ಕನ್ನಡ ಸಿನಿಮಾಗೆ ‘ಎನ್ಟಿಆರ್’ ಶೀರ್ಷಿಕೆ; ಈ ಚಿತ್ರಕ್ಕೆ ಹಾಸ್ಯನಟ ಕೆಂಪೇಗೌಡ ಹೀರೋ
ಶೂಟಿಂಗ್ ಆರಂಭ ಆಗುವುದಕ್ಕಿಂತ ಮುನ್ನವೇ ಈ ಸಿನಿಮಾದ ಆಡಿಯೋ ಹಕ್ಕುಗಳು ‘ಆನಂದ್ ಆಡಿಯೋ’ ಸಂಸ್ಥೆಗೆ ಮಾರಾಟ ಆಗಿವೆ. ಆ ಬಗ್ಗೆ ಚಿತ್ರತಂಡಕ್ಕೆ ಹೆಚ್ಚು ಖುಷಿ ಇದೆ.
ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿರುವ ಕೆಂಪೇಗೌಡ (Kempegowda) ಅವರು ಹೀರೋ ಆಗಿ ಅಭಿನಯಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಆಗಿದೆ. ಈ ಚಿತ್ರಕ್ಕೆ ‘ಎನ್ಟಿಆರ್’ (NTR) ಎಂದು ಹೆಸರಿಡಲಾಗಿದೆ. ಟೈಟಲ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮಕ್ಕೆ ಖ್ಯಾತ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಅತಿಥಿಯಾಗಿ ಆಗಮಿಸಿದ್ದರು. ಅಷ್ಟಕ್ಕೂ ಎನ್ಟಿಆರ್ ಎಂದರೆ ಏನು? ಈ ಚಿತ್ರಕ್ಕೂ, ತೆಲುಗಿನ ನಟ ಎನ್ಟಿಆರ್ ಅವರಿಗೂ ಏನಾದರೂ ಸಂಬಂಧ ಇದೆಯಾ? ಯಾವುದೇ ಸಂಬಂಧ ಇಲ್ಲ. ಇಲ್ಲಿ ಎನ್ಟಿಆರ್ ಎಂದರೆ, ನಮ್ಮ ತಾಲೂಕಿನ ರೂಲರ್. ಅದನ್ನೇ ಶಾರ್ಟ್ ಆಗಿ ಎನ್ಟಿಆರ್ ಎಂದು ಶೀರ್ಷಿಕೆ ಮಾಡಲಾಗಿದೆ. ಭರತ್ ಗೌಡ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಜಾಕಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ.
ಶೀರ್ಷಿಕೆ ಅನಾವರಣದ ಬಳಿಕ ಪ್ರಜ್ವಲ್ ದೇವರಾಜ್ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ‘ಕೆಂಪೇಗೌಡ ಅವರ ಜೊತೆ ನಾನು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವರು ಈಗ ಎನ್ಟಿಆರ್ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಕೆಂಪೇಗೌಡ ಅವರು ದೊಡ್ಡ ನಟರೊಬ್ಬರ ಹೆಸರಿನ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅವರಷ್ಟೇ ಕೀರ್ತಿಶಾಲಿಯಾಗಲಿ’ ಎಂದು ಪ್ರಜ್ವಲ್ ದೇವರಾಜ್ ಹಾರೈಸಿದರು. ‘ಮಾಗಡಿ ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ. ಹಾಸ್ಯ ನಟ ಕೆಂಪೇಗೌಡ ಕೂಡ ಅವರಷ್ಟೇ ಹೆಸರು ಮಾಡಲಿ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಶುಭ ಕೋರಿದರು.
‘ಶೋಕಿವಾಲ’ ಸಿನಿಮಾವನ್ನು ನಿರ್ದೇಶನ ಮಾಡಿರುವ ಜಾಕಿ ಅವರಿಗೆ ‘ಎನ್ಟಿಆರ್’ ಎರಡನೇ ಸಿನಿಮಾ. ‘ಶೋಕಿವಾಲ’ ಸಿನಿಮಾ ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿದೆ. ಆ ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ಈ ಅವಕಾಶ ನೀಡಿದ್ದಕ್ಕಾಗಿ ನಿರ್ಮಾಪಕರಿಗೆ ಜಾಕಿ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಇದೊಂದು ಪಕ್ಕಾ ಹಳ್ಳಿ ಸೊಗಡಿನ ಮನರಂಜನಾ ಸಿನಿಮಾ. ಹಳ್ಳಿಯಲ್ಲಿ ನಡೆಯುವ ಜಾತ್ರೆ ಸುತ್ತಮುತ್ತಲಿನ ಕಥೆಯಾಗಿರುತ್ತದೆ. ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭ ಮಾಡುತ್ತೇನೆ’ ಎಂದಿದ್ದಾರೆ ನಿರ್ದೇಶಕರು.
ಶೂಟಿಂಗ್ ಆರಂಭ ಆಗುವುದಕ್ಕಿಂತ ಮುನ್ನವೇ ಈ ಸಿನಿಮಾದ ಆಡಿಯೋ ಹಕ್ಕುಗಳು ‘ಆನಂದ್ ಆಡಿಯೋ’ ಸಂಸ್ಥೆಗೆ ಮಾರಾಟ ಆಗಿವೆ. ಆ ಬಗ್ಗೆ ಚಿತ್ರತಂಡಕ್ಕೆ ಹೆಚ್ಚು ಖುಷಿ ಇದೆ. ‘ಜನಮನ ಗೆದ್ದಿರುವ ‘ಅಧ್ಯಕ್ಷ’, ‘ಕಿರಾತಕ’ ಚಿತ್ರಗಳ ರೀತಿ ನಮ್ಮ ಸಿನಿಮಾದಲ್ಲೂ ಹಳ್ಳಿಯ ಕಥೆ ಇದೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಾಧುಕೋಕಿಲ, ರವಿಶಂಕರ್, ತಬಲನಾಣಿ, ರಾಜೇಶ್ ನಟರಂಗ ಮುಂತಾದ ಕಲಾವಿದರು ನಮ್ಮ ಸಿನಿಮಾದಲ್ಲಿ ನಟಿಸಲಿದ್ದಾರೆ. ನಾಯಕಿ ಯಾರೆಂಬುದು ಶೀಘ್ರದಲ್ಲೇ ತಿಳಿಸುತ್ತೇನೆ’ ಎಂದಿದ್ದಾರೆ ನಟ ಕೆಂಪೇಗೌಡ.
ಗೋಸಾಯಿ ಮಠ ಶ್ರೀವೇದಾಂತಾಚಾರ್ಯ ಮಂಜುನಾಥ ಸ್ವಾಮಿಗಳು, ‘ಈ ಚಿತ್ರತಂಡಕ್ಕೆ ನಟರಾಜನ ಅನುಗ್ರಹವಾಗಲಿ’ ಎಂದು ಆಶೀರ್ವದಿಸಿದರು.
ಇದನ್ನೂ ಓದಿ:
‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್ ಬದಲಿಸಿ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್ ದೇವರಾಜ್
ಪುನೀತ್ ರಾಜ್ಕುಮಾರ್ಗಾಗಿ ಫ್ಯಾನ್ಸ್ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ