ಮೂರನೇ ವ್ಯಕ್ತಿ ಜೊತೆ ನಿವೇದಿತಾ ಗೌಡ ಹೆಸರು ತಳುಕು; ಮೌನ ಮುರಿದ ಚಂದನ್ ಶೆಟ್ಟಿ
‘ಆ ವ್ಯಕ್ತಿ ಮತ್ತು ಅವರ ಹೆಂಡತಿಗೆ ನಾನು ಕೂಡ ಫೋನ್ ಮಾಡಿ ಕೇಳಿದ್ದೇನೆ. ಈ ರೀತಿ ವದಂತಿ ಹಬ್ಬಿದ್ದಕ್ಕೆ ಕ್ಷಮೆ ಇರಲಿ, ಬೇಸರ ಮಾಡಿಕೊಳ್ಳಬೇಡಿ ಅಂತ ನಾನು ಅವರಿಗೆ ಹೇಳಿದ್ದೇನೆ’ ಎಂದಿದ್ದಾರೆ ನಿವೇದಿತಾ ಗೌಡ. ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವ ಗಾಸಿಪ್ಗಳ ಬಗ್ಗೆ ಚಂದನ್ ಶೆಟ್ಟಿ ಕೂಡ ನೊಂದುಕೊಂಡು ಮಾತನಾಡಿದ್ದಾರೆ.
ನಟಿ ನಿವೇದಿತಾ ಗೌಡ ಅವರು ಗಾಯಕ ಚಂದನ್ ಶೆಟ್ಟಿ (Chandan Shetty) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹುಟ್ಟಿಕೊಂಡವು. ಅವುಗಳ ಬಗ್ಗೆ ಸ್ಪಷ್ಟನೆ ನೀಡಲು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸುದ್ದಿಗೋಷ್ಠಿ (Chandan Shetty Press Meet) ನಡೆಸಿದ್ದಾರೆ. ಮೂರನೇ ವ್ಯಕ್ತಿಯ ಜೊತೆ ನಿವೇದಿತಾ ಗೌಡ (Niveditha Gowda) ಅವರ ಹೆಸರು ತಳುಕು ಹಾಕಿಕೊಂಡಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಪೋಸ್ಟ್ಗಳು ಹರಿದಾಡುತ್ತಿವೆ. ಆ ಬಗ್ಗೆ ಮಾಜಿ ದಂಪತಿ ಸ್ಪಷ್ಟನೆ ನೀಡಿದ್ದಾರೆ.
‘ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ. ಯಾಕೆಂದರೆ ಆ ವ್ಯಕ್ತಿಯ ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದು. ಅವರ ಮನೆಗೆ ಹೋಗುವುದು ನನಗೂ ಖುಷಿ ಆಗುತ್ತಿತ್ತು. ಅವರ ಕಾರ್ಯಕ್ರಮಕ್ಕೆ ನಾವಿಬ್ಬರು ಅನೇಕ ಬಾರಿ ಹೋಗಿದ್ದೆವು. ಆ ವ್ಯಕ್ತಿಯ ಜೊತೆ ನಿವೇದಿತಾ ಗೌಡ ಅವರ ಹೆಸರು ಸೇರಿಸುವಂತಹ ವಿಕೃತ ಮನಸ್ಥಿತಿ ನಮ್ಮ ಕನ್ನಡಿಗರಾದ್ದಾಗಿರಬಾರದು’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ನಿವೇದಿತಾ ಗೌಡ ಕೂಡ ಮಾತನಾಡಿದ್ದಾರೆ. ‘ಆ ರೀತಿಯ ಪೋಸ್ಟ್ಗಳನ್ನು ನೋಡಿದಾಗ ನನಗೆ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್ ಮಾಡುತ್ತಾರೆ. ನಾನು ಕೂಡ ಅವರಿಗೆ ವಿಶ್ ಮಾಡುತ್ತೇನೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತ ಗೊತ್ತಿಲ್ಲ. ಇದರಿಂದ ಅವರ ಫ್ಯಾಮಿಲಿಯವರಿಗೆ ತುಂಬ ನೋವಾಗುತ್ತದೆ. ಲೈಕ್ಗಾಗಿ ಈ ರೀತಿ ಪೋಸ್ಟ್ ಮಾಡಬೇಡಿ’ ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಸುದ್ದಿಗೋಷ್ಠಿ ನೇರಪ್ರಸಾರ
‘ನಿವೇದಿತಾ ಗೌಡ ಅವರು ನನ್ನಿಂದ ಯಾವುದೇ ಜೀವನಾಂಶ ಕೇಳಿಲ್ಲ. ನಾನು ಕೊಟ್ಟಿಲ್ಲ. ಮಗು ಪಡೆಯುವ ವಿಚಾರದಲ್ಲಿ ನಾನು ನಿವೇದಿತಾಗೆ ಒತ್ತಾಯ ಮಾಡಿದ್ದೇನೆ ಎಂಬ ವದಂತಿ ಕೂಡ ಹಬ್ಬಿದೆ. ಅದು ಸಹ ನಿಜವಲ್ಲ. ನಾನು ಒತ್ತಾಯ ಮಾಡಿಲ್ಲ. ಮಕ್ಕಳ ವಿಚಾರದಲ್ಲಿ ನಿವೇದಿತಾ ಕೂಡ ನಿರಾಕರಿಸಿಲ್ಲ’ ಎಂದು ಚಂದನ್ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.