ರಸ್ತೆ, ಪಾರ್ಕ್, ಮೈದಾನಕ್ಕೆ ಪುನೀತ್ ಹೆಸರು; ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳೋದೇನು?
Puneeth Rajkumar: ಬಳ್ಳಾರಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್ ಸೇರಿದಂತೆ ಬೆಂಗಳೂರಿನ ಕೆಲವು ರಸ್ತೆ, ಪಾರ್ಕ್, ಮೈದಾನಕ್ಕೆ ಪುನೀತ್ ರಾಜ್ಕುಮಾರ್ ಅವರ ಹೆಸರು ಇಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರ ಮೇಲೆ ಜನರು ಇಟ್ಟಂತಹ ಅಭಿಮಾನ ಅಪಾರ. ಹೃದಯಾಘಾತದಿಂದ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಅಪ್ಪು ಹೆಸರನ್ನು ಅಮರವಾಗಿಸಲು ಅಭಿಮಾನಿಗಳು ಹೊಸ ಅಭಿಯಾನ ಶುರು ಮಾಡಿದ್ದಾರೆ. ಹಲವು ರಸ್ತೆ, ವೃತ್ತ, ಪಾರ್ಕ್, ಮೈದಾನಕ್ಕೆ ಪುನೀತ್ ರಾಜ್ಕುಮಾರ್ ಹೆಸರು ಇಡಬೇಕು ಎಂದು ಮನವಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ.
‘ನಮಗೆ ನೇರವಾಗಿ ಯಾವುದೇ ಮನವಿ ಬಂದಿಲ್ಲ. ಆದರೆ ಮಾಧ್ಯಮಗಳಿಂದ ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಚರ್ಚೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಿಮವಾಗಿ ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರದ ಜೊತೆ ನಾವು ಚರ್ಚಿಸುತ್ತೇವೆ. ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ನಾನು ಭಾವಿಸುತ್ತೇನೆ’ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಈ ರೀತಿಯ ಕೆಲಸ ಆಗುತ್ತಿದೆ. ಶಿವಮೊಗ್ಗದ ಒಂದು ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. ಸಾಗರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಒಂದು ವೃತ್ತಕ್ಕೆ ‘ಪುನೀತ್ ರಾಜ್ಕುಮಾರ್ ವೃತ್ತ’ ಎಂದು ಹೆಸರು ಇಡಲಾಗಿದೆ. ಆ ಫೋಟೋಗಳು ಕೂಡ ವೈರಲ್ ಆಗಿವೆ. ಜನರ ಈ ಪ್ರೀತಿಗೆ ಡಾ. ರಾಜ್ ಕುಟುಂಬದ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.
ರಸ್ತೆ, ಪಾರ್ಕ್, ಮೈದಾನ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್ಕುಮಾರ್ ಅವರ ಹೆಸರು ಇಡಬೇಕು ಎಂದು ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದಾರೆ. ‘ಅಂಥ ಅಭಿಯಾನಕ್ಕೆ ನಾವೆಲ್ಲ ಬೆಂಬಲ ನೀಡೋಣ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:
‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಬೇಡ’: ಶಿವರಾಜ್ಕುಮಾರ್ ಮನವಿ
Published On - 11:13 am, Fri, 5 November 21