ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್ ಹಾಕಿದ್ದ ಇನ್ನಿಬ್ಬರ ಬಂಧನ
ತಮಗೆ ಅಶ್ಲೀಲ ಹಾಗೂ ಅಸಭ್ಯ ಕಮೆಂಟ್ ಮಾಡಿದ್ದವರ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಅವರು ದೂರು ನೀಡಿದ್ದರು. ಬೆಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈವರೆಗೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನಾಗರಾಜ್ ತಳವಾರ, ಪ್ರಶಾಂತ್ ತಳವಾರ, ನಿತಿನ್, ಚಂದ್ರು ಎಂಬುವವರ ಬಂಧನ ಆಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ..

ನಟ ದರ್ಶನ್ ತೂಗುದೀಪ (Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ್ ತಳವಾರ ಮತ್ತು ಪ್ರಶಾಂತ್ ತಳವಾರ ಎಂಬುದವರು ಬಂಧಿತರು. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಆಗಿರುವ ನಾಗರಾಜ್ ಹಾಗೂ ಧಾರವಾಡದಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ತಳವಾರ ಬಂಧನ ಆಗಿದೆ. ಆ ಮೂಲಕ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ.
ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಯಿತು. ಆ ಬಳಿಕ ತಮಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಬಂದಿದೆ ಎಂದು ಪೊಲೀಸರಿಗೆ ವಿಜಯಲಕ್ಷ್ಮಿ ದರ್ಶನ್ ಅವರು ದೂರು ನೀಡಿದ್ದರು. ಈ ಮೊದಲು ಚಂದ್ರು ಹಾಗೂ ನಿತಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಚಂದ್ರು ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಮತ್ತು ನಿತಿನ್ ದಾವಣಗೆರೆ ಮೂಲದ ಇಂಜಿನಿಯರ್ ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ದರ್ಶನ್ ಪತ್ನಿಗೆ ನಿಂದಿಸಿದ್ದ ಅನೇಕರಿಗೆ ಈಗ ನಡುಕ ಶುರು ಆಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ ಆನ್ಲೈನ್ನಲ್ಲಿ ಕೆಲವರು ಅಶ್ಲೀಲ ಪದ ಬಳಕೆ ಮಾಡಿದ್ದರು. ತಮಗೆ ಬಂದ ಕಮೆಂಟ್ಗಳ ಸ್ಕ್ರೀನ್ ಶಾಟ್ಗಳನ್ನು ವಿಜಯಲಕ್ಷ್ಮಿ ಅವರು ಜಗಜ್ಜಾಹೀರು ಮಾಡಿದ್ದರು. ಬಳಿಕ ದೂರು ದಾಖಲಿಸಿದ್ದರು.
ವಿಜಯಲಕ್ಷ್ಮಿ ದರ್ಶನ್ ಅವರು ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿನ ತನಕ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂಬ ವಿಷಯ ತಿಳಿದು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಬಂದು ಹೋದ ನಂತರ ತನಿಖೆ ಚುರುಕುಗೊಳಿಸಲಾಯಿತು. ಈಗ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಈ ಮೊದಲು ನಟಿ ರಮ್ಯಾ ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಶ್ಲೀಲ ಕಮೆಂಟ್ ಹಾಕಿದ್ದರು. ಅಂಥವರ ವಿರುದ್ಧ ದೂರು ನೀಡಲಾಗಿತ್ತು. ಪೊಲೀಸರು ಕೂಡಲೇ ಕ್ರಮ ತೆಗೆದುಕೊಂಡು ಹಲವರನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿಗಳಿಗೆ ಜಾಮೀನು ಸಿಕ್ಕಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:34 pm, Sun, 4 January 26



