಿಗೆ ಬಾರದಂತೆ ತಡೆಯುವ ಪ್ರಯತ್ನ ಮಾಡಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಮಾರ್ಚ್ 25ರ ಸಂಜೆ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ನಿರ್ಮಾಪಕ ಕುಮಾರ್ ಶ್ರೀನಿವಾಸಮೂರ್ತಿ (Kumar Sreenivasamurthy) ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತಮಗೆ ಆಗಿರುವ ಹಲ್ಲೆ ವಿರುದ್ಧ ಕಾನೂನಿನ ಮೂಲಕ ಹೋರಾಡುವುದಾಗಿ ಅವರು ತಿಳಿಸಿದ್ದಾರೆ.
ನಿರ್ಮಾಪಕ ಕುಮಾರ್ ಶ್ರೀನಿವಾಸಮೂರ್ತಿ ಆರೋಪ ಏನು?
ಫೇಸ್ಬುಕ್ನಲ್ಲಿ ಕುಮಾರ್ ಶ್ರೀನಿವಾಸಮೂರ್ತಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಘಟನೆಯ ವಿವರ ನೀಡಿದ್ದಾರೆ. ‘ನಾನು ಒಬ್ಬ ಸಿನಿಮಾ ನಿರ್ಮಾಪಕ. ಸಿನಿಮಾದ ಬಗ್ಗೆ ಒಲವು ಹೊಂದಿದ್ದೇನೆ. ಚಿತ್ರರಂಗದ ಬಗ್ಗೆ ಕಾಳಜಿ ಇಟ್ಟುಕೊಂಡು ಒಂದಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇನೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಶೋಕ ಕಶ್ಯಪ್ ಅವರು ಶನಿವಾರ (ಮಾರ್ಚ್ 25) ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಕುಮಾರ್ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: BIFFES: ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಸೆಣೆಸಲಿರುವ ಕನ್ನಡ ಸಿನಿಮಾಗಳು
ಅಂದು ಒರಾಯನ್ ಮಾಲ್ನಲ್ಲಿ ನಡೆದಿದ್ದೇನು?
‘ಒರಾಯನ್ ಮಾಲ್ನಲ್ಲಿ ಗೋಲ್ಡ್ ಕ್ಲಾಸ್ ಪಕ್ಕದಲ್ಲಿ ಸಿನಿಮೋತ್ಸವ ನಡೆಸುವ ಆಫೀಸ್ ಇದೆ. ಮಾರ್ಚ್ 25ರ ಸಂಜೆ 6 ಗಂಟೆ 50 ನಿಮಿಷದಿಂದ 7 ಗಂಟೆ 10 ನಿಮಿಷದವರೆಗೆ ಏನೋ ಕೇಳುವ ಸಲುವಾಗಿ ನಾನು ಅಲ್ಲಿಗೆ ಹೋಗಿದ್ದೆ. ಒಬ್ಬರು ನಿರ್ಮಾಪಕರು ಮತ್ತು ಒಬ್ಬರು ಪತ್ರಕರ್ತರು ನನ್ನ ಜೊತೆ ಇದ್ದರು. ಕ್ಯಾಬಿನ್ ಒಳಗೆ ಕೂಡ ಹೋಗಿರಲಿಲ್ಲ. ಆಗ ಅಶೋಕ್ ಕಶ್ಯಪ್ ಅವರು ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಕುಮಾರ್ ಶ್ರೀನಿವಾಸಮೂರ್ತಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚು ಆದ್ಯತೆ
‘ನನ್ನ ಬೆನ್ನು ಮತ್ತು ಭುಜಕ್ಕೆ ಹೊಡೆದರು. ಕೆಟ್ಟ ಭಾಷೆ ಪ್ರಯೋಗ ಮಾಡಿದರು. ನಂತರ ನಾನು ಹೊರಗೆ ಬಂದೆ. ಹೊರಗೆ ಕೂಡ ಹಲ್ಲೆ ಮಾಡಿದರು. ಚಿತ್ರೋತ್ಸವ ನಿಲ್ಲಬಾರದು ಅಂತ ಒಂದಷ್ಟು ಪ್ರಮುಖರು ನನ್ನನ್ನು ಸಮಾಧಾನ ಮಾಡಿ ಕಳಿಸಿದರು. ಈ ವಿಚಾರವಾಗಿ ನಾನು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಈ ವಿಚಾರ ಎಲ್ಲ ಕನ್ನಡಿಗರಿಗೆ, ಚಿತ್ರರಂಗದವರಿಗೆ ತಿಳಿಯಲಿ’ ಎಂದು ಕುಮಾರ್ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.