15 ಜನ ಸೇರಿ ಒಬ್ಬನಿಗೆ ಹೊಡೀತಿದ್ರು; ದರ್ಶನ್ ಮತ್ತು ಸ್ನೇಹಿತರ ಮೇಲೆ ಸಂದೇಶ್ ಸ್ಫೋಟಕ ಆರೋಪ
Sandesh Phone Audio: ಗಲಾಟೆ ಆದಾಗ ನಾನು ಬೈದೆ. 15 ಜನ ಸೇರಿಕೊಂಡು ಒಬ್ಬ ಕೆಲಸಗಾರನಿಗೆ ಹೊಡೆಯುವಾಗ ನೋಡ್ಕೊಂಡು ನಿಂತಿದ್ದೀರಲ್ಲ ನಾಚಿಕೆ ಆಗಲ್ವಾ ಎಂದು ನಾನು ಬೈಯ್ದಿದ್ದೆ ಎಂದು ಸಂದೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಲಭ್ಯವಾಗಿದೆ.
ನಟ ದರ್ಶನ್ ಹಲ್ಲೆ ಪ್ರಕರಣ ಕ್ಷಣಕ್ಷಣಕ್ಕೂ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದರು. ಅದಕ್ಕೆ ಪೂರಕ ಎಂಬಂತೆ ಈಗ ಒಂದು ಫೋನ್ ಕಾಲ್ ರೆಕಾರ್ಡ್ ಲಭ್ಯವಾಗಿದೆ. ವ್ಯಕ್ತಿಯೊಬ್ಬರ ಜೊತೆ ಹೋಟೆಲ್ ಮಾಲೀಕ ಸಂದೇಶ್ ಮಾತನಾಡಿರುವುದು ಎನ್ನಲಾದ ಫೋನ್ ಕಾಲ್ ರೆಕಾರ್ಡ್ ವೈರಲ್ ಆಗುತ್ತಿದೆ. ಅದರಲ್ಲಿ ದರ್ಶನ್ ಮತ್ತು ಅವರ ಸ್ನೇಹಿತರ ಬಗ್ಗೆ ಸಂದೇಶ್ ಕೆಲವು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.
‘ದರ್ಶನ್ಗೆ ನಾನು ಬುದ್ಧಿ ಹೇಳಿದ್ದೆ. ತೋಟಕ್ಕೆ ಬಾ ಅಂತ ನನ್ನನ್ನು ಕರೆದ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಅಂದೆ. ಈಗ ನಾನು ಆರಾಮಾಗಿ ಇದ್ದೇನೆ. ಅವನು ಫೋನ್ ಮಾಡಿದ್ದ ಎಂದು ಗೊತ್ತಾಗ ತಕ್ಷಣ ಡ್ಯಾಡಿ ಕೆಂಡಾಮಂಡಲ ಆಗಿದ್ದರು. ಮತ್ತೆ ಅವನು ಬಂದರೆ ಕಷ್ಟ. ಅವನು ತಪ್ಪು ಮಾಡಿರುವ ಗಿಲ್ಟ್ ಹಾಗೇ ಇರಲಿ. ಅವನು ಮತ್ತೆ ಬಂದರೆ ಹೋಟೆಲ್ ಸ್ಟಾಫ್ ಎದುರಲ್ಲಿ ಮತ್ತು ಗಾಂಧಿನಗರದಲ್ಲಿ ನನಗೆ ಬೆಲೆ ಇರುವುದಿಲ್ಲ ಅಂತ ಡ್ಯಾಡಿ ಹೇಳಿದ್ರು’ ಎಂದು ಸಂದೇಶ್ ಮಾತನಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ನಿರ್ಮಾಪಕ ಉಮಾಪತಿಗೆ ದರ್ಶನ್ ಬ್ಲಾಕ್ಮೇಲ್ ಮಾಡಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗುವ ರೀತಿಯಲ್ಲಿ ಸಂದೇಶ್ ಮಾತನಾಡಿದ್ದಾರೆ. ‘ಅವನು ಹುಡುಗಿ ಜೊತೆ ಫ್ಲರ್ಟ್ ಮಾಡಿರುವುದನ್ನು ಇಟ್ಟುಕೊಂಡು ನೀನು ಅವನ ಮನೆ ಹಾಳು ಮಾಡಿದರೆ ಅವನು ಸುಮ್ಮನೇ ಬಿಡುತ್ತಾನಾ? ನೀನು ಅವನನ್ನು ಬ್ಲಾಕ್ ಮೇಲ್ ಮಾಡೋಕೆ ಹೋಗ್ತಾ ಇದೀಯ. ತಪ್ಪು ಅದು. ನಿನ್ನದು ಒಂದು ನಿಮಿಷಕ್ಕೆ ಸಾವಿರ ಬರುತ್ತವೆ ಅಂತ ನಾನು ಹೇಳಿದ್ದೆ. ಈಗ ನಾನು ನಿರ್ಮಾಪಕರ ಪರ ಅಂತ ಹೇಳ್ತಾ ಇದಾನೆ. ಇದೆಲ್ಲ ಬೇಕಾ’ ಎಂದು ಸಂದೇಶ್ ಮಾತನಾಡಿದ್ದಾರೆ.
‘ಗಲಾಟೆ ಆದಾಗ ದರ್ಶನ್ ಗೆಳೆಯರು ನೋಡ್ತಾ ನಿಂತಿದ್ದರು. ಹರ್ಷನಿಗೆ ನಾನು ಬೈದೆ. 15 ಜನ ಸೇರಿಕೊಂಡು ಒಬ್ಬ ಕೆಲಸಗಾರನಿಗೆ ಹೊಡೆಯುವಾಗ ನೋಡ್ಕೊಂಡು ನಿಂತಿದ್ದೀರಲ್ಲ, ನೀವು ಒಬ್ಬ ಹೋಟೆಲ್ ಮಾಲೀಕರಾಗಿ ನಾಚಿಕೆ ಆಗಲ್ವಾ ಎಂದು ನಾನು ಬೈಯ್ದಿದ್ದೆ. ಅವರೆಲ್ಲ ಪೋಲಿಗಳು. ರಾಕೇಶ್ ಪಾಪಣ್ಣನ ಅಪ್ಪನಿಗೆ ಮೈಸೂರಿನಲ್ಲಿ ಒಂದು ರೂಪಾಯಿ ಬೆಲೆ ಇಲ್ಲ. ಹರ್ಷ ಊರು ತುಂಬ ಸಾಲ ಮಾಡಿಕೊಂಡಿದ್ದಾನೆ. ಅವನದ್ದು ಏನೂ ಸ್ವಂತ ಇಲ್ಲ. ಅದು ಬ್ಯುಸಿನೆಸ್. ತಪ್ಪು ಅಂತ ನಾನು ಹೇಳಲ್ಲ’ ಎಂದು ಸಂದೇಶ್ ಅವರು ಮಾತನಾಡಿರುವುದು ಫೋನ್ ಕಾಲ್ ರೆಕಾರ್ಡ್ ಮೂಲಕ ಗೊತ್ತಾಗಿದೆ.
ಇದನ್ನೂ ಓದಿ:
ದರ್ಶನ್ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು; ಅಂದು ಯಾವುದೇ ಜಗಳ ನಡೆದೇ ಇಲ್ಲ ಎಂದ ಗಂಗಾಧರ್
ದರ್ಶನ್ ಹಲ್ಲೆ ಪ್ರಕರಣ: ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ನಲ್ಲಿ ಗಂಗಾಧರ್ ಹೇಳಿಕೆ ಪಡೆದ ಪೊಲೀಸರು